Womens Reservation Bill fails in Lok Sabha: Outrage from womens activists
x

ಮಹಿಳಾ ಹೋರಾಟಗಾರ್ತಿಯರಾದ ಬಿ.ಟಿ. ಲಲಿತಾ ನಾಯಕ್‌, ಪ್ರಮೀಳಾ ನೇಸರ್ಗಿ ಹಾಗೂ ಮಾಳವಿಕ ಗುಬ್ಬಿವಾಣಿ

Women's Reservation| ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ವಿಫಲ: ಮಹಿಳಾ ಹೋರಾಟಗಾರರು ಏನನ್ನುತ್ತಾರೆ?

ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದೇ ಈ ವಿಧೇಯಕ ವಿಫಲವಾಗಲು ಕಾರಣ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ತಿಳಿಸಿದ್ಧಾರೆ.


Click the Play button to hear this message in audio format

ಲೋಕಸಭೆಯಲ್ಲಿ ಇತ್ತೀಚೆಗೆ ಮಂಡನೆಯಾದ ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ವಿಧೇಯಕ (ಮಸೂದೆ) ಬಿದ್ದುಹೋಗಿದ್ದು, ಈ ಕುರಿತು ದೇಶಾದ್ಯಂತ ಪರ-ವಿರೋಧ ಚರ್ಚೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ 'ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹಾಗೂ ಮಹಿಳಾಪರ ಹೋರಾಟಗಾರ್ತಿ ಮಾಳವಿಕಾ ಗುಬ್ಬಿವಾಣಿ ಅವರು ರಾಜಕೀಯ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧೇಯಕದ ಸೋಲಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಪುರುಷ ಪ್ರಧಾನ ಮನಸ್ಥಿತಿಯೇ ಕಾರಣ ಎಂದು ಅವರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ಪಕ್ಷಗಳ ವಿರುದ್ಧ ಲಲಿತಾ ನಾಯಕ್ ಕಿಡಿ

ಹಿರಿಯ ಹೋರಾಟಗಾರ್ತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರವು ತರಾತುರಿಯಲ್ಲಿ ಈ ವಿಧೇಯಕವನ್ನು ತಂದಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದರು. "ಮಹಿಳೆಯರ ಬಗ್ಗೆ ಕೇಂದ್ರ ಸರ್ಕಾರ ಅತಿಯಾದ ಪ್ರೀತಿ ತೋರಿಸುತ್ತಿದೆ ಎಂದರೆ ಅದರ ಬಗ್ಗೆ ಅನುಮಾನ ಬರುತ್ತದೆ. ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದೇ ಈ ವಿಧೇಯಕ ವಿಫಲವಾಗಲು ಕಾರಣ. ಈ ವಿಧೇಯಕ ಬಿದ್ದುಹೋಗುತ್ತದೆ ಎಂಬುದು ಅವರಿಗೂ ಮೊದಲೇ ಗೊತ್ತಿತ್ತು" ಎಂದು ಅವರು ಆರೋಪಿಸಿದರು.

ಮುಂದುವರಿದು ಮಾತನಾಡಿದ ಅವರು, "ನಮ್ಮ ದೇಶದಲ್ಲಿ ಇಂದಿಗೂ ಪುರುಷ ಪ್ರಧಾನ ಮನಸ್ಥಿತಿ ಇದೆ. ಮಹಿಳೆಯರನ್ನು ಕೀಳಾಗಿ ಕಾಣುವ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಪಂಚಾಯಿತಿ ಮಟ್ಟದಲ್ಲಿ ಮೀಸಲಾತಿ ಬಂದಾಗ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಈಗ ಮಹಿಳೆಯರು ಜಾಗೃತರಾಗಿದ್ದಾರೆ. ಶೇಕಡಾ 33 ಬೇಡ, ಕನಿಷ್ಠ 25-30ರಷ್ಟಾದರೂ ಮೀಸಲಾತಿ ಕೊಡಿ. ಆದರೆ, ರಾಜಕೀಯ ಪಕ್ಷಗಳಿಗೆ ಮಹಿಳೆಯರಿಗೆ ಅಧಿಕಾರ ಕೊಡುವ ಮನಸ್ಸಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಭಿಕ್ಷೆ ಬೇಡ, ಕಿತ್ತುಕೊಳ್ಳುತ್ತೇವೆ: ಪ್ರಮೀಳಾ ನೇಸರ್ಗಿ ಗುಡುಗು

ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಮಾತನಾಡಿ, ಮಹಿಳಾ ಮೀಸಲಾತಿಗಾಗಿ ರಾಜಕಾರಣಿಗಳ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ, ಅದನ್ನು ಹಕ್ಕಾಗಿ ಕಿತ್ತುಕೊಳ್ಳುತ್ತೇವೆ ಎಂದು ಗುಡುಗಿದರು. "2023ರಲ್ಲೇ ಈ ಕಾನೂನು ತಿದ್ದುಪಡಿಯಾಗಿದೆ. ಆದರೆ ಈಗ ಕ್ಷೇತ್ರ ವಿಂಗಡಣೆ (ಡಿಲಿಮಿಟೇಶನ್) ನೆಪವೊಡ್ಡಿ ಇದನ್ನು ಮುಂದೂಡಲಾಗುತ್ತಿದೆ. 2029ರ ಬದಲಾಗಿ ಈಗಿರುವ ಕ್ಷೇತ್ರಗಳಲ್ಲೇ ಮಹಿಳೆಯರಿಗೆ ಮೀಸಲಾತಿ ನೀಡಬಹುದು. ಆದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಗೆ ಮಹಿಳೆಯರು ಅಧಿಕಾರಕ್ಕೆ ಬರುವುದು ಇಷ್ಟವಿಲ್ಲ" ಎಂದರು.

ಮಹನೀಯರಿಗೆ ಎಚ್ಚರಿಕೆ ನೀಡಿದ ಅವರು, "ಮಹಿಳೆಯರೆಲ್ಲ ಒಗ್ಗೂಡಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಕಾಲ ದೂರವಿಲ್ಲ. ವಿಧೇಯಕವನ್ನು ವಿರೋಧಿಸಿದ ಪುರುಷ ನಾಯಕರಿಗೆ ಅವರ ಮನೆಯಲ್ಲಿ ಹೆಂಡತಿಯರು ಊಟ ಹಾಕಬಾರದು. ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ವಿರುದ್ಧ ಮಾಳವಿಕಾ ಬೇಸರ

ಮಹಿಳಾಪರ ಹೋರಾಟಗಾರ್ತಿ ಮಾಳವಿಕಾ ಗುಬ್ಬಿವಾಣಿ ಮಾತನಾಡಿ, ಈ ವಿಧೇಯಕದ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಬಿತ್ತರವಾಗುತ್ತಿದೆ ಎಂದರು. "ಮಹಿಳಾ ಮಸೂದೆ ಬಿದ್ದುಹೋಯ್ತು ಎಂದು ಹೇಳುವುದು ತಪ್ಪು. ವಿರೋಧ ಪಕ್ಷಗಳು ವಿರೋಧಿಸುತ್ತಿರುವುದು ಕ್ಷೇತ್ರ ಪುನರ್ವಿಂಗಡಣೆಯನ್ನೇ ಹೊರತು, ಮಹಿಳಾ ಮೀಸಲಾತಿಯನ್ನಲ್ಲ. ಇದನ್ನು ಮಾಧ್ಯಮಗಳು ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದರು.

"ಚುನಾವಣೆ ಹತ್ತಿರ ಬಂದಾಗಲೇ ಇಂತಹ ಮಸೂದೆಗಳನ್ನು ತರುವುದು ಬಿಜೆಪಿಯ ತಂತ್ರ. ಟ್ರಿಪಲ್ ತಲಾಖ್ ವಿಚಾರದಲ್ಲೂ ಇದೇ ರೀತಿ ಮಾಡಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿ ಇದ್ದರೂ, ಕರ್ನಾಟಕದಲ್ಲಿ ಚುನಾವಣೆಗಳೇ ನಡೆಯುತ್ತಿಲ್ಲ. ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶವಿದ್ದರೆ, ರಾಜಕೀಯ ಪಕ್ಷಗಳು ತಮ್ಮ ಟಿಕೆಟ್ ಹಂಚಿಕೆಯಲ್ಲಿಯೇ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡಬಹುದಿತ್ತು" ಎಂದು ಅವರು ತೀಕ್ಷ್ಣವಾಗಿ ನುಡಿದರು.

ಒಟ್ಟಾರೆಯಾಗಿ, ಈ ವಿಧೇಯಕದ ವಿಫಲತೆಯು ಕೇವಲ ರಾಜಕೀಯ ದೊಂಬರಾಟವಾಗಿದ್ದು, ಎಲ್ಲಾ ಪಕ್ಷಗಳೂ ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆಯೇ ಹೊರತು, ನಿಜವಾದ ರಾಜಕೀಯ ಪ್ರಾತಿನಿಧ್ಯ ನೀಡಲು ಸಿದ್ಧವಿಲ್ಲ ಎಂಬುದು ಮೂವರೂ ನಾಯಕರ ಒಮ್ಮತದ ಅಭಿಪ್ರಾಯವಾಗಿತ್ತು.

Read More
Next Story