
ರೈತರ ಕಷ್ಟಗಳ ಬಗ್ಗೆ ಕೇಂದ್ರಕ್ಕೆ ಜ್ಞಾನವೇ ಇಲ್ಲ: ಸಚಿವ ಲಕ್ಷ್ಮಣ್ ಸವದಿ ವಾಗ್ದಾಳಿ
ವ್ಯವಸಾಯದ ಖರ್ಚು, ರಸಗೊಬ್ಬರ, ಲೀಟರ್ಗಟ್ಟಲೆ ಕ್ರಿಮಿನಾಶಕಗಳ ಬೆಲೆ, ಕೃಷಿ ಕಾರ್ಮಿಕರ ಕೂಲಿ ವೆಚ್ಚದ ಅರಿವಿಲ್ಲದೆ ದರ ನಿಗದಿ ಮಾಡುವುದು ಸರಿಯಲ್ಲ ಎಂದು ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಸಂಪೂರ್ಣ ವೈಫಲ್ಯ ಕಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ಸಹಕಾರಿ ಸಚಿವ ಲಕ್ಷ್ಮಣ್ ಸವದಿ, ಕೇಂದ್ರದ ಸಚಿವರುಗಳಿಗೆ ರೈತರ ಕಷ್ಟಗಳ ಬಗ್ಗೆ ಯಾವುದೇ ಪ್ರಾಯೋಗಿಕ ಜ್ಞಾನವಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಸಂಕಷ್ಟ ಮತ್ತು ಎಥೆನಾಲ್ ದರ ನಿಗದಿಯಲ್ಲಿ ಕೇಂದ್ರದ ತಾರತಮ್ಯದ ಧೋರಣೆಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, "ಕೇಂದ್ರ ಸರ್ಕಾರವು ರೈತರ ಸಮಸ್ಯೆಗಳ ಬಗ್ಗೆ ಕನಿಷ್ಠ ಅಧ್ಯಯನವನ್ನೂ ನಡೆಸುತ್ತಿಲ್ಲ. ವ್ಯವಸಾಯದ ಖರ್ಚು, ರಸಗೊಬ್ಬರ, ಲೀಟರ್ಗಟ್ಟಲೆ ಕ್ರಿಮಿನಾಶಕಗಳ ಬೆಲೆ ಮತ್ತು ಕೃಷಿ ಕಾರ್ಮಿಕರ ಕೂಲಿ ವೆಚ್ಚದ ಅರಿವಿಲ್ಲದೆ ದರ ನಿಗದಿ ಮಾಡುವುದು ಸರಿಯಲ್ಲ. ಕೇಂದ್ರದಲ್ಲಿರುವ ಅನೇಕ ಸಚಿವರು ನಿವೃತ್ತ ಐಎಎಸ್ ಅಧಿಕಾರಿಗಳು. ಅವರಿಗೆ ಕಚೇರಿಯ ಆಡಳಿತಾತ್ಮಕ ಜ್ಞಾನವಿದೆಯೇ ಹೊರತು, ಮಣ್ಣಿನಲ್ಲಿ ಬೆವರು ಸುರಿಸಿ ದುಡಿಯುವ ರೈತನ ಕಷ್ಟಗಳ ಪ್ರಾಯೋಗಿಕ ಅನುಭವವಿಲ್ಲ" ಎಂದು ವ್ಯಂಗ್ಯವಾಡಿದರು.
ಕಾರ್ಖಾನೆಗಳು ರೈತರಿಗೆ ಕಬ್ಬಿನ ಹೆಚ್ಚಿನ ಬೆಲೆ ನೀಡಬೇಕಾದರೆ ಸಕ್ಕರೆಗೆ ಎರಡು ರೀತಿಯ ದರ ನಿಗದಿಪಡಿಸಬೇಕು ಎಂಬುದು ಸವದಿ ಅವರ ಪ್ರಮುಖ ಬೇಡಿಕೆಯಾಗಿದೆ. "ಸಾಮಾನ್ಯ ಗ್ರಾಹಕರಿಗೆ ಒಂದು ದರ ಮತ್ತು ಕೋಕಾ-ಕೋಲಾ, ಸಿಹಿ ತಿಂಡಿಗಳ ತಯಾರಿಕೆಯಂತಹ ವಾಣಿಜ್ಯ ಬಳಕೆಯ ಉದ್ದೇಶಗಳಿಗೆ ಹೆಚ್ಚಿನ ದರ ವಿಧಿಸಬೇಕು. ಇದರಿಂದ ಸಿಗುವ ಹೆಚ್ಚುವರಿ ಲಾಭವನ್ನು ರೈತರಿಗೆ ಎಂಎಸ್ಪಿ ರೂಪದಲ್ಲಿ ನೀಡಲು ಸಾಧ್ಯವಿದೆ. ಇದನ್ನು ಕಳೆದ ಒಂದು ವರ್ಷದಿಂದ ನಾವು ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ" ಎಂದು ಅವರು ಕಿಡಿಕಾರಿದರು.
ತೈಲ ಕಂಪನಿಗಳ ಲೂಟಿ, ಎಥೆನಾಲ್ ದರ
ಎಥೆನಾಲ್ ವಿಷಯದಲ್ಲಿ ತೈಲ ಕಂಪನಿಗಳು ರೈತರನ್ನು ಸುಲಿಗೆ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. "ರೈತರಿಂದ ಸರಾಸರಿ 62 ರೂ.ಕ್ಕೆ ಎಥೆನಾಲ್ ಖರೀದಿಸುವ ತೈಲ ಕಂಪನಿಗಳು, ಅದನ್ನು ಪೆಟ್ರೋಲ್ ಜೊತೆ ಬೆರೆಸಿ ಜನಸಾಮಾನ್ಯರಿಗೆ 110 ರೂ.ನಂತೆ ಮಾರಾಟ ಮಾಡುತ್ತಿವೆ. ರೈತರು ಮೈ ಬೆವರು ಸುರಿಸಿ ಬೆಳೆ ಬೆಳೆದರೆ, ಯಾವುದೇ ಶ್ರಮವಿಲ್ಲದ ತೈಲ ಕಂಪನಿಗಳು ಪ್ರತಿ ಲೀಟರ್ಗೆ 50 ರೂ. ನಷ್ಟು ಲಾಭ ಲೂಟಿ ಮಾಡುತ್ತಿವೆ. ಎಥೆನಾಲ್ ದರವನ್ನು ಕನಿಷ್ಠ 90 ರೂ.ಗೆ ಹೆಚ್ಚಿಸಿದರೆ ಮಾತ್ರ, ಪ್ರತಿ ಟನ್ ಕಬ್ಬಿಗೆ ರೈತರಿಗೆ 5 ಸಾವಿರ ರೂ. ಬೆಲೆ ನೀಡಲು ಸಾಧ್ಯವಾಗುತ್ತದೆ" ಎಂದು ವಿವರಿಸಿದರು.
ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸವದಿ, "ಆ ಸಭೆಯಲ್ಲಿ ತಕ್ಷಣವೇ ಬೆಲೆ ಹೆಚ್ಚಳದ ಘೋಷಣೆಯಾಗುತ್ತದೆ ಎಂದು ನಾವು ನಂಬಿದ್ದೆವು. ಆದರೆ, ಅವರು ಮತ್ತೆ ಸಮಿತಿ ರಚಿಸಿ ಒಂದು ತಿಂಗಳ ಕಾಲಾವಧಿ ಕೇಳಿ ಸಭೆಯನ್ನು ಮುಕ್ತಾಯಗೊಳಿಸಿದರು. ಆ ಸಭೆಗೆ ಅನಿವಾರ್ಯವಾಗಿರಬೇಕಾದ ಪೆಟ್ರೋಲಿಯಂ ಸಚಿವರೇ ಗೈರಾಗಿದ್ದರು. ಅಂತಹ ಸಭೆ ಯಶಸ್ವಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ಅವರು ಹೇಳುತ್ತಿರುವುದು ಹಾಸ್ಯಾಸ್ಪದ. ಸಭೆ ಯಶಸ್ವಿಯಾಗಿದ್ದರೆ ರೈತರು ರಸ್ತೆಗಿಳಿದು ಹಗಲು-ರಾತ್ರಿ ಧರಣಿ ಯಾಕೆ ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದರು.
ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಒಂದು ವೇಳೆ ರೈತರು ವಿಮಾನ ನಿಲ್ದಾಣಗಳು ಮತ್ತು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಿದರೆ ದೇಶದಲ್ಲಿ ಹಾಹಾಕಾರ ಉಂಟಾಗುತ್ತದೆ. ಸರ್ಕಾರ ಕಾಲಮಿತಿಯೊಳಗೆ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಅನಾಹುತ ಕಾದಿದೆ ಎಂದು ಸವದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

