ಎಫ್‌ಆರ್‌ಪಿ ದರ 4,500 ರೂ.ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ
x

ಎಫ್‌ಆರ್‌ಪಿ ದರ 4,500 ರೂ.ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ

ರಸಗೊಬ್ಬರ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಸಮಸ್ಯೆ, ಬರಗಾಲದಿಂದಾಗಿ ಕಬ್ಬಿನ ಇಳುವರಿ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಎಫ್‌ಆರ್‌ಪಿ ದರವು ರೈತರ ಬದುಕನ್ನು ಹಸನಾಗಿಸಲು ಸಾಕಾಗುತ್ತಿಲ್ಲ ಎಂದು ಶಾಂತಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ಕಬ್ಬು ಬೆಳೆಗಾರರು ತೀವ್ರ ಬರಗಾಲ, ಬೆಲೆ ಕುಸಿತ ಹಾಗೂ ಉತ್ಪಾದನಾ ವೆಚ್ಚದ ಏರಿಕೆಯಿಂದಾಗಿ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ನಡುವೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದು, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಕಬ್ಬಿನ ಎಫ್‌ಆರ್‌ಪಿ ದರವನ್ನು ಕನಿಷ್ಠ 4,500 ರೂ.ಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ರಸಗೊಬ್ಬರ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಸಮಸ್ಯೆ ಮತ್ತು ಬರಗಾಲದಿಂದಾಗಿ ಕಬ್ಬಿನ ಇಳುವರಿ ಗಣನೀಯವಾಗಿ ಕುಸಿದಿದೆ. ಹೀಗಾಗಿ, ಪ್ರಸ್ತುತ ಎಫ್‌ಆರ್‌ಪಿ ದರವು ರೈತರ ಬದುಕನ್ನು ಹಸನಾಗಿಸಲು ಸಾಕಾಗುತ್ತಿಲ್ಲ. ಎಫ್‌ಆರ್‌ಪಿ ದರವನ್ನು ತಕ್ಷಣ 4,500 ರೂ.ಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರೊಂದಿಗೆ ಎಥನಾಲ್ ಉತ್ಪಾದನೆಯಲ್ಲಿನ ನಿರ್ಬಂಧಗಳನ್ನು ಸಡಿಲಿಸಬೇಕೆಂದು ಅವರು ಸಲಹೆ ನೀಡಿದ್ದಾರೆ. ಕಬ್ಬಿನ ರಸ ಹಾಗೂ ಸಿರಪ್‌ನಿಂದ ನೇರವಾಗಿ ಎಥನಾಲ್ ಉತ್ಪಾದಿಸಲು ಇರುವ ನಿರ್ಬಂಧಗಳನ್ನು ತೆಗೆಯಬೇಕು. ರೈತರ ಆಲೆಮನೆಗಳಲ್ಲಿ ಎಥನಾಲ್ ಉತ್ಪಾದನೆಗೆ ಅವಕಾಶ ನೀಡಿದರೆ, ಅದು ಅಡುಗೆ ಅನಿಲಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಇದು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗುವುದಲ್ಲದೆ, ದೇಶದ ಇಂಧನ ಆಮದು ವೆಚ್ಚವನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಅವೈಜ್ಞಾನಿಕ ಪದ್ಧತಿಯಿಂದ ರೈತರಿಗೆ ಅನ್ಯಾಯ

ಸಕ್ಕರೆ ಕಾರ್ಖಾನೆಗಳ ಕಬ್ಬು ಪಾವತಿ ಪದ್ಧತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಂತಕುಮಾರ್, "ಹಿಂದಿನ ವರ್ಷದ ಸಕ್ಕರೆ ಇಳುವರಿಯನ್ನು ಪರಿಗಣಿಸಿ ಪ್ರಸಕ್ತ ಸಾಲಿಗೆ ಎಫ್‌ಆರ್‌ಪಿ ಹಣ ಪಾವತಿಸುವುದು ಸಂಪೂರ್ಣ ಅವೈಜ್ಞಾನಿಕ. ಇದು ರೈತರಿಗೆ ಮಾಡುವ ದೊಡ್ಡ ದ್ರೋಹ. ಇಳುವರಿ ಪ್ರಮಾಣ ಕಾರ್ಖಾನೆಯ ಆಧುನೀಕರಣ ಮತ್ತು ಸಕಾಲಿಕ ಕಬ್ಬು ಸಾಗಣೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ಅವೈಜ್ಞಾನಿಕ ಪದ್ಧತಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಕ್ಕರೆ ಬೆಲೆ ಏರಿಕೆಯಾಗುತ್ತಿರುವಾಗ ಕಾರ್ಖಾನೆಗಳು ಲಾಭ ಮಾಡುತ್ತಿವೆ, ಆದರೆ ಕಬ್ಬು ಬೆಳೆಗಾರರು ಮಾತ್ರ ನಷ್ಟದಲ್ಲಿದ್ದಾರೆ. ಸರ್ಕಾರ ಕಾರ್ಖಾನೆಗಳ ಆರಂಭಕ್ಕೆ ಸೂಚನೆ ನೀಡುತ್ತದೆಯೇ ಹೊರತು, ರೈತರ ಬಾಕಿ ಪಾವತಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

ಸರ್ಕಾರದ ಆದೇಶಗಳನ್ನು ದಿಕ್ಕರಿಸುವ ಮತ್ತು ಪದೇ ಪದೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಕಾರ್ಖಾನೆಗಳಿಗೆ ರಹದಾರಿ ನೀಡುತ್ತದೆ, ನೀರು, ವಿದ್ಯುತ್ ಮತ್ತು ಭೂಮಿಯಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೂ ಅವು ರೈತರನ್ನು ಶೋಷಿಸುತ್ತಿವೆ. ಇಂತಹ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ಕಠಿಣ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಧಾರವಾಡ ಮತ್ತು ಹಳಿಯಾಳ ಭಾಗದ ರೈತರಿಗೆ ಜೀವನಾದಾರವಾಗಿರುವ ಕಾಳಿ ನದಿ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದಲ್ಲದೆ, ಬರಗಾಲದ ತೀವ್ರತೆಯಿಂದ ರೈತರು ಕಂಗಾಲಾಗಿದ್ದು, ಕೂಡಲೇ ಕೃಷಿ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದು ರೈತರ ಪಾಲಿಗೆ ಶಾಾಪವಾಗಿ ಪರಿಣಮಿಸಿದೆ. "ರಾಜ್ಯದ ರೈತರನ್ನು ಕಗ್ಗತ್ತಲಲ್ಲಿ ಇಡಲಾಗುತ್ತಿದೆ. ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿವೆ, ರೈತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ಕೂಡಲೇ ವಿದ್ಯುತ್ ಪೂರೈಕೆಯನ್ನು ಸರಿದೂಗಿಸಬೇಕು ಎಂದು ಎಚ್ಚರಿಸಿದರು.

ಎಪಿಎಂಸಿಯಲ್ಲಿನ ಕಮಿಷನ್ ದಂಧೆಗೆ ಕಡಿವಾಣ ಹಾಕಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎಪಿಎಂಸಿ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, "ಸಚಿವರು ಅಥವಾ ಮುಖ್ಯಮಂತ್ರಿಗಳು ಬೆಳಗಿನ ಜಾವ ಎಪಿಎಂಸಿಗೆ ಭೇಟಿ ನೀಡುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು. ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರಿಂದ ಕಾನೂನುಬಾಹಿರವಾಗಿ ಶೇ. 10 ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಈ ದಂಧೆಯನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಿ. ಆಗ ಮಾತ್ರ ನಿಮ್ಮ ಭೇಟಿ ಸಾರ್ಥಕವಾಗುತ್ತದೆ, ಇಲ್ಲವಾದರೆ ಇದು ಕೇವಲ ನಾಟಕವಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

Read More
Next Story