ಇನ್ನೆರಡು ವರ್ಷದಲ್ಲಿ ಜೆಡಿಎಸ್‌ ಬೆಂಬಲಿತ ರಾಜ್ಯ ಸರ್ಕಾರ; ಭವಿಷ್ಯ ನುಡಿದ ಎಚ್‌.ಡಿ.ಕುಮಾರಸ್ವಾಮಿ
x
ಎಚ್‌.ಡಿ.ಕುಮಾರಸ್ವಾಮಿ

ಇನ್ನೆರಡು ವರ್ಷದಲ್ಲಿ ಜೆಡಿಎಸ್‌ ಬೆಂಬಲಿತ ರಾಜ್ಯ ಸರ್ಕಾರ; ಭವಿಷ್ಯ ನುಡಿದ ಎಚ್‌.ಡಿ.ಕುಮಾರಸ್ವಾಮಿ

"ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಆದರೆ, ಪ್ರತಿದಿನ ನನ್ನ ನಿವಾಸದ ಬಳಿ ಬಂದು ಕಷ್ಟ ಹೇಳಿಕೊಳ್ಳುವ ಜನರನ್ನು ನೋಡಿದರೆ ರಾಜ್ಯದಲ್ಲಿ ಸಾರ್ವಜನಿಕರ ಸ್ಥಿತಿ ಏನಾಗಿದೆ ಎಂಬುದು ಮನವರಿಕೆಯಾಗುತ್ತದೆ," ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಹಳೆ ಮೈಸೂರು ಭಾಗದಲ್ಲಿ ಪಕ್ಷದ ಪ್ರಾಬಲ್ಯ ಮರುಸ್ಥಾಪಿಸಲು ಮುಂದಾಗಿರುವ ಜೆಡಿಎಸ್, ಸಿಎಂ ಸ್ವಕ್ಷೇತ್ರದ ಚಾಮುಂಡೇಶ್ವರಿಯಿಂದಲೇ ‘ಜನರೊಂದಿಗೆ ಜನತಾದಳ’ ಸಮಾವೇಶ ಆಯೋಜಿಸುವ ಮೂಲಕ 2028ರ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಇನ್ನೆರಡು ವರ್ಷಗಳಲ್ಲಿ ಜೆಡಿಎಸ್‌ ಬೆಂಬಲಿತ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ 75 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇದೇ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ದಾಖಲಿಸಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

"ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡಿ, ಚಾಮುಂಡೇಶ್ವರಿ ಕ್ಷೇತ್ರವು ಎಂದಿಗೂ ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಮನವರಿಕೆ ಮಾಡಿಕೊಡಲು ಈ ಸಮಾವೇಶ ಆಯೋಜಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ನಮ್ಮ ನಾಯಕರು ಎಚ್ಚರಿಕೆ ವಹಿಸಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮದೇ ಆದ ಕೆಲವು ತಪ್ಪುಗಳಿಂದ ಅಂದು ಹಿನ್ನಡೆಯಾಗಿತ್ತು," ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ʼನಾನೇ ಹೆಚ್ಚು ಅನುದಾನ ನೀಡಿದ್ದೇನೆʼ

"ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಪ್ರಸ್ತುತ ಇರುವ ಹಾಲಿ ಮುಖ್ಯಮಂತ್ರಿಗಳಿಗಿಂತ ನಾನು ಅತ್ಯಲ್ಪ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರಕ್ಕೆ ಅತಿ ಹೆಚ್ಚು ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಿದ್ದೆ. ನಾವು ಯಾರನ್ನೋ ವಿರೋಧಿಸುವ ಸಲುವಾಗಿ ಇಲ್ಲಿ ಸಮಾವೇಶ ನಡೆಸುತ್ತಿಲ್ಲ," ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕುರುಬ, ದಲಿತ ಹಾಗೂ ಅಲ್ಪಸಂಖ್ಯಾತರ ಪರ ಜೆಡಿಎಸ್

ಸಮಾವೇಶದಲ್ಲಿ ಸಾಂಪ್ರದಾಯಿಕ ಕಂಬಳಿ ಮತ್ತು ಪೇಟ ಧರಿಸಿ ಗಮನ ಸೆಳೆದ ಕುಮಾರಸ್ವಾಮಿ, "ನಾನು ಪೇಟ ಧರಿಸಿ ಭಾಷಣ ಮಾಡುತ್ತಿರುವುದು ಹಾಲುಮತಸ್ಥರು ಹಾಗೂ ಕುರುಬ ಸಮುದಾಯಕ್ಕೆ ವಿಶೇಷ ಸಂದೇಶ ನೀಡಲು. ಕುರುಬ ಸಮುದಾಯದ ಜೊತೆಗೆ ಜೆಡಿಎಸ್ ಸದಾ ಇರಲಿದೆ ಎಂಬುದನ್ನು ಸಾಬೀತುಪಡಿಸಲು ಈ ಉಡುಪು ಧರಿಸಿದ್ದೇನೆ. ಕುರುಬರು, ದಲಿತರು ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಜೆಡಿಎಸ್ ನಿರಂತರವಾಗಿ ಶ್ರಮಿಸುತ್ತಿದೆ." ಎಂದು ಸ್ಪಷ್ಟಪಡಿಸಿದ್ದಾರೆ.

"ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಆದರೆ, ಪ್ರತಿದಿನ ನನ್ನ ನಿವಾಸದ ಬಳಿ ಬಂದು ಕಷ್ಟ ಹೇಳಿಕೊಳ್ಳುವ ಜನರನ್ನು ನೋಡಿದರೆ ರಾಜ್ಯದಲ್ಲಿ ಸಾರ್ವಜನಿಕರ ಸ್ಥಿತಿ ಏನಾಗಿದೆ ಎಂಬುದು ಮನವರಿಕೆಯಾಗುತ್ತದೆ," ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಮೇ 19ರಂದು ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್, ಬಸ್ ಪ್ರಯಾಣ ದರ ಹಾಗೂ ಮದ್ಯದ ಬೆಲೆಯನ್ನು ಎಷ್ಟು ಪಟ್ಟು ಏರಿಕೆ ಮಾಡಿದ್ದೀರಿ ಎಂಬ ಪಟ್ಟಿಯನ್ನು ಜನರ ಮುಂದಿಡಲಿ, ಆ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ " ಎಂದು ಸವಾಲು ಹಾಕಿದ್ಧಾರೆ.

ತೈಲ ಬೆಲೆ ಏರಿಕೆಗೆ ಜಾಗತಿಕ ಯುದ್ಧ ಕಾರಣ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್ ನಿಲುವನ್ನು ಖಂಡಿಸಿದ ಅವರು, "ಜಾಗತಿಕ ಯುದ್ಧದ ಕಾರಣದಿಂದಾಗಿ ಪ್ರಪಂಚದಾದ್ಯಂತ ತೈಲ ಬೆಲೆ ಹೆಚ್ಚಾಗಿದೆ. ಸಿಂಗಾಪುರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 245 ರೂ. ತಲುಪಿದೆ. ಪ್ರತಿಯೊಂದು ದೇಶವೂ ಬೆಲೆ ಏರಿಸಲು ಜಾಗತಿಕ ಪರಿಸ್ಥಿತಿ ಕಾರಣವೇ ಹೊರತು ಕೇಂದ್ರ ಸರ್ಕಾರವಲ್ಲ. ಯಾರಿಗಾದರೂ ಮೊದಲೇ ಯುದ್ಧದ ಕನಸು ಬಿದ್ದಿತ್ತೇ?, ಒಂದು ವೇಳೆ ಕಾಂಗ್ರೆಸ್ ನಾಯಕರೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು?" ಎಂದು ಪ್ರಶ್ನಿಸಿದ್ದಾರೆ.

Read More
Next Story