
ಪ್ರಜಾಸೌಧ ನಿರ್ಮಾಣಕ್ಕೆ ದೇಗುಲದ ಭೂಮಿ ಬಳಕೆ; ವಕ್ಫ್ ಭೂಮಿ ಬಳಸಿದರೂ ತಪ್ಪಿಲ್ಲ ಎಂದ ಸಚಿವ ರಾಯರಡ್ಡಿ
ಇತ್ತೀಚೆಗಷ್ಟೇ ಕುಕನೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಸವರಾಜ ರಾಯರಡ್ಡಿ ಅವರು ಇಸ್ಲಾಂ ಧರ್ಮವನ್ನು ಹೊಗಳಿದ್ದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ದೇಗುಲದ ಜಾಗದಲ್ಲಿ ಅಡಿಗಲ್ಲು ಹಾಕಿದ ಬಗ್ಗೆ ಸರ್ಕಾರದ ಸಮರ್ಥನೆ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ರುದ್ರಮುನೇಶ್ವರ ದೇವಸ್ಥಾನಕ್ಕೆ ಸೇರಿದ ಇನಾಂ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಿಸಿದರೆ ತಪ್ಪಿಲ್ಲ, ಬೇಕಾದರೆ ವಕ್ಫ್ ಜಾಗದಲ್ಲೂ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಬಹುದು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದು, ಇದೇ ಹೇಳಿಕೆ ಸಾಕಷ್ಟು ಚರ್ಚೆ ಹಾಗೂ ಹೊಸ ವಿವಾದ ಸೃಷ್ಟಿಸಿದೆ. ಸಚಿವರ ಹೇಳಿಕೆಗೆ ಮಠದ ಟ್ರಸ್ಟಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಕನೂರಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ರುದ್ರಮುನೇಶ್ವರ ದೇವಸ್ಥಾನದ ಅರ್ಚಕರಿಗೆ ಹಾಗೂ ಮಠಕ್ಕೆ ಸೇರಿದೆ ಎನ್ನಲಾದ ಇನಾಂ ಜಾಗವನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ವಿರೋಧಿಸಿ ರುದ್ರಮುನೇಶ್ವರ ಮಠದ ಟ್ರಸ್ಟ್ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಈಗ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಆದರೆ, ಧಾರ್ಮಿಕ ಸಂಸ್ಥೆಗಳು ಹಾಗೂ ಅರ್ಚಕರ ಇನಾಂ ಭೂಮಿಯನ್ನು ಸರ್ಕಾರಿ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.
ಸಚಿವ ರಾಯರೆಡ್ಡಿ ಹೇಳಿದ್ದೇನು?
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ ಅವರು, "ಮುಜರಾಯಿ ಇಲಾಖೆಗೆ ಸೇರಿದ ಅಥವಾ ಇನಾಂ ಭೂಮಿಯನ್ನು ಸರ್ಕಾರಿ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಧಾರ್ಮಿಕ ಸಂಸ್ಥೆಗಳ ಜಾಗವನ್ನು ಸರ್ಕಾರಿ ಕೆಲಸಕ್ಕೆ ಕೊಡಲು ಇನ್ನಷ್ಟು ಜನ ಮುಂದೆ ಬಂದರೆ ನಾನೇ ಸ್ವತಃ ಪೂಜೆ ಮಾಡಿ ಅಡಿಗಲ್ಲು ಹಾಕುತ್ತೇನೆ. ಬೆಂಗಳೂರಿನಲ್ಲಿ ನನಗೂ ಎರಡು ಎಕರೆ ಜಾಗ ಕೊಟ್ಟರೆ ಅನುಕೂಲ. ಇದಲ್ಲದೆ, ರಾಜ್ಯದ ಹಲವು ಕಡೆಗಳಲ್ಲಿ ಸರ್ಕಾರಿ ಯೋಜನೆಗಳಿಗಾಗಿ ವಕ್ಫ್ ಆಸ್ತಿ ಬಳಕೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಭೂಮಿ ಬಳಕೆ ಸಾಮಾನ್ಯ" ಎಂದು ಸಮರ್ಥಿಸಿಕೊಂಡಿದ್ದಾರೆ.
ಸಚಿವರ ಈ ಹೇಳಿಕೆ ಮತ್ತು ಇನಾಂ ಭೂಮಿ ಬಳಕೆ ನಿರ್ಧಾರಕ್ಕೆ ಮಠದ ಭಕ್ತರು, ಸ್ಥಳೀಯ ಮುಖಂಡರು ಹಾಗೂ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ದೇವಸ್ಥಾನ ಮತ್ತು ಮಠಗಳ ಇನಾಂ ಭೂಮಿಯನ್ನು ಕಬಳಿಸುವ ಬದಲು ಸರ್ಕಾರ ಪರ್ಯಾಯ ಕಂದಾಯ ಜಾಗ ಗುರುತಿಸಬೇಕಿತ್ತು ಎಂದು ಮಠದ ಟ್ರಸ್ಟಿಗಳು ಆಗ್ರಹಿಸಿದರೆ, ಧಾರ್ಮಿಕ ನಂಬಿಕೆ ಹಾಗೂ ಮಠ-ಮಾನ್ಯಗಳ ವಿಚಾರದಲ್ಲಿ ಸಚಿವ ರಾಯರೆಡ್ಡಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.
ಸಚಿವ ಬಸವರಾಜ ರಾಯರಡ್ಡಿ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಕುಕನೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಹೊಗಳಿದ್ದ ಹೇಳಿಕೆಯು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ನಾಯಕರು ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವಿವಾದ ತಣ್ಣಗಾಗುವ ಮುನ್ನವೇ ರುದ್ರಮುನೇಶ್ವರ ಮಠದ ಆಸ್ತಿಯಲ್ಲಿ ಪ್ರಜಾಸೌಧ ನಿರ್ಮಾಣದ ವಿವಾದ ಮತ್ತು ಅದಕ್ಕೆ ನೀಡಿದ ಹೇಳಿಕೆ ರಾಯರೆಡ್ಡಿ ಅವರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ.

