
ಪಂಚಮಸಾಲಿ ವಿವಾದ; ಗುರುಪೀಠದ ಮೂವರು ಟ್ರಸ್ಟಿಗಳ ಉಚ್ಛಾಟನೆ
ಟ್ರಸ್ಟ್‌ನ ಆರ್ಥಿಕ ಶಿಸ್ತಿನ ಕೊರತೆ ಮತ್ತು ಅವ್ಯವಹಾರ ತಡೆಗಟ್ಟಿ, ಸಮಾಜದ ಹಿತ ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶ ಎಂದು ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಹಣಕಾಸು ಅವ್ಯವಹಾರದ ಆರೋಪದ ಮೇಲೆ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಸೇರಿ ಮೂವರು ಪ್ರಮುಖರನ್ನು ಟ್ರಸ್ಟಿನಿಂದ ಉಚ್ಚಾಟಿಸಲಾಗಿದೆ. ಇದು ಪಂಚಮಸಾಲಿ ಸಮಾಜದಲ್ಲಿ ಸಂಚಲನ ಮೂಡಿಸಿದೆ.
ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಅವರು ಭಾನುವಾರ ಟ್ರಸ್ಟ್‌ನ ಮೂವರು ಪ್ರಮುಖರನ್ನು ಉಚ್ಛಾಟಿಸುವ ನಿರ್ಧಾರ ಪ್ರಕಟಿಸಿದ್ದು, ಏಪ್ರಿಲ್ 13ರಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ , ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಉಚ್ಛಾಟನೆಗೊಂಡವರು.
ಉಚ್ಚಾಟನೆಗೆ ಕಾರಣವೇನು?
ಕಳೆದ ಹಲವು ದಿನಗಳಿಂದ ಮಠದ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡುವಂತೆ ಸಮಾಜದ ವತಿಯಿಂದ ಒತ್ತಾಯಿಸಲಾಗಿತ್ತು. ಲೆಕ್ಕಪತ್ರ ನೀಡುವಂತೆ ಕೇಳಿದ್ದರೂ, ಸಂಬಂಧಪಟ್ಟ ಪದಾಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂವರು ಟ್ರಸ್ಟಿಗಳಿಗೆ ಯಾವುದೇ ಹಣಕಾಸು ವ್ಯವಹಾರ ನಡೆಸಲು ಅಥವಾ ಟ್ರಸ್ಟ್ ಪರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಅಧಿಕಾರ ಇರುವುದಿಲ್ಲ ಎಂದು ಹೇಳಿ ಉಚ್ಛಾಟನೆ ಮಾಡಲಾಗಿದೆ.
ಟ್ರಸ್ಟ್‌ನಲ್ಲಿ ನಡೆಯುತ್ತಿದೆ ಎನ್ನಲಾದ ಆರ್ಥಿಕ ಶಿಸ್ತಿನ ಕೊರತೆ ಮತ್ತು ಅವ್ಯವಹಾರ ತಡೆಗಟ್ಟಿ, ಸಮಾಜದ ಹಿತ ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶ ಎಂದು ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. "ಸಂಘವು ಸುಪ್ರೀಂ ಆಗಿದ್ದು, ಸುಮಾರು 13,600 ಸದಸ್ಯರನ್ನು ಹೊಂದಿದೆ. ಸಮಾಜದ ಒಳಿತಿಗಾಗಿ ಮತ್ತು ಪಾರದರ್ಶಕತೆಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಲೆಕ್ಕ ಕೊಡಿ ಅಭಿಯಾನ'ಕ್ಕೆ ಚಾಲನೆ
ಪಂಚಮಸಾಲಿ ಸಮಾಜವು ಜೂನ್ ತಿಂಗಳಲ್ಲಿ ಲೆಕ್ಕ ಕೊಡಿ ಅಭಿಯಾನ ನಡೆಸಲು ಉದ್ದೇಶಿಸಿದೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು, 2008ರಿಂದ ಇಂದಿನವರೆಗೆ ಮಠಕ್ಕೆ ಮತ್ತು ಟ್ರಸ್ಟ್‌ಗೆ ದಾನ ನೀಡಿದವರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಪೂರ್ಣ ಮಾಹಿತಿಯನ್ನು ಜೂನ್ ಅಂತ್ಯದ ವೇಳೆಗೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಸೋಮನಗೌಡ ಹೇಳಿದ್ದಾರೆ. ಈ ಬೆಳವಣಿಗೆಯು ಪಂಚಮಸಾಲಿ ಸಮಾಜದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

