x

ಕಂಡಕ್ಟರ್ ಅಮಾನತು ಮಾಡಿದರೆ ಕುಟುಂಬದ ಶಾಪ ತಟ್ಟುತ್ತದೆ; ಬೈರತಿ ಸುರೇಶ್ ವಿರುದ್ಧ ನೌಕರರ ಒಕ್ಕೂಟದ ಆಕ್ರೋಶ

ಆರು ರೂಪಾಯಿ ಟಿಕೆಟ್‌ಗೆ ಚಿಲ್ಲರೆ ವಿವಾದದ ಹಿನ್ನೆಲೆಯಲ್ಲಿ ಕಂಡಕ್ಟರ್ ಅಮಾನತು ಮಾಡಿದ ಕ್ರಮವನ್ನು ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ ಖಂಡಿಸಿದೆ. ಆದೇಶ ಹಿಂಪಡೆಯುವಂತೆ ಸಚಿವರಿಗೆ ಒತ್ತಾಯಿಸಿದೆ.


Click the Play button to hear this message in audio format

ಬಸ್‌ನಲ್ಲಿ ಪ್ರಯಾಣಿಸುವಾಗ ಆರು ರೂಪಾಯಿ ಟಿಕೆಟ್‌ಗೆ ನೂರು ರೂಪಾಯಿ ನೋಟು ನೀಡಿ ಚಿಲ್ಲರೆ ಕೇಳಿದಾಗ, ಚಿಲ್ಲರೆ ನೀಡದ ಕಾರಣಕ್ಕಾಗಿ ಕಂಡಕ್ಟರ್ ಒಬ್ಬರನ್ನು ಅಮಾನತುಗೊಳಿಸಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಕ್ರಮಕ್ಕೆ ಸಾರ್ವಜನಿಕ ವಲಯ ಹಾಗೂ ಸಾರಿಗೆ ನೌಕರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು 'ದಿ ಫೆಡರಲ್ ಕರ್ನಾಟಕ' ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ವರ್ಕರ್ಸ್ ಫೆಡರೇಷನ್ ಕಾರ್ಯಾಧ್ಯಕ್ಷ ಜಿ.ಟಿ. ರಂಗೇಗೌಡ ಅವರು ಸಚಿವರ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಮಾನತುಗೊಂಡಿರುವ ಕಂಡಕ್ಟರ್ ಪರವಾಗಿ ಒಕ್ಕೂಟದ ಅಧ್ಯಕ್ಷರಾದ ಅನಂತ ಸುಬ್ಬರಾವ್ ಅವರು ಈಗಾಗಲೇ ಸಚಿವರಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಪತ್ರ ಬರೆದು ಯಾವುದೇ ಶಿಸ್ತು ಕ್ರಮ ಜರುಗಿಸದಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಕಂಡಕ್ಟರ್ ಹಣ ಪಡೆದು ಟಿಕೆಟ್ ನೀಡದಿದ್ದರೆ ಅಥವಾ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದರೆ ಮಾತ್ರ ಅದು ತಪ್ಪು ಎನಿಸಿಕೊಳ್ಳುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಬಸ್ಸಿನಿಂದ ಕೆಳಗಿಳಿಯಲು ಕಂಡಕ್ಟರ್ ಹೇಳಿರುವ ಬಗ್ಗೆ ವಿಡಿಯೋದಲ್ಲಿ ಯಾವುದೇ ಪುರಾವೆ ಇಲ್ಲ. ಬಸ್ಸುಗಳಲ್ಲಿ ಪ್ರಯಾಣಿಕರೇ ಚಿಲ್ಲರೆ ನೀಡಿ ಸಹಕರಿಸಬೇಕು ಎಂದು ಇಲಾಖೆಯೇ ಬೋರ್ಡ್ ಹಾಕಿಸಿದೆ. ಇಷ್ಟಾದರೂ ಸಾರಿಗೆ ಸಚಿವರಿಗೆ ಈ ಕನಿಷ್ಠ ಪರಿಜ್ಞಾನವಿಲ್ಲವೇ ಎಂದು ರಂಗೇಗೌಡ ಪ್ರಶ್ನಿಸಿದ್ದಾರೆ. ಟಿಕೆಟ್ ಯಂತ್ರಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಇರುವಾಗ ಸಚಿವರು ಯುಪಿಐ ಪಾವತಿ ಮಾಡಬಹುದಿತ್ತು. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಬಡ ಕಂಡಕ್ಟರ್ ಮೇಲೆ ದರ್ಪ ತೋರಿ ಅಮಾನತು ಮಾಡಿರುವುದು ಸರಿಯಲ್ಲ. ಬಡ ನೌಕರರ ಶಾಪಕ್ಕೆ ಒಳಗಾಗದೆ ತಕ್ಷಣವೇ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸಾರಿಗೆ ನೌಕರರ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಚಿವರು ಕೇವಲ ಮಾಸ್ಕ್ ಧರಿಸಿ ನಾಟಕೀಯವಾಗಿ ಭೇಟಿ ಕೊಡುವ ಬದಲು, ಸ್ವತಃ ತಾವೇ ಒಂದು ಟ್ರಿಪ್ ಕಂಡಕ್ಟರ್ ಆಗಿ ಕೆಲಸ ಮಾಡಿ ನೋಡಲಿ ಎಂದು ರಂಗೇಗೌಡ ಸವಾಲು ಹಾಕಿದ್ದಾರೆ. ಪ್ರಸ್ತುತ ಉಚಿತ ಪ್ರಯಾಣ ಯೋಜನೆಯಿಂದಾಗಿ ಬಸ್ಸುಗಳಲ್ಲಿ ಜನದಟ್ಟಣೆ ವಿಪರೀತವಾಗಿದೆ. ನೌಕರರ ಕೊರತೆಯ ನಡುವೆಯೂ ಕಂಡಕ್ಟರ್‌ಗಳು ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಮೆಕ್ಯಾನಿಕ್‌ಗಳ ಕೊರತೆಯಿದ್ದು, ನಿಯಮಾವಳಿ ಪ್ರಕಾರ ಇರಬೇಕಾದ ಶೇ. 90 ರ ಬದಲಿಗೆ ಕೇವಲ ಶೇ. 40 ರಷ್ಟು ಸಿಬ್ಬಂದಿ ಮಾತ್ರ ಇದ್ದಾರೆ. ಇದರಿಂದಾಗಿ ಸರಿಯಾದ ಬ್ರೇಕ್, ಗೇರ್ ಇಲ್ಲದ ಕಳಪೆ ವಾಹನಗಳನ್ನು ಓಡಿಸುವ ಅನಿವಾರ್ಯತೆ ಇದೆ. ಅಲ್ಲದೆ ಸರ್ಕಾರಿ ನೌಕರರಿಗೆ ಹೋಲಿಸಿದರೆ ಸಾರಿಗೆ ನೌಕರರಿಗೆ ಶೇ. 45 ರಷ್ಟು ಕಡಿಮೆ ಸಂಬಳ ಸಿಗುತ್ತಿದೆ. ಸಚಿವರು ಇಂತಹ ನೈಜ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು, ವೈಯಕ್ತಿಕ ಪ್ರಚಾರಕ್ಕಾಗಿ ಬಡ ನೌಕರರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Read More
Next Story