KSRTC Protest | Transport employees strike from May 20 is illegal; ESMA implemented, warning of salary cut!
x
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಹೊರಡಿಸಿರುವ ಆದೇಶ

KSRTC Protest| 'ನೋ ವರ್ಕ್‌, ನೋ ಪೇ'- ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ, ವೇತನ ಕಡಿತದ ಎಚ್ಚರಿಕೆ!

ಅಗತ್ಯ ಸೇವೆಗಳ ಕಾಯ್ದೆ ಪ್ರಕಾರ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದಕ್ಕನುಗುಣವಾಗಿ ಸಾರಿಗೆ ಸೇವೆಯನ್ನು 'ಕರ್ನಾಟಕ ಅಗತ್ಯ ಸೇವೆಗಳ ಕಾಯ್ದೆ' (ESMA) ಅಡಿ ತರಲಾಗಿದೆ.


Click the Play button to hear this message in audio format

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಮೇ 20 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಕಾನೂನುಬಾಹಿರ ಎಂದು ಕೆಎಸ್‌ಆರ್‌ಟಿಸಿ ನಿಗಮ ಮಂಡಳಿ ತಿಳಿಸಿದ್ದು, ಕರ್ತವ್ಯಕ್ಕೆ ಗೈರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಹಾಗೂ ವೇತನ ಕಡಿತದ ಎಚ್ಚರಿಕೆ ನೀಡಿದೆ.

ಈ ಕುರಿತು ನಿಗಮದ ನೌಕರರು ಮತ್ತು ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ಅಗತ್ಯ ಸೇವೆಗಳ ಕಾಯ್ದೆ ಪ್ರಕಾರ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದಕ್ಕನುಗುಣವಾಗಿ ಸಾರಿಗೆ ಸೇವೆಯನ್ನು 'ಕರ್ನಾಟಕ ಅಗತ್ಯ ಸೇವೆಗಳ ಕಾಯ್ದೆ' (ESMA) ಅಡಿ ತರಲಾಗಿದೆ. ಅದರನ್ವಯ ನೌಕರರು ಮುಷ್ಕರ ಹೂಡುವಂತಿಲ್ಲ ಹಾಗೂ ಯಾರೂ ಇದಕ್ಕೆ ಪ್ರಚೋದನೆ ನೀಡುವಂತಿಲ್ಲ. ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳನ್ನು ʼಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆʼ ಎಂದು ಘೋಷಿಸಿದೆ. ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರದ ನೋಟಿಸ್ ಸದ್ಯ ರಾಜ್ಯ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿದೆ. ಕೈಗಾರಿಕಾ ವಿವಾದಗಳ ಕಾಯ್ದೆ-1947ರ ಪ್ರಕಾರ, ಸಂಧಾನ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ನೌಕರರು ಮುಷ್ಕರ ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ.

ನಿಗಮದ ನಿರ್ದೇಶನಗಳೇನು ?

ಮೇ 20 ರಿಂದ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಿಗಮವು, ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ ಎಂಬ ತತ್ವದ ಪ್ರಕಾರ ವೇತನ ಕಡಿತಗೊಳಿಸಲಾಗುವುದು. ಮೇ 20 ರಿಂದ ಜಾರಿಗೆ ಬರುವಂತೆ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು ಎಂದು ತಿಳಿಸಿದೆ.

ವಾರದ ರಜೆ ರದ್ದು

ದೀರ್ಘಾವಧಿ ರಜೆಯಲ್ಲಿರುವ ನೌಕರರನ್ನು ಹೊರತುಪಡಿಸಿ, ಅಗತ್ಯವಿದ್ದಲ್ಲಿ ಉಳಿದ ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಕರ್ತವ್ಯಕ್ಕೆ ಹಾಜರಾಗದ ನೌಕರರ ಪಟ್ಟಿಯನ್ನು ದಿನವಹಿ ಹಾಗೂ ಘಟಕವಾರು ಸಿದ್ಧಪಡಿಸಿ, ವೇತನ ಕಡಿತದ ಜೊತೆಗೆ ಅವರ ವಿರುದ್ಧ ಇಲಾಖಾ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಸೂಚನೆ ನೀಡಿದೆ.

ಹೈಕೋರ್ಟ್ ಆದೇಶದ ಉಲ್ಲೇಖ

2004ರ ಉಚ್ಛ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ತೀರ್ಪನ್ನು (Writ Appeal No.6347 of 2000) ಉಲ್ಲೇಖಿಸಿರುವ ವ್ಯವಸ್ಥಾಪಕ ನಿರ್ದೇಶಕರು, ಇಂತಹ ಸಂದರ್ಭಗಳಲ್ಲಿ ಅನಧಿಕೃತವಾಗಿ ಗೈರುಹಾಜರಾಗುವ ನೌಕರರ ದಿನದ ವೇತನ ಕಡಿತಗೊಳಿಸಲು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಡಳಿತ ಮಂಡಳಿಗೆ ಸಂಪೂರ್ಣ ಕಾನೂನುಬದ್ಧ ಅಧಿಕಾರವಿದೆ ಎಂದು ಜ್ಞಾಪನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಬಾರದು. ದೈನಂದಿನ ಕರ್ತವ್ಯಕ್ಕೆ ಹಾಜರಾಗುವ ಮೂಲಕ ರಾಜ್ಯದ ಜನತೆಯ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾಗಬೇಕು" ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಮನವಿ ಮಾಡಿದ್ದಾರೆ.

Read More
Next Story