
ಕೆಎಸ್‌ಆರ್‌ಟಿಸಿ
ಸಾರಿಗೆ ನೌಕರರ ಸಂಧಾನ ಸಭೆ ವಿಫಲ : ರಾಜ್ಯದಲ್ಲಿ ಬಸ್‌ಗಳ ಸಂಚಾರ ಅಸ್ತವ್ಯಸ್ತ?
ಸಾರಿಗೆ ಸೌಕರರ ಮುಷ್ಕರ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ತರಬೇತಿ ಚಾಲಕರ ಮೂಲಕ ಬಸ್ ಓಡಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. ಅಲ್ಲದೇ, ಖಾಸಗಿ ಬಸ್‌ಗಳೊಂದಿಗೆ ಮಾತುಕತೆ ನಡೆಸಲಾಗಿದೆ.
ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರ ಮುಷ್ಕರವು ಬುಧವಾರ ನಡೆಯುವುದು ಬಹತೇಕ ಖಚಿತವಾಗಿದೆ. ಸರ್ಕಾರ ಮತ್ತು ನೌಕರರ ಸಂಘಟನೆಗಳ ನಡುವೆ ನಡೆದ ಸಂಧಾನ ಸಭೆಗಳು ವಿಫಲವಾಗಿರುವುದರಿಂದ, ರಾಜ್ಯಾದ್ಯಂತ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಇದೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರ ಸಂಘಟನೆಗಳು ಕರೆ ನೀಡಿವೆ.
ಸಾರಿಗೆ ಇಲಾಖೆಯೊಂದಿಗೆ ನಡೆದ ಮಹತ್ವದ ಮಾತುಕತೆಯು ಯಾವುದೇ ಫಲಿತಾಂಶ ನೀಡಲಿಲ್ಲ. ನೌಕರರ ಸಂಘಟನೆಗಳು ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ ಸೇರಿದಂತೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟಿದ್ದವು. ಆದರೆ, ಸರ್ಕಾರದ ಪ್ರತಿನಿಧಿಗಳು ನೀಡಿದ ಭರವಸೆಗಳು ತಮ್ಮ ಬೇಡಿಕೆಗಳಿಗೆ ಪೂರಕವಾಗಿಲ್ಲ ಎಂದು ನೌಕರರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಸರ್ಕಾರವು ಆರ್ಥಿಕ ಹೊರೆಯ ನೆಪವೊಡ್ಡಿ ಬೇಡಿಕೆಗಳನ್ನು ತಳ್ಳಿಹಾಕುತ್ತಿರುವುದರಿಂದ, ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿಯಬೇಕಾಗಿದೆ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುವುದರಿಂದ ಸಮಾಜದ ವಿವಿಧ ವರ್ಗದ ಜನರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ನಿತ್ಯವೂ ಬೆಂಗಳೂರಿನಂತಹ ನಗರಗಳಲ್ಲಿ ಲಕ್ಷಾಂತರ ಮಂದಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಮುಷ್ಕರದಿಂದ ಅವರ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಲಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವವರು ಅನಿವಾರ್ಯವಾಗಿ ದುಬಾರಿ ಖಾಸಗಿ ಬಸ್‌ಗಳು ಅಥವಾ ರೈಲುಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಐದು ಸಾವಿರ ತರಬೇತಿ ಚಾಲಕರು ಇದ್ದಾರೆ. ಅವರನ್ನು ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೇ, ಖಾಸಗಿ ಬಸ್ ಮಾಲೀಕರ ಸಂಘದೊಂದಿಗೆ ಮಾತನಾಡಿದ್ದು, ಖಾಸ್ ಬಸ್‌ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.
ಈ ನಡುವೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜತೆ ಮಾತುಕತೆ ವಿಫಲವಾಗಿದ್ದರೂ ಸಹ ನೌಕರರ ಸಂಘವು ಇನ್ನೂ ಮುಕ್ತ ಅವಕಾಶ ನೀಡಿದೆ. ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಮುಖಂಡರು ಹೇಳಿದ್ದಾರೆ. ಅಲ್ಲದೇ, ಅಗತ್ಯವೆನಿಸಿದರೆ ಮುಖ್ಯಮಂತ್ರಿಗಳ ಜತೆಯೂ ಚರ್ಚೆ ನಡೆಸಲು ಸಿದ್ಧ ಎಂದಿದ್ದಾರೆ.

