
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆಗೆ ಸಾರಿಗೆ ಇಲಾಖೆಯು ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಶಕ್ತಿ ಯೋಜನೆ ದುರ್ಬಳಕೆಗೆ ತಡೆ; ಕೆಎಸ್ಆರ್‌ಟಿಸಿಯಿಂದ ಕಠಿಣ ಮಾರ್ಗಸೂಚಿ ಜಾರಿ
ಮೊದಲ ಹಂತದಲ್ಲಿ ದಂಡ ವಿಧಿಸುವುದರಿಂದ ಆರಂಭಿಸಿ, ಪ್ರಕರಣದ ಗಂಭೀರತೆ ಮತ್ತು ಪುನರಾವರ್ತನೆ ಆಧಾರದ ಮೇಲೆ ಅಮಾನತು ಹಾಗೂ ವಜಾ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್‌ಗಳ ದುರ್ಬಳಕೆ ತಡೆಯುವ ಸಲುವಾಗಿ ಕೆಎಸ್‌ಆರ್‌ಟಿಸಿ ನಿಗಮವು ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಉಚಿತ ಟಿಕೆಟ್ ವಿತರಣೆಯಲ್ಲಿ ಕೇಳಿಬರುತ್ತಿರುವ ಲೋಪಗಳು ಹಾಗೂ ಸಾರಿಗೆ ಸಂಸ್ಥೆಗೆ ಆಗುತ್ತಿರುವ ನಷ್ಟ ತಡೆಯುವ ಸಲುವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
2023 ಜೂನ್ 11 ರಿಂದ ರಾಜ್ಯದ ಮಹಿಳೆಯರಿಗೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಕೆಲ ಸಿಬ್ಬಂದಿ ಈ ಯೋಜನೆಯನ್ನು ಅಕ್ರಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು.
ಕೇಳಿಬಂದ ಆರೋಪಗಳೇನು?
ಹೊರರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಶೂನ್ಯ ಮೌಲ್ಯದ ಉಚಿತ ಟಿಕೆಟ್ ನೀಡಿ, ಅವರಿಂದ ಪೂರ್ಣ ಪ್ರಮಾಣದ ಟಿಕೆಟ್ ಹಣ ವಸೂಲಿ ಮಾಡುತ್ತಿದ್ದರು. ಆ ಹಣವನ್ನು ಸಂಸ್ಥೆಗೆ ಜಮೆ ಮಾಡದೆ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದ ಆರೋಪ ಕೇಳಿ ಬಂದಿತ್ತು. ನಿಗಮದಿಂದ ಸಿಗುವ ಪ್ರೋತ್ಸಾಹಧನ ಹಾಗೂ ಕಮಿಷನ್ ಪಡೆಯುವ ದುರುದ್ದೇಶದಿಂದ ಅನಗತ್ಯವಾಗಿ ಹೆಚ್ಚಿನ ಉಚಿತ ಟಿಕೆಟ್ಗಳನ್ನು ವಿತರಿಸಿ, ನಂತರ ಅವುಗಳನ್ನು ಹರಿದು ಹಾಕಲಾಗುತ್ತಿತ್ತು ಎನ್ನಲಾಗಿದೆ.
ಮೂರು ಹಂತಗಳಲ್ಲಿ ಶಿಸ್ತುಕ್ರಮ
ಟಿಕೆಟ್ ದುರ್ಬಳಕೆಯನ್ನು ಮೂರು ಹಂತಗಳಲ್ಲಿ ತಡೆಯಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಮೂರು ಟಿಕೆಟ್‌ಗಳವರೆಗೆ ಉಚಿತ ಟಿಕೆಟ್ ದುರ್ಬಳಕೆ ಕಂಡುಬಂದರೆ ಅದನ್ನು ಸಾಮಾನ್ಯ ಪ್ರಕರಣವಾಗಿ ಪರಿಗಣಿಸಲಾಗುತ್ತದೆ. ನಾಲ್ಕರಿಂದ ಐದು ಟಿಕೆಟ್‌ಗಳ ಅಕ್ರಮ ಪತ್ತೆಯಾದರೆ ರೆಡ್ ಜೋನ್‌ನಲ್ಲಿ ಇರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಕಂಡುಬಂದರೆ ಅಸಾಧಾರಣ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಮೊದಲ ಹಂತದಲ್ಲಿ ದಂಡ ವಿಧಿಸುವುದರಿಂದ ಆರಂಭಿಸಿ, ಪ್ರಕರಣದ ಗಂಭೀರತೆ ಮತ್ತು ಪುನರಾವರ್ತನೆ ಆಧಾರದ ಮೇಲೆ ಅಮಾನತು ಹಾಗೂ ವಜಾ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

