
ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್ ಚಾಲಕ ಫಕೀರಪ್ಪ
ಏಕಾಏಕಿ ಹೊತ್ತಿ ಉರಿದ ಕೆಎಸ್ಆರ್ಟಿಸಿ 'ಪಲ್ಲಕ್ಕಿ' ಬಸ್, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ 17 ಪ್ರಯಾಣಿಕರು
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬೆಂಕಿಯ ಜ್ವಾಲೆಯನ್ನು ಗಮನಿಸಿದ ಚಾಲಕ ಫಕೀರಪ್ಪ ಅವರು ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ 'ಪಲ್ಲಕ್ಕಿ' ಬಸ್ಸೊಂದು ಏಕಾಏಕಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿರುವ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ 17 ಮಂದಿ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪಲ್ಲಕ್ಕಿ ಬಸ್ಸು ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬೆಂಕಿಯ ಜ್ವಾಲೆಯನ್ನು ಗಮನಿಸಿದ ಚಾಲಕ ಫಕೀರಪ್ಪ ಅವರು ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರನ್ನು ತಕ್ಷಣವೇ ಕೆಳಗೆ ಇಳಿಸಿದ್ದಾರೆ. ಚಾಲಕನ ಈ ತ್ವರಿತ ಕಾರ್ಯಾಚರಣೆ ಹಾಗೂ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ಎಲ್ಲಾ 17 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದು, ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ನೋಡ ನೋಡುತ್ತಿದ್ದಂತೆಯೇ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

