
ಕರ್ನಾಟಕ ಪೊಲೀಸ್ ಇಲಾಖೆಯ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯಾದ್ಯಂತ ಲಿಖಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಕೆಎಸ್‌ಪಿ ಕಾನ್ಸ್‌ಟೇಬಲ್ ಪರೀಕ್ಷೆ ಸುಗಮ; ವಿಜಯಪುರದಲ್ಲಿ ಗೊಂದಲ
ಕೆಎಸ್‌ಪಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ರಾಜ್ಯಾದ್ಯಂತ ಸುಗಮವಾಗಿ ನಡೆದಿದ್ದು, ವಿಜಯಪುರದಲ್ಲಿ ಪ್ರಶ್ನೆ ಪತ್ರಿಕೆ ವಿಳಂಬದಿಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪೊಲೀಸ್ ಇಲಾಖೆಯ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯಾದ್ಯಂತ ಲಿಖಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಸುಮಾರು ನಾಲ್ಕೂವರೆ ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. ಬೆಳಗ್ಗೆಯಿಂದಲೇ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಸಂಚಾರ ಹೆಚ್ಚಾಗಿದ್ದು, ನಿಗದಿತ ಸಮಯಕ್ಕೆ ಪರೀಕ್ಷಾ ಪ್ರಕ್ರಿಯೆ ಆರಂಭವಾಯಿತು.
ಹಿಂದಿನ ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದ ಹಿನ್ನೆಲೆ ಈ ಬಾರಿ ಪರೀಕ್ಷಾ ಪ್ರಾಧಿಕಾರ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದ್ದು, ಮೊಬೈಲ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿತ್ತು. ಅಭ್ಯರ್ಥಿಗಳ ಪ್ರವೇಶ ಪತ್ರ, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಪರೀಕ್ಷಾ ಕೊಠಡಿಗಳಿಗೆ ಪ್ರವೇಶ ಕಲ್ಪಿಸಲಾಯಿತು. ಯಾವುದೇ ಅಕ್ರಮ ನಡೆಯದಂತೆ ಕೇಂದ್ರಗಳ ಸುತ್ತ ಪೊಲೀಸ್ ಬಂದೋಬಸ್ತ್‌ನ್ನು ಬಿಗಿಗೊಳಿಸಲಾಗಿತ್ತು.
ವಿಜಯಪುರದಲ್ಲಿ ಪ್ರಶ್ನೆ ಪತ್ರಿಕೆ ವಿಳಂಬ
ರಾಜ್ಯದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆದರೂ, ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಬಾ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ ಉಂಟಾಯಿತು. ಅಭ್ಯರ್ಥಿಗಳ ಆರೋಪದಂತೆ ಬೆಳಗ್ಗೆ 10.30ಕ್ಕೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸುಮಾರು ಅರ್ಧ ಗಂಟೆ ತಡವಾಗಿ ವಿತರಿಸಲಾಯಿತು. ಇದರಿಂದ ಪರೀಕ್ಷಾ ಸಮಯದ ಮೇಲೆ ಪರಿಣಾಮ ಬೀರಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಭ್ಯರ್ಥಿಗಳ ಪ್ರತಿಭಟನೆ, ಜಿಲ್ಲಾಧಿಕಾರಿಗಳ ಭೇಟಿ
ಪ್ರಶ್ನೆ ಪತ್ರಿಕೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿದರು. ಕೆಲವರು ಕಾಲೇಜಿನ ಮುಖ್ಯ ಗೇಟ್‌ಗೆ ಹಾನಿ ಉಂಟುಮಾಡಿದ್ದು, ಪರಿಸ್ಥಿತಿ ಉದ್ವಿಗ್ನವಾಗಿತ್ತು. ಬಳಿಕ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಆನಂದ್ ಕೆ. ಅಭ್ಯರ್ಥಿಗಳ ಅಹವಾಲು ಆಲಿಸಿ, ಪರೀಕ್ಷಾ ಕೇಂದ್ರದ ಅಧಿಕಾರಿಗಳಿಂದ ವಿಳಂಬದ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಭವಿಷ್ಯದ ಬಗ್ಗೆ ಅಭ್ಯರ್ಥಿಗಳ ಆತಂಕ
ತಿಂಗಳುಗಳ ಕಾಲ ಸಿದ್ಧತೆ ನಡೆಸಿದ ಬಳಿಕ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳು, ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಉಂಟಾದ ವಿಳಂಬದಿಂದ ಮಾನಸಿಕ ಒತ್ತಡ ಎದುರಿಸಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ನಿರ್ಲಕ್ಷ್ಯದಿಂದ ಪರೀಕ್ಷೆಯ ಗುಣಮಟ್ಟ ಹಾಗೂ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕವಾಗಿ ನಿರ್ವಹಿಸುವಂತೆ ಆಗ್ರಹಿಸಿದರು.

