ಕ್ರೀಡಾ ಇಲಾಖೆಗೆ ನೀಡಿದ್ದ ಭೂಮಿ ಮರಳಿ ಕೆಎಸ್ಐಸಿ ವಶಕ್ಕೆ; ಹೋರಾಟಕ್ಕೆ ಮಣಿದ ಸರ್ಕಾರ
x

ಕ್ರೀಡಾ ಇಲಾಖೆಗೆ ನೀಡಿದ್ದ ಭೂಮಿ ಮರಳಿ ಕೆಎಸ್ಐಸಿ ವಶಕ್ಕೆ; ಹೋರಾಟಕ್ಕೆ ಮಣಿದ ಸರ್ಕಾರ

ರೇಷ್ಮೆ ನಿಗಮದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಕಾರ್ಖಾನೆಯ ಭವಿಷ್ಯ ಹಾಗೂ ರೇಷ್ಮೆ ಪರಂಪರೆಗೆ ಧಕ್ಕೆಯಾಗಲಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು.


ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನೀಡಿದ್ದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಭೂಮಿಯ ಹಸ್ತಾಂತರ ಪ್ರಕ್ರಿಯೆಗೆ ಕೊನೆಗೂ ತಡೆ ಬಿದ್ದಿದೆ. ಕ್ರೀಡಾ ಇಲಾಖೆಗೆ ನೀಡಲಾಗಿದ್ದ ಬೈರಾಪುರ ಗ್ರಾಮದ ಸರ್ವೇ ನಂ. 22/1 ಎ, 22/2, 23/1ಡಿ ಹಾಗೂ 23/2 ರಲ್ಲಿನ ಮೈಸೂರು ರೇಷ್ಮೆ ಕಾರ್ಖಾನೆಯ ಒಟ್ಟು 5 ಎಕರೆ ಭೂಮಿಯನ್ನು ಸರ್ಕಾರವು ವಾಪಸ್‌ ಪಡೆದಿದೆ. ಆ ಮೂಲಕ ಮೈಸೂರಿನ ಸಾಂಸ್ಕೃತಿಕ ಹೆಗ್ಗುರುತಾದ ಮೈಸೂರು ರೇಷ್ಮೆಯ ಅಸ್ಮಿತೆ ಮತ್ತು ಸಾವಿರಾರು ಕಾರ್ಮಿಕರ ಉದ್ಯೋಗ ಭದ್ರತೆಯನ್ನು ಕೆಎಸ್‌ಐಸಿ ರಕ್ಷಿಸಿದೆ.

ಹೋರಾಟಕ್ಕೆ ಸಂದ ಜಯ

ಕೆಎಸ್‌ಐಸಿ ಭೂಮಿ ಉಳಿಸಲು ಕಾರ್ಮಿಕ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಮತ್ತು ಸಾರ್ವಜನಿಕರು ನಿರಂತರವಾಗಿ ನಡೆಸಿದ ಸಂಘಟಿತ ಹೋರಾಟಕ್ಕೆ ಸರ್ಕಾರ ಮಣಿದಿದ್ದು, ಕ್ರೀಡಾ ಇಲಾಖೆಗೆ ನೀಡಿದ್ದ ಭೂಮಿಯನ್ನು ಮರಳಿ ಪಡೆದುಕೊಂಡಿದೆ. ಕೆಎಸ್‌ಐಸಿ ಭೂಮಿ ಹಸ್ತಾಂತರದ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ರೇಷ್ಮೆ ನಿಗಮದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಕಾರ್ಖಾನೆಯ ಭವಿಷ್ಯ ಹಾಗೂ ರೇಷ್ಮೆ ಪರಂಪರೆಗೆ ಧಕ್ಕೆಯಾಗಲಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಹೋರಾಟಗಳೂ ನಡೆದಿದ್ದವು.

"ಇದು ಕೇವಲ ಭೂಮಿಯ ವಾಪಸಾತಿಯಲ್ಲ, ಬದಲಿಗೆ ಮೈಸೂರಿನ ರೇಷ್ಮೆ ಪರಂಪರೆ ನಂಬಿರುವ ಸಾವಿರಾರು ಕುಟುಂಬಗಳ ಭವಿಷ್ಯದ ರಕ್ಷಣೆ. ಜನರ ಮತ್ತು ಕಾರ್ಮಿಕರ ಸಂಘಟಿತ ಧ್ವನಿಗೆ ಸಂದ ಜಯವಾಗಿದೆ." ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಸ್ವಯಂಚಾಲಿತ ರೀಲಿಂಗ್‌ ಯಂತ್ರಗಳ ಅಳವಡಿಕೆ

ಕೆಎಸ್‌ಐಸಿ ಘಟಕದಲ್ಲಿ ಗುಣಮಟ್ಟದ ಕಚ್ಚಾ ರೇಷ್ಮೆ ದಾರ ಉತ್ಪಾದನೆಗೆ ಬಳಸಲಾಗುವ ಕಪಿಲಾ ನದಿಯ ನೀರು ಮೃದುವಾಗಿದ್ದು ಕಚ್ಚಾ ರೇಷ್ಮೆ ದಾರದ ಉತ್ಪಾದನೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ 4 ಸ್ವಯಂಚಾಲಿತ ರೀಲಿಂಗ್ ಯಂತ್ರಗಳನ್ನು ಅಳವಡಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ರೀಲಿಂಗ್‌ ಯಂತ್ರಗಳಿಗೆ ದಿನನಿತ್ಯ 10 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಕಾರ್ಖಾನೆಯ ತ್ಯಾಜ್ಯ ನೀರು ವಿಲೇವಾರಿ ಘಟಕ ನಿರ್ಮಿಸುವಂತೆ ನೊಟೀಸ್ ಜಾರಿ ಮಾಡಿದ್ದು, ಅದರಂತೆ ತ್ಯಾಜ್ಯ ನೀರು ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಕಾರ್ಖಾನೆ ಪಕ್ಕದಲ್ಲಿಯೇ ಬಾಯ್ಲರ್‌ಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಒಂದು ಬಾಯ್ಲರ್ ಯಂತ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಯ್ಲರ್ ಯಂತ್ರಗಳಿಂದ ಹೆಚ್ಚಿನ ಹೊಗೆ ಮತ್ತು ಧೂಳು ಬರುತ್ತಿರುವುದರಿಂದ ವಾಯುಮಾಲಿನ್ಯ ಉಂಟಾಗಲಿದೆ. ಸುರಕ್ಷತಾ ದೃಷ್ಟಿಯಿಂದ ಈ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಸೂಕ್ತವಾಗಿರುವುದಿಲ್ಲ ಎಂದು ಕೆಐಎಸ್‌ಸಿ ಹೇಳಿದೆ.

ಕೆಐಎಸ್‌ಸಿ ಉತ್ಪನ್ನಗಳಿಗೆ ಬೇಡಿಕೆ

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತವು ಒಂದು ಪ್ರತಿಷ್ಠಿತ ಉದ್ದಿಮೆಯಾಗಿ ಅಭಿವೃದ್ಧಿಯಾಗಿದ್ದು, ಮೈಸೂರು ರೇಷ್ಮೆ ಸೀರೆಗಳಿಗೆ ದೇಶ ಹಾಗೂ ಹೊರ ದೇಶಗಳಲ್ಲೂ ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೂರೈಸುವ ನಿಟ್ಟಿನಲ್ಲಿ ಉತ್ಪಾದನಾ ಘಟಕಗಳಾದ ರೇಷ್ಮೆ ನೇಯ್ಗೆ ಕಾರ್ಖಾನೆ, ಮೈಸೂರು ರೇಷ್ಮೆ ನೇಯ್ಗೆ ಘಟಕ, ಚನ್ನಪಟ್ಟಣಗಳಲ್ಲಿ ಆಧುನಿಕ ತಂತ್ರಜ್ಞಾನದ ಯಂತ್ರಗಳು ಮತ್ತು ಉತ್ತಮ ಗುಣಮಟ್ಟದ ಉತ್ಪಾದನೆ ಆಧುನೀಕರಣಗೊಳಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ನಿಗಮದ ಎಲ್ಲಾ ಘಟಕಗಳಲ್ಲಿಯೂ ಪ್ರಸ್ತುತ ಖಾಲಿ ಇರುವ ಸ್ಥಳವು ಅವಶ್ಯಕತೆ ಇದೆ.

ಮಾ.5 ರಂದು ರೇಷ್ಮೆ ನೂಲು ತೆಗೆಯುವ ಘಟಕದ ಆವರಣದಲ್ಲಿರುವ ಒಟ್ಟು 5 ಎಕರೆ ಜಮೀನನ್ನು ತಿ.ನರಸೀಪುರ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಕುರಿತಂತೆ ಪರಿಶೀಲನೆ ನಡೆಸಿದ್ದು, ಈ ಜಾಗವು ಕ್ರೀಡಾಂಗಣ ನಿರ್ಮಾಣಕ್ಕಾಗಿ ತಾಂತ್ರಿಕವಾಗಿ ಸೂಕ್ತವಲ್ಲ ಎಂದು ತೀರ್ಮಾನಿಸಲಾಗಿರುತ್ತದೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಆಡಳಿತಾತ್ಮಕ ಕಾರಣಗಳಿಂದ ರೇಷ್ಮೆ ಇಲಾಖೆ ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಸೇರಿದ ವಿವಿಧ ಸರ್ವೆ ನಂಬರುಗಳ ಜಮೀನಿನಲ್ಲಿ 5 ಎಕರೆ ಜಮೀನನ್ನು ಹಿಂಪಡೆಯಲಾಗಿದೆ ಎಂದು ಕೆಎಸ್‌ಐಸಿ ಆದೇಶದಲ್ಲಿ ತಿಳಿಸಿದೆ.

Read More
Next Story