
Mysore sandal: ಮೊದಲ ಬಾರಿಗೆ 2 ಸಾವಿರ ಕೋಟಿ ರೂ. ಗಡಿ ದಾಟಿದ ವಹಿವಾಟು
ಸಂಸ್ಥೆಯು ಸ್ಥಾಪನೆಯಾದ ದಿನದಿಂದ 1 ಸಾವಿರ ಕೋಟಿ ರೂ. ವಹಿವಾಟು ತಲುಪಲು ಬರೋಬ್ಬರಿ 105 ವರ್ಷ ತೆಗೆದುಕೊಂಡಿತ್ತು. ಮುಂದಿನ 1 ಸಾವಿರ ಕೋಟಿ ರೂ.ಗಳ ಗುರಿಯನ್ನು ಸಂಸ್ಥೆಯು ಕೇವಲ 4 ವರ್ಷಗಳಲ್ಲಿ ತಲುಪಿದೆ.
ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಕೇವಲ ಒಂದು ಕಾರ್ಖಾನೆಯಾಗಿ ಉಳಿದಿಲ್ಲ, ಅದು ರಾಜ್ಯದ ಔದ್ಯೋಗಿಕ ಶಕ್ತಿಯ ಸಂಕೇತವಾಗಿ ಹೊರಹೊಮ್ಮಿದೆ. 2025-26ನೇ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ಬೃಹತ್ ವಹಿವಾಟು ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಕೇವಲ ವಹಿವಾಟಷ್ಟೇ ಅಲ್ಲದೆ 507 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ.
ಸಂಸ್ಥೆಯು ಸ್ಥಾಪನೆಯಾದ ದಿನದಿಂದ ಮೊದಲ ಒಂದು ಸಾವಿರ ಕೋಟಿ ರೂ. ವಹಿವಾಟು ತಲುಪಲು ಬರೋಬ್ಬರಿ 105 ವರ್ಷಗಳನ್ನು ತೆಗೆದುಕೊಂಡಿತ್ತು. ಅಚ್ಚರಿಯೆಂದರೆ, ಮುಂದಿನ ಒಂದು ಸಾವಿರ ಕೋಟಿ ರೂ.ಗಳ ಗುರಿಯನ್ನು ಸಂಸ್ಥೆಯು ಕೇವಲ 4 ವರ್ಷಗಳಲ್ಲಿ ತಲುಪಿದೆ. 2022-23ರಲ್ಲಿ 1,375 ಕೋಟಿ ರೂ. ಇದ್ದ ವಹಿವಾಟು, ಕಳೆದ ಮೂರು ವರ್ಷಗಳಲ್ಲಿ 641 ಕೋಟಿ ರೂ.ಗಳಷ್ಟು ಏರಿಕೆ ಕಂಡು 2,016 ಕೋಟಿ ರೂ.ಗೆ ತಲುಪಿದೆ. ಇದು ಸಂಸ್ಥೆಯ ಆರ್ಥಿಕ ಶಿಸ್ತು ಮತ್ತು ಮಾರುಕಟ್ಟೆ ವಿಸ್ತರಣೆಯ ಫಲವಾಗಿದೆ.
ಉತ್ಪಾದನಾ ಸಾಮರ್ಥ್ಯ ಹಾಗೂ ನಾವೀನ್ಯತೆ
ಯಾವುದೇ ಹೊಸ ನೇಮಕಾತಿ ಅಥವಾ ಭಾರಿ ಪ್ರಮಾಣದ ಯಂತ್ರೋಪಕರಣಗಳ ಖರೀದಿಯಿಲ್ಲದೆ ಈ ಸಾಧನೆ ಮಾಡಿರುವುದು ವಿಶೇಷ. ಸಂಸ್ಥೆಯ ಮೂಲ ಉತ್ಪಾದನಾ ಸಾಮರ್ಥ್ಯ 26 ಸಾವಿರ ಮೆಟ್ರಿಕ್ ಟನ್ ಇತ್ತು. ಆದರೆ, ಪರಿಣಾಮಕಾರಿ ಕಾರ್ಯವಿಧಾನ ಮತ್ತು ಸಿಬ್ಬಂದಿಯ ದಕ್ಷತೆಯಿಂದಾಗಿ 2025-26ರಲ್ಲಿ 47 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯನ್ನು ಸಾಧಿಸಲಾಗಿದೆ. ಮೊದಲು ಕೇವಲ 34 ಉತ್ಪನ್ನಗಳಿಗೆ ಸೀಮಿತವಾಗಿದ್ದ ಕೆಎಸ್‌ಡಿಎಲ್ ಕಳೆದ ಮೂರು ವರ್ಷಗಳಲ್ಲಿ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಸಂಸ್ಥೆಯ ಬುಟ್ಟಿಯಲ್ಲಿ 94 ವಿವಿಧ ಉತ್ಪನ್ನಗಳಿವೆ. ಇದು ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಸಂಸ್ಥೆ ಸ್ಪಂದಿಸುತ್ತಿರುವುದನ್ನು ತೋರಿಸುತ್ತದೆ.
ಆಧುನಿಕ ಮಾರುಕಟ್ಟೆ, ಇ-ಕಾಮರ್ಸ್ ಕ್ರಾಂತಿ
ಈ ಕುರಿತು ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸಾಂಪ್ರದಾಯಿಕ ಮಾರಾಟ ಪದ್ಧತಿಯಿಂದ ಹೊರಬಂದ ಕೆಎಸ್‌ಡಿಎಲ್ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ವ್ಯಾಪಾರ ಮತ್ತು ಇ-ಕಾಮರ್ಸ್‌ಗೆ ಹೆಚ್ಚಿನ ಒತ್ತು ನೀಡಿದೆ. ಈ ವಲಯದಲ್ಲಿ 420 ಕೋಟಿ ರೂ. ವಹಿವಾಟು ನಡೆದಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ವೇದಿಕೆಗಳ ಮೂಲಕ 120 ಕೋಟಿ ರೂ. ದಾಖಲೆಯ ಮಾರಾಟ ಕಂಡಿದೆ. ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಿ ರಾಷ್ಟ್ರಗಳಿಗೆ ಮೈಸೂರು ಸ್ಯಾಂಡಲ್ ಸೋಪನ್ನು ರಫ್ತು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುನೈಟೆಡ್ ಎಮಿರೇಟ್ಸ್ ಮಾರುಕಟ್ಟೆಯನ್ನು ಪ್ರವೇಶಿಸುವ ಬೃಹತ್ ಯೋಜನೆ ಸಿದ್ಧವಾಗಿದೆ ಎಂದು ಹೇಳಿದರು.
ರೈತರೊಂದಿಗೆ ಕೈಜೋಡಿಸಿದ ಕೆಎಸ್‌ಡಿ.ಎಲ್
ಶ್ರೀಗಂಧದ ಎಣ್ಣೆಯೇ ಮೈಸೂರು ಸ್ಯಾಂಡಲ್ ಸೋಪಿನ ಜೀವಾಳ. ಅದರ ಸುಸ್ಥಿರ ಪೂರೈಕೆಗಾಗಿ ಕೆಎಸ್‌ಡಿಎಲ್ ರೈತರನ್ನು ತನ್ನ ಬೆಳವಣಿಗೆಯ ಪಾಲುದಾರರನ್ನಾಗಿ ಮಾಡಿಕೊಂಡಿದೆ. 'ಗ್ರೋ ಮೋರ್ ಸ್ಯಾಂಡಲ್' ಕಾರ್ಯಕ್ರಮದಡಿ ಮುಂದಿನ 10 ವರ್ಷಗಳಲ್ಲಿ 10 ಸಾವಿರ ಎಕರೆ ಶ್ರೀಗಂಧದ ನೆಡುತೋಪು ಬೆಳೆಸುವ ಗುರಿ ಇದೆ.
ರೈತರಿಗೆ ಪ್ರತಿ ಗಂಧದ ಗಿಡಕ್ಕೆ 3 ವರ್ಷಗಳವರೆಗೆ ತಲಾ 500 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ರೈತರಿಂದ ನೇರವಾಗಿ 174 ಟನ್ ಶ್ರೀಗಂಧವನ್ನು ಖರೀದಿಸಿ, ಅವರಿಗೆ 6.08 ಕೋಟಿ ರೂ.ಗಳನ್ನು ನೇರವಾಗಿ ಪಾವತಿಸಲಾಗಿದೆ. ಜಿಕೆವಿಕೆ ಮತ್ತು ವಿಜಯಪುರ ಕೃಷಿ ವಿದ್ಯಾಲಯಗಳಲ್ಲಿ ಶ್ರೀಗಂಧದ ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಮೂಲಕ ವೈಜ್ಞಾನಿಕವಾಗಿ ಶ್ರೀಗಂಧ ಬೆಳೆಸಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಬೊಕ್ಕಸಕ್ಕೆ ಕೊಡುಗೆ
ಲಾಭದಾಯಕ ಸಂಸ್ಥೆಯಾಗಿ ಕೆಎಸ್‌ಡಿಎಲ್ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ಕೊಡುಗೆ ನೀಡುತ್ತಿದೆ. ಈ ವರ್ಷ ಸರ್ಕಾರಕ್ಕೆ 157 ಕೋಟಿ ರೂ. ಲಾಭಾಂಶ ನೀಡಲಾಗುತ್ತಿದ್ದು, ಇದು ಕಳೆದ ವರ್ಷಕ್ಕಿಂತ (135 ಕೋಟಿ ರೂ.) 22 ಕೋಟಿ ರೂ. ಹೆಚ್ಚಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಹಸ್ತಾಂತರಿಸಲಾಗಿದೆ.
2028ರ ವೇಳೆಗೆ 3 ಸಾವಿರ ಕೋಟಿ ರೂ. ಮತ್ತು 2030ರ ವೇಳೆಗೆ 5 ಸಾವಿರ ಕೋಟಿ ರೂ. ವಹಿವಾಟಿನ ಬೃಹತ್ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಿಜಯಪುರದಲ್ಲಿ 50 ಎಕರೆ ಜಾಗದಲ್ಲಿ 229 ಕೋಟಿ ರೂ. ವೆಚ್ಚದ ನೂತನ ಉತ್ಪಾದನಾ ಘಟಕ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಸಂಸ್ಥೆಯ ಯಶಸ್ಸಿನ ಹಿಂದೆ ಸಾವಿರಾರು ನೌಕರರ ಶ್ರಮವಿದೆ. ಇದನ್ನು ಗುರುತಿಸಿರುವ ಆಡಳಿತ ಮಂಡಳಿಯು ವೇತನ ಒಪ್ಪಂದದ ಮೂಲಕ 4.83 ಕೋಟಿ ರೂ.ಯನ್ನು ನೌಕರರಿಗೆ ನೀಡಿದೆ. ನೌಕರರಿಗೆ ವಿಶೇಷ ಪ್ರೋತ್ಸಾಹಧನ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ಡಾಬಸಪೇಟೆ, ಮೈಸೂರು ಮತ್ತು ಶಿವಮೊಗ್ಗದಲ್ಲಿರುವ ಸಂಸ್ಥೆಯ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡು ಶಾಶ್ವತ ಆದಾಯದ ಮೂಲ ಸೃಷ್ಟಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

