
ಶಾಲಾ-ಕಾಲೇಜುಗಳ ಬಳಿ 'ಬಜ್‌ಬಾಲ್ಸ್' ಮದ್ಯ ಮಾರಾಟ: ಪ್ರಕರಣ ದಾಖಲಿಸಿಕೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ನೋಡಲು ಆಕರ್ಷಕವಾದ ಹಣ್ಣಿನ ಜ್ಯೂಸ್‌ನಂತೆ ಕಾಣುವ ಈ ಪಾನೀಯದಲ್ಲಿ ಶೇಕಡಾ 15ರಷ್ಟು ಮದ್ಯ (ಆಲ್ಕೋಹಾಲ್) ಹಾಗೂ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ರಾಜಧಾನಿ ಬೆಂಗಳೂರಿನ ಶಾಲಾ-ಕಾಲೇಜುಗಳ ಸುತ್ತಮುತ್ತ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು 'ಬಜ್‌ಬಾಲ್ಸ್' (BuzzBallz) ಎಂಬ ಆಲ್ಕೋಹಾಲ್ ಭರಿತ ಪಾನೀಯವನ್ನು ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (KSCPCR) ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕ್ಕೆ ಮುಂದಾಗಿದೆ.
ನೋಡಲು ಆಕರ್ಷಕವಾದ ಹಣ್ಣಿನ ಜ್ಯೂಸ್‌ನಂತೆ ಕಾಣುವ ಈ ಪಾನೀಯದಲ್ಲಿ ಶೇಕಡಾ 15ರಷ್ಟು ಮದ್ಯ (ಆಲ್ಕೋಹಾಲ್) ಹಾಗೂ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಕ್ಕಳು ಮತ್ತು ಯುವಜನತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದ್ದು, ವಿದ್ಯಾರ್ಥಿಗಳಿಗೆ ಅರಿವಿಲ್ಲದಂತೆಯೇ ಅವರು ಮದ್ಯ ವ್ಯಸನಿಗಳಾಗುವ ಅಪಾಯವಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ಅತಿಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಹಾಗೂ ಶಾಲಾ-ಕಾಲೇಜುಗಳ ಸಮೀಪ ಈ ಅಪಾಯಕಾರಿ ಪಾನೀಯ ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿರುವುದು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಂದ ದೃಢಪಟ್ಟಿದೆ.
ಲ್ಯಾಬ್ ಪರೀಕ್ಷೆಗೆ ಸೂಚನೆ, ಐದು ದಿನಗಳಲ್ಲಿ ವರದಿ ಸಲ್ಲಿಕೆಗೆ ಗಡುವು
ಶೈಕ್ಷಣಿಕ ಸಂಸ್ಥೆಗಳ ಸಮೀಪ ಇಷ್ಟೊಂದು ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಮುಕ್ತವಾಗಿ ಮಾರಾಟ ಮಾಡುವುದು ಕಾನೂನುಬಾಹಿರ ಹಾಗೂ ಅತ್ಯಂತ ಗಂಭೀರ ಅಪರಾಧ ಎಂದು ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್. ಕೋಸಂಬೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಈ 'ಬಜ್‌ಬಾಲ್ಸ್' ಪಾನೀಯವನ್ನು ಪ್ರಯೋಗಾಲಯದ (ಲ್ಯಾಬ್) ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಇದು ಮಕ್ಕಳಿಗೆ ಹಾನಿಕಾರಕ ಎಂದು ಲ್ಯಾಬ್ ವರದಿಯಲ್ಲಿ ಸಾಬೀತಾದರೆ, ತಕ್ಷಣವೇ ವಿದ್ಯಾರ್ಥಿಗಳಿಗೆ ಇದು ಸಿಗದಂತೆ ನಿರ್ಬಂಧಿಸಲು ಅಗತ್ಯ ಹೆಜ್ಜೆಗಳನ್ನು ಇಡಬೇಕು ಹಾಗೂ ಕೈಗೊಂಡ ಕ್ರಮಗಳ ಕುರಿತು ಐದು ದಿನಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಆಯೋಗವು ಔಷಧ ನಿಯಂತ್ರಣ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

