ʼಸ್ವಚ್ಛತೆ, ಮೂಲಸೌಕರ್ಯದಲ್ಲಿ ರಾಜಿಯಾಗದಿರಿʼ – ಸಚಿವ ಕೃಷ್ಣ ಬೈರೇಗೌಡ ಕಠಿಣ ಸಂದೇಶ
x

ʼಸ್ವಚ್ಛತೆ, ಮೂಲಸೌಕರ್ಯದಲ್ಲಿ ರಾಜಿಯಾಗದಿರಿʼ – ಸಚಿವ ಕೃಷ್ಣ ಬೈರೇಗೌಡ ಕಠಿಣ ಸಂದೇಶ

ಸಾರ್ವಜನಿಕರಿಂದ ಸ್ವಚ್ಛತೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು, ಹೊರಮಾವು, ಅಗರ ಕೆರೆ, ರಾಮಮೂರ್ತಿನಗರ ಸೇರಿದಂತೆ ಇತರೆ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


Click the Play button to hear this message in audio format

ರಾಜಧಾನಿ ಬೆಂಗಳೂರಿನ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ಯಾವುದೇ ಲೋಪವನ್ನು ಸಹಿಸುವುದಿಲ್ಲ ಎಂದು ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ನಗರದ ಪೂರ್ವ ವಲಯದ ವಿವಿಧ ಪ್ರದೇಶಗಳಲ್ಲಿ ಮುಂಜಾನೆಯೇ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ನಗರದ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಮತ್ತು ಕಸ್ತೂರಿನಗರ ಪ್ರದೇಶಗಳಿಗೆ ಸಚಿವರು ದಿಢೀರ್ ಭೇಟಿ ನೀಡಿದರು. ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಿಂದ ಸ್ವಚ್ಛತೆ ಮತ್ತು ರಸ್ತೆ ನಿರ್ವಹಣೆಯ ಕುರಿತು ಕೇಳಿಬರುತ್ತಿದ್ದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸ್ಥಳದಲ್ಲೇ ಪರಿಸ್ಥಿತಿಯನ್ನು ಅವಲೋಕಿಸಿದರು. ತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ಹೂಳು ತೆಗೆಯುವಿಕೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮತ್ತು ರಸ್ತೆ ಗುಂಡಿಗಳ ಮುಚ್ಚುವಿಕೆ ಅವರ ಪರಿಶೀಲನೆಯ ಪ್ರಮುಖ ವಿಷಯಗಳಾಗಿದ್ದವು.

ತ್ಯಾಜ್ಯ ನಿರ್ವಹಣೆ: ಅಧಿಕಾರಿಗಳಿಗೆ ಸಚಿವರ ತರಾಟೆ

ಹೊರಮಾವಿನ ಗಾಂಧಿ ಸರ್ಕಲ್‌ನಲ್ಲಿ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆಯನ್ನು ಪರಿಶೀಲಿಸಿದ ಸಚಿವರು, ಅಲ್ಲಿನ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವ ಬಗ್ಗೆ ಪರಿಶೀಲನೆ ನಡೆಸಿದರು. ಪ್ರತಿ ಮನೆಯಿಂದ ನಿಗದಿತ ಸಮಯದಲ್ಲಿ ಕಸ ಸಂಗ್ರಹವಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು. ನಿರ್ಮಾಣ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಬಿಸಾಡುವವರ ಮೇಲೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಅಗರ ಕೆರೆ - ಒತ್ತುವರಿ ತೆರವು

ಅಗರ ಕೆರೆಯ ಸುತ್ತಮುತ್ತಲಿನ ಸ್ವಚ್ಛತೆಯನ್ನು ಪರಿಶೀಲಿಸಿದಾಗ, ಅಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ಕಂಡು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಕೆರೆಯ ಸುತ್ತಮುತ್ತಲಿನ ಒತ್ತುವರಿಗಳ ಬಗ್ಗೆ ಮಾಹಿತಿ ಪಡೆದ ಅವರು, ತಕ್ಷಣವೇ ಒತ್ತುವರಿ ತೆರವುಗೊಳಿಸಿ ಕೆರೆಯ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು. ವಿಶೇಷವಾಗಿ, ಕೆರೆಯ ಪಕ್ಕದಲ್ಲಿದ್ದ ಬೆಸ್ಕಾಂನ ವಿದ್ಯುತ್ ಪ್ಯಾನಲ್‌ಗಳು ಅಪಾಯಕಾರಿ ಸ್ಥಿತಿಯಲ್ಲಿದ್ದನ್ನು ಗಮನಿಸಿದ ಸಚಿವರು, ಅವುಗಳನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿದರು.

ಜಯಂತಿನಗರದಲ್ಲಿ ಜಲಮಂಡಳಿಯಿಂದ ನಡೆದಿದ್ದ ಕಾಮಗಾರಿಗಳ ನಂತರ ರಸ್ತೆಯನ್ನು ಸರಿಯಾಗಿ ಮುಚ್ಚದಿರುವ ಬಗ್ಗೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು. ರಸ್ತೆ ಅಗೆದ ಬಳಿಕ ಅದನ್ನು ಹಳೆಯ ಸ್ಥಿತಿಗೆ ತರುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಇದರಿಂದ ಸವಾರರಿಗೆ ಅಪಾಯ ಉಂಟಾಗುತ್ತದೆ ಎಂದು ಎಚ್ಚರಿಸಿದರು. ಹಾಗೆಯೇ, ರಾಜಕಾಲುವೆಗಳನ್ನು ಮಳೆಗಾಲಕ್ಕೂ ಮುನ್ನವೇ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಮತ್ತು ಹೂಳು ತೆಗೆಯುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

"ಕೆಲಸ ಮಾಡದವರಿಗೆ ಕಾಯಂ ಹುದ್ದೆ ಏಕೆ?" - ಸಚಿವರ ಕಟು ನುಡಿ

ಪರಿಶೀಲನೆಯ ಸಂದರ್ಭದಲ್ಲಿ, ಪೌರಕಾರ್ಮಿಕರು ತಮ್ಮನ್ನು ಕಾಯಂ ನೌಕರರನ್ನಾಗಿ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಅತ್ಯಂತ ಕಟುವಾದ ಶಬ್ದಗಳಲ್ಲಿ ಅಸಮಾಧಾನ ಹೊರಹಾಕಿದರು. ನಗರದಲ್ಲಿ ಸುಮಾರು ಶೇ.30 ರಷ್ಟು ಪೌರಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುತ್ತಿಲ್ಲ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸದ ಕಾರಣ ಜನ ರಸ್ತೆಗೆ ಕಸ ಎಸೆಯುತ್ತಿದ್ದಾರೆ. ನಗರ ಗಬ್ಬು ನಾರುತ್ತಿದ್ದರೆ ಸಾರ್ವಜನಿಕರಿಂದ ಬೈಸಿಕೊಳ್ಳುವುದು ನಾವು. ಕೆಲಸಕ್ಕೆ ಬಾರದವರಿಗೆ, ಬಂದರೂ ಕೆಲಸ ಮಾಡದವರಿಗೆ ಸರ್ಕಾರ ಏಕೆ ಕಾಯಂ ಭಾಗ್ಯ ಕಲ್ಪಿಸಬೇಕು?" ಎಂದು ಪ್ರಶ್ನಿಸಿದರು. ಇದು ಪೌರಕಾರ್ಮಿಕರ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಧಿಕಾರಿಗಳಿಗೆ ಎಚ್ಚರಿಕೆ

ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಸ್ತೂರಿನಗರದಲ್ಲಿ ನಿರ್ಮಾಣ ಸಾಮಗ್ರಿಗಳು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದ ಸಚಿವರು, ಕಾಮಗಾರಿಯನ್ನು ತ್ವರಿತಗೊಳಿಸುವುದರ ಜತೆಗೆ, ಸಾರ್ವಜನಿಕ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು. ಸ್ವಚ್ಛತೆ ಮತ್ತು ಮೂಲಸೌಕರ್ಯದ ವಿಷಯದಲ್ಲಿ ಯಾವುದೇ ರಾಜಿಯನ್ನು ಸಹಿಸುವುದಿಲ್ಲ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ದೈನಂದಿನ ಮೇಲ್ವಿಚಾರಣೆ ನಡೆಸಬೇಕು. ಕರ್ತವ್ಯದಲ್ಲಿ ಲೋಪ ಕಂಡುಬಂದರೆ ಶಿಸ್ತಿನ ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

Read More
Next Story