ಸೌಲಭ್ಯಗಳಿಗಿಂತ ಛಲ ಮುಖ್ಯ: ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಬದುಕಿನ ಪಾಠ
x

ಸೌಲಭ್ಯಗಳಿಗಿಂತ ಛಲ ಮುಖ್ಯ: ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಬದುಕಿನ ಪಾಠ

ವಿದ್ಯಾರ್ಥಿಗಳ ಸಾಧನೆಯ ಹಿಂದೆ ತಿಂಗಳುಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಬದ್ಧತೆ ಅಡಗಿರುತ್ತದೆ. ಇಂತಹ ಸಾಧನೆಯನ್ನು ಸಂಭ್ರಮಿಸುವುದು ನಮ್ಮ ಹೆಮ್ಮೆಯ ವಿಷಯ ಎಂದು ಸಚಿವರು ಹೇಳಿದ್ದಾರೆ.


Click the Play button to hear this message in audio format

ಯುವಶಕ್ತಿಯೇ ದೇಶದ ನಿಜವಾದ ಸಂಪತ್ತು ಮತ್ತು ಭವಿಷ್ಯದ ರೂವಾರಿಗಳು. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಿ, ಅವರನ್ನು ಉತ್ತೇಜಿಸುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲದೆ ಇಡೀ ಸಮಾಜದ ಕರ್ತವ್ಯ ಎಂದು ಗ್ರೇಟರ್‌ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ನಮ್ಮೂರು ಹೆಮ್ಮೆ ಹೆಸರಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮತ್ತು ಪದವಿ ಪೂರ್ವ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 181 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಬೈರೇಗೌಡ, ಶೈಕ್ಷಣಿಕ ಕ್ಷೇತ್ರದಲ್ಲಿ 99ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವುದು ಸಾಮಾನ್ಯ ವಿಷಯವಲ್ಲ. ವಿದ್ಯಾರ್ಥಿ ರಾತ್ರೋರಾತ್ರಿ ಸಾಧನೆ ಮಾಡಲು ಸಾಧ್ಯವಿಲ್ಲ, ಅದರ ಹಿಂದೆ ತಿಂಗಳುಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಬದ್ಧತೆ ಅಡಗಿರುತ್ತದೆ. ಇಂತಹ ಸಾಧನೆಯನ್ನು ಸಂಭ್ರಮಿಸುವುದು ನಮ್ಮ ಹೆಮ್ಮೆಯ ವಿಷಯ. ತಮ್ಮ ರಾಜಕೀಯ ಮತ್ತು ಸಾಮಾಜಿಕ ಬದುಕಿನ ಅನುಭವಗಳನ್ನು ಹಂಚಿಕೊಂಡ ಸಚಿವರು, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಉದಾಹರಣೆಯೊಂದನ್ನು ನೀಡಿದರು. ನನ್ನ ಕ್ಷೇತ್ರದಲ್ಲಿ ಒಂದು ಕಡೆ ಕಟ್ಟಡವೂ ಇಲ್ಲದ, ಕೇವಲ ಒಬ್ಬರೇ ಶಿಕ್ಷಕರಿದ್ದ ಪ್ರೌಢಶಾಲೆ ಶೇ. 100 ಫಲಿತಾಂಶ ಪಡೆಯುತ್ತದೆ. ಮತ್ತೊಂದು ಕಡೆ ಎಲ್ಲ ಸವಲತ್ತುಗಳಿದ್ದರೂ ಶೇ. 35-40 ರಷ್ಟು ಮಾತ್ರ ಫಲಿತಾಂಶ ಬರುತ್ತದೆ. ಇದು ನಮಗೆ ಕಲಿಸುವ ಪಾಠವೇನೆಂದರೆ—ಸೌಲಭ್ಯಗಳ ಕೊರತೆಯನ್ನು ಬೊಟ್ಟು ಮಾಡಿ ಸೋಲಿಗೆ ಕಾರಣಗಳನ್ನು ಹುಡುಕುವುದಲ್ಲ. ಇದ್ದ ಸವಲತ್ತಿನಲ್ಲೇ ಸಾಧಿಸಿ ತೋರಿಸುವ ಛಲ ನಮ್ಮಲ್ಲಿರಬೇಕು ಎಂದು ಹೇಳಿದರು.

ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆಗಳ ಕಥೆ

ವಿದ್ಯಾರ್ಥಿಗಳು ಗುರಿ ಸಾಧಿಸುವ ಹಾದಿಯಲ್ಲಿ ಬರುವ ಯಾವುದೇ ಅಡ್ಡಗೋಡೆ ಅಥವಾ ಸವಾಲುಗಳನ್ನು ಕೇವಲ ಪರಿಶ್ರಮದ ಮೂಲಕವೇ ಮೆಟ್ಟಿ ನಿಲ್ಲಬಹುದು ಎಂದು ಧೈರ್ಯ ತುಂಬಿದರು. "ನಾನು ಪ್ರತೀ ವರ್ಷ ನನ್ನ ಕ್ಷೇತ್ರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸುತ್ತೇನೆ. ಅಲ್ಲಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ಮಕ್ಕಳಿಗಿಂತಲೂ ಹೆಚ್ಚು ಅಂಕಗಳನ್ನು ಪಡೆದ ಪಾನಿಪುರಿ ಮಾರುವವರ ಮಗನ ಸಾಧನೆಯನ್ನು ಕಂಡಿದ್ದೇನೆ. ಸಾಧನೆಗೆ ಶಾಲೆಗಿಂತಲೂ ಹೆಚ್ಚಾಗಿ ಓದಿನಲ್ಲಿನ ಶ್ರದ್ಧೆ ಮತ್ತು ಪರಿಶ್ರಮ ಮುಖ್ಯ ಎಂಬುದಕ್ಕೆ ಇಂತಹ ನೂರಾರು ಉದಾಹರಣೆಗಳು ನಮ್ಮ ಮುಂದಿವೆ" ಎಂದು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಿದರು. ಅಲ್ಲದೇ, ಇಂತಹ ಐತಿಹಾಸಿಕ ತಾಣದಲ್ಲಿ ಸಾಧಕರನ್ನು ಸನ್ಮಾನಿಸುವುದರಿಂದ ವಿದ್ಯಾರ್ಥಿಗಳಿಗೆ ಒಂದು ರೀತಿಯ ಗೌರವದ ಭಾವ ಮೂಡುತ್ತದೆ. ಇದು ಇತರ ವಿದ್ಯಾರ್ಥಿಗಳಿಗೂ ಮುಂದೆ ಏನಾದರೂ ಸಾಧಿಸಬೇಕು ಎಂಬ ಸ್ಪೂರ್ತಿಯನ್ನು ನೀಡುತ್ತದೆ ಎಂದು ತಿಳಿಸಿದರು.

ಪ್ರತಿಭೆ ಎಂದರೆ ಕೇವಲ ಅಂಕಗಳಲ್ಲ..!

ಶೈಕ್ಷಣಿಕ ಅಂಕಗಳನ್ನು ಮಾತ್ರ ಸಾಧನೆ ಎಂದು ಕರೆಯಲಾಗದು ಎಂದು ಎಚ್ಚರಿಸಿದ ಕೃಷ್ಣ ಬೈರೇಗೌಡರು, "ಕ್ರೀಡೆ, ಕಲೆ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಅಥವಾ ಯಾವುದೇ ವೃತ್ತಿಪರ ಕ್ಷೇತ್ರವಿರಲಿ, ಪ್ರತಿಯೊಂದು ಕ್ಷೇತ್ರದ ಕೌಶಲ್ಯವೂ ಸಮಾನ ಗೌರವಕ್ಕೆ ಅರ್ಹವಾಗಿದೆ. ನೀವು ಜೀವನದಲ್ಲಿ ಅಂತಿಮವಾಗಿ ಏನಾಗುತ್ತೀರಿ ಎನ್ನುವುದಕ್ಕಿಂತ ಮುಖ್ಯವಾಗಿ, ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಎಷ್ಟೊಂದು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತೀರಿ ಎಂಬುದು ಮುಖ್ಯ" ಎಂದು ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿಯನ್ನು ತೋರಿಸಿಕೊಟ್ಟರು.

ಗೌರವಕ್ಕೆ ಪಾತ್ರರಾದ ಸಾಧಕರು

‘ನಮ್ಮೂರು ಹೆಮ್ಮೆ’ ಕಾರ್ಯಕ್ರಮದಲ್ಲಿ ಒಟ್ಟು 181 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 106 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು, 45 ಪಿಯುಸಿ ವಿದ್ಯಾರ್ಥಿಗಳು, 30 ಜಿಬಿಎ ಶಾಲೆಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರಿಗೆ ಗೌರವದ ಸಂಕೇತವಾಗಿ ಪ್ರಮಾಣಪತ್ರ, ಪದಕ, ನೆನಪಿನ ಕಾಣಿಕೆ, ಸ್ಮಾರ್ಟ್ ವಾಚ್, ಬ್ಯಾಗ್ ಹಾಗೂ ಅಗತ್ಯ ಶೈಕ್ಷಣಿಕ ಪರಿಕರಗಳನ್ನು ನೀಡಿ ಸನ್ಮಾನಿಸಲಾಯಿತು.

Read More
Next Story