
ಕೆಪಿಟಿಸಿಎಲ್ ತಾಂತ್ರಿಕ ಕ್ರಾಂತಿ: ಡ್ರೋನ್ ಕಣ್ಣಲ್ಲಿ ವಿದ್ಯುತ್ ಗ್ರಿಡ್
ಕೆಪಿಟಿಸಿಎಲ್ ಇದೀಗ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯುತ್ ವ್ಯತ್ಯಯವನ್ನು ಶೇ. 85 ರಷ್ಟು ತಗ್ಗಿಸಿ, ದೇಶದಲ್ಲೇ ಮಾದರಿಯಾಗಿದೆ.
ಕರ್ನಾಟಕದ ವಿದ್ಯುತ್ ಪ್ರಸರಣ ವ್ಯವಸ್ಥೆಯು ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ರಾಜ್ಯಾದ್ಯಂತ ಹರಡಿಕೊಂಡಿರುವ ಬೃಹತ್ ವಿದ್ಯುತ್ ಮಾರ್ಗಗಳ ತಪಾಸಣೆ ಮತ್ತು ನಿರ್ವಹಣೆಯು ಇತ್ತೀಚಿನವರೆಗೂ ಅತ್ಯಂತ ಸವಾಲಿನ ಮತ್ತು ಅಪಾಯಕಾರಿ ಕೆಲಸವಾಗಿತ್ತು. ಆದರೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಇದೀಗ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ, ವಿದ್ಯುತ್ ವ್ಯತ್ಯಯವನ್ನು ಶೇ. 85 ರಷ್ಟು ತಗ್ಗಿಸಿ, ದೇಶದಲ್ಲೇ ಮಾದರಿಯಾಗಿದೆ. ಇದು ಕೇವಲ ತಾಂತ್ರಿಕ ಪ್ರಗತಿಯಲ್ಲ, ಬದಲಾಗಿ ರಾಜ್ಯದ ಕೈಗಾರಿಕೆ, ಕೃಷಿ ಮತ್ತು ಸಾರ್ವಜನಿಕ ಜೀವನಕ್ಕೆ ನಿರಂತರ ವಿದ್ಯುತ್ ನೀಡುವ ಭರವಸೆಯಾಗಿದೆ.
ಕೆಪಿಟಿಸಿಎಲ್ ಬಳಸುತ್ತಿರುವ ಡ್ರೋನ್‌ಗಳು ಸಾಮಾನ್ಯವಾದವುಗಳಲ್ಲ. ಇವು ಹೈ-ರೆಸಲ್ಯೂಶನ್ ಕ್ಯಾಮೆರಾಗಳು, ಥರ್ಮಲ್ ಇಮೇಜಿಂಗ್ ಮತ್ತು ಲಿಡಾರ್ ಸೆನ್ಸಾರ್‌ಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಹೊಂದಿವೆ. ಈ ತಂತ್ರಜ್ಞಾನವು ದಟ್ಟವಾದ ಅರಣ್ಯಗಳು, ದುರ್ಗಮ ಗುಡ್ಡಗಾಡು ಪ್ರದೇಶಗಳು ಹಾಗೂ ಜನನಿಬಿಡ ನಗರಗಳಲ್ಲಿರುವ ವಿದ್ಯುತ್ ಟವರ್‌ಗಳನ್ನು ಬರಿಗಣ್ಣಿಗೆ ಕಾಣದ ನಿಖರತೆಯೊಂದಿಗೆ ತಪಾಸಣೆ ಮಾಡಬಲ್ಲದು. ವಿದ್ಯುತ್ ತಂತಿಗಳು ಅಥವಾ ಉಪಕರಣಗಳಲ್ಲಿನ ಸಡಿಲ ಸಂಪರ್ಕದಿಂದ ಉಂಟಾಗುವ 'ಹಾಟ್‌ಸ್ಪಾಟ್'ಗಳನ್ನು ಇದು ತಕ್ಷಣವೇ ಪತ್ತೆ ಮಾಡುತ್ತದೆ. ಅಗ್ನಿ ಅನಾಹುತ ಅಥವಾ ವಿದ್ಯುತ್ ವ್ಯತ್ಯಯಕ್ಕೂ ಮುನ್ನವೇ ದುರಸ್ತಿ ಮಾಡಲು ಇದು ಅತ್ಯಗತ್ಯ. ಇದು ಟವರ್‌ಗಳ ಎತ್ತರ, ತಂತಿಗಳ ನೇತಾಡುವಿಕೆ ಮತ್ತು ಸುತ್ತಮುತ್ತಲಿನ ಮರಗಳ ಅಂತರವನ್ನು ನಿಖರವಾಗಿ ಅಳೆಯುತ್ತದೆ.
ದತ್ತಾಂಶ-ಆಧಾರಿತ ನಿರ್ವಹಣೆ
ಈ ಡ್ರೋನ್ ತಪಾಸಣೆಯು ಕೇವಲ ದೋಷಗಳನ್ನು ಗುರುತಿಸುವುದಕ್ಕೆ ಸೀಮಿತವಾಗಿಲ್ಲ. ಸಂಗ್ರಹಿಸಿದ ದತ್ತಾಂಶವು 'ಡಿಜಿಟಲ್ ಟ್ವಿನ್ ಪ್ಲಾಟ್‌ಫಾರ್ಮ್' ನೊಂದಿಗೆ ಸಂಯೋಜನೆಗೊಳ್ಳಲಿದೆ. ಇದರಿಂದ ಬೆಂಗಳೂರಿನ ಇಂಧನ ಭವನದಲ್ಲಿ ಕುಳಿತೇ ಇಂಜಿನಿಯರ್‌ಗಳು ರಾಜ್ಯದ ಮೂಲೆಮೂಲೆಯಲ್ಲಿರುವ ಗ್ರಿಡ್‌ಗಳನ್ನು ಮೇಲ್ವಿಚಾರಣೆ ಮಾಡಬಹುದು. ಕೆಪಿಟಿಸಿಎಲ್ ತನ್ನ ಈ ಯೋಜನೆಯಡಿ ಭಾರಿ ಯಶಸ್ಸನ್ನು ಕಂಡಿದೆ. ವಿದ್ಯುತ್ ವ್ಯತ್ಯಯ ಪ್ರಕರಣಗಳು 519 ರಿಂದ ಕೇವಲ 73 ಕ್ಕೆ ಇಳಿದಿವೆ (ಶೇ.85 ಕಡಿತ). 220kV ಸಾಮರ್ಥ್ಯದ 2,500+ ಕಿ.ಮೀ. ಮತ್ತು 400kV ಸಾಮರ್ಥ್ಯದ 843 ಕಿ.ಮೀ. ಮಾರ್ಗಗಳ ತಪಾಸಣೆ ಯಶಸ್ವಿಯಾಗಿ ನಡೆದಿದೆ.
1.5 ಲಕ್ಷಕ್ಕೂ ಹೆಚ್ಚು ತಾಂತ್ರಿಕ ಸಮಸ್ಯೆಗಳನ್ನು ಪತ್ತೆ ಹಚ್ಚಿ, ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ. ದೋಷಗಳನ್ನು ಪತ್ತೆ ಹಚ್ಚಿದ ನಂತರ, ಅವುಗಳನ್ನು ಒಟ್ಟಾರೆಯಾಗಿ ಸರಿಪಡಿಸಲು 5 ಬ್ಯಾಚ್ ನಿರ್ವಹಣಾ ವಿಂಡೋಗಳನ್ನು ಸೃಷ್ಟಿಸಲಾಗಿದೆ. ಇದು ಸಮಯ ಮತ್ತು ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಉಳಿಸಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, 45,000 ಕಿ.ಮೀ. ಉದ್ದದ ವಿದ್ಯುತ್ ಮಾರ್ಗಗಳನ್ನು ಸಿಬ್ಬಂದಿಯೇ ಖುದ್ದಾಗಿ ಪರಿಶೀಲಿಸುವುದು ಅಸಾಧ್ಯದ ಕೆಲಸ. ಡ್ರೋನ್ ಬಳಕೆಯಿಂದ ಈಗ 360-ಡಿಗ್ರಿ ತಪಾಸಣೆ ಸಾಧ್ಯವಾಗಿದೆ. ಬರಿಗಣ್ಣಿಗೆ ಕಾಣಿಸದ ಸಣ್ಣ ದೋಷಗಳನ್ನೂ ಗುರುತಿಸಲು ಇದು ಎಂಜಿನಿಯರ್‌ಗಳಿಗೆ ಶಕ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು, ಸಮಸ್ಯೆ ಬಂದ ಮೇಲೆ ದುರಸ್ತಿ ಮಾಡುವ ಬದಲು, ಬರುವ ಮುನ್ನವೇ ತಡೆಯುವ ತಂತ್ರಜ್ಞಾನ ಇದು. ಇದು ವಿದ್ಯುತ್ ಗ್ರಿಡ್ ಅನ್ನು ಬಲಪಡಿಸುವುದಲ್ಲದೆ, ನಮ್ಮ ಲೈನ್‌ಮನ್‌ಗಳ ಜೀವ ಸುರಕ್ಷತೆಗೂ ದೊಡ್ಡ ಆದ್ಯತೆ ನೀಡಿದೆ ಎಂದು ವಿವರಿಸಿದ್ದಾರೆ.
ಕೆಪಿಟಿಸಿಎಲ್‌ನ ಈ ತಂತ್ರಜ್ಞಾನ ಅಳವಡಿಕೆಯು ಮುಂದಿನ ದಿನಗಳಲ್ಲಿ ಜಿಐಎಸ್ (Geographic Information System) ಮತ್ತು ಇಆರ್‌ಪಿ (Enterprise Resource Planning) ವ್ಯವಸ್ಥೆಗಳೊಂದಿಗೆ ಸಂಪೂರ್ಣವಾಗಿ ಏಕೀಕರಣಗೊಳ್ಳಲಿದೆ. ಇದು ಇಡೀ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು 'ಸ್ಮಾರ್ಟ್ ಗ್ರಿಡ್' ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೆಪಿಟಿಸಿಎಲ್‌ನ ಈ ಡ್ರೋನ್ ಕ್ರಾಂತಿಯು ತಾಂತ್ರಿಕ ನಾವೀನ್ಯತೆ ಜನಸಾಮಾನ್ಯರ ಬದುಕಿನಲ್ಲಿ ಹೇಗೆ ಬದಲಾವಣೆ ತರಬಲ್ಲದು ಎಂಬುದಕ್ಕೆ ನಿದರ್ಶನವಾಗಿದೆ. ರೈತರು, ಕೈಗಾರಿಕೋದ್ಯಮಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ, ಕರ್ನಾಟಕವು ಡಿಜಿಟಲ್ ಇಂಧನ ನಿರ್ವಹಣೆಯಲ್ಲಿ ದೇಶಕ್ಕೆ ದಾರಿದೀಪವಾಗಿದೆ.

