
ಎಐ ಆಧಾರಿತ ಚಿತ್ರ
ವಿದ್ಯುತ್ ಜಾಲಕ್ಕೆ ಹೈಟೆಕ್ ರಕ್ಷಣೆ; ಜಾಗತಿಕ ಮಟ್ಟದ ಸೈಬರ್ ಭದ್ರತೆ ಅಳವಡಿಸಿಕೊಂಡ ಕೆಪಿಟಿಸಿಎಲ್
ಸಾಂಪ್ರದಾಯಿಕ ನೆಟ್‌ವರ್ಕ್ ಭದ್ರತಾ ವ್ಯವಸ್ಥೆಗಳಿಗೆ ಸೆಡ್ಡು ಹೊಡೆಯುವಂತೆ ಈ ಹೊಸ 'ಝೀರೋ ಟ್ರಸ್ಟ್' ಮಾದರಿಯನ್ನು ರೂಪಿಸಲಾಗಿದೆ ಎಂದು ಕೆಪಿಟಿಸಿಎಲ್ ತಿಳಿಸಿದೆ.
ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಜಾಗತಿಕ ಮಟ್ಟದ ಅತ್ಯಾಧುನಿಕ 'ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್' ಅನ್ನು ಅಳವಡಿಸಿಕೊಳ್ಳುವ ಮೂಲಕ, ಈ ತಂತ್ರಜ್ಞಾನ ಹೊಂದಿದ ದೇಶದ ಮೊದಲ ಅತ್ಯಾಧುನಿಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ಎಂಬ ಹೆಗ್ಗಳಿಕೆಗೆ ಕೆಪಿಟಿಸಿಎಲ್ ಪಾತ್ರವಾಗಿದೆ.
ರಾಜ್ಯದ ಪ್ರಮುಖ ವಿದ್ಯುತ್ ಮೂಲಸೌಕರ್ಯಗಳು ಹಾಗೂ 3 ಸಾವಿರಕ್ಕೂ ಅಧಿಕ ಡಿಜಿಟಲ್ ಬಳಕೆದಾರರನ್ನು ಸೈಬರ್ ದಾಳಿಗಳಿಂದ ರಕ್ಷಿಸಲು ಈ ಕ್ರಾಂತಿಕಾರಿ ಕ್ರಮ ಕೈಗೊಳ್ಳಲಾಗಿದೆ.
ʼನಂಬಬೇಡಿ, ಸದಾ ಪರಿಶೀಲಿಸಿʼ
ಸಾಂಪ್ರದಾಯಿಕ ನೆಟ್‌ವರ್ಕ್ ಭದ್ರತಾ ವ್ಯವಸ್ಥೆಗಳಿಗೆ ಸೆಡ್ಡು ಹೊಡೆಯುವಂತೆ ಈ ಹೊಸ 'ಝೀರೋ ಟ್ರಸ್ಟ್' ಮಾದರಿಯನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ನೆಟ್‌ವರ್ಕ್ ಒಳಗಿನ ಯಾರನ್ನೂ ಸುಲಭವಾಗಿ ನಂಬುವಂತಿಲ್ಲ. ಪ್ರತಿಯೊಬ್ಬ ಬಳಕೆದಾರರ ಲಾಗಿನ್ ವಿನಂತಿಯನ್ನು ನಿರಂತರವಾಗಿ ಪರಿಶೀಲಿಸಿದ ಬಳಿಕವಷ್ಟೇ ಸಿಸ್ಟಮ್ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಕೆಪಿಟಿಸಿಎಲ್ ಪ್ರಸಿದ್ಧ ಝ್ಸ್ಕೇಲರ್ ಸಂಸ್ಥೆಯ ಕ್ಲೌಡ್ ಆಧಾರಿತ 'ಶೂನ್ಯ ನಂಬಿಕೆ ವಿನಿಮಯʼ ವೇದಿಕೆಯನ್ನು ಬಳಸಿಕೊಂಡಿದ್ದು, ಸಾಂಪ್ರದಾಯಿಕ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಲೋಪದೋಷಗಳಿಗೆ ಸಂಪೂರ್ಣ ಬ್ರೇಕ್ ಹಾಕಿದೆ.
ಯಾವೆಲ್ಲಾ ಸೈಬರ್ ಗಂಡಾಂತರಗಳಿಂದ ರಕ್ಷಣೆ?
ಈ ಹೈಟೆಕ್ ವ್ಯವಸ್ಥೆಯು ಕೆಪಿಟಿಸಿಎಲ್‌ನ ಕಾರ್ಯಾಚರಣೆ, ಎಂಜಿನಿಯರಿಂಗ್, ಹಣಕಾಸು ಹಾಗೂ ಆಡಳಿತ ವಿಭಾಗಗಳಿಗೆ ಕೆಳಗಿನ ಅಪಾಯಗಳಿಂದ ಅಭೇದ್ಯ ಸುರಕ್ಷತೆ ಒದಗಿಸಲಿದೆ. ಫಿಶಿಂಗ್ ಮತ್ತು ಮಾಲ್‌ವೇರ್ ದಾಳಿಗಳು, ರ್ಯಾನ್ಸಮ್‌ವೇರ್ ಹಾಗೂ ಡೇಟಾ ಸೋರಿಕೆ, ಪಾಸ್‌ವರ್ಡ್ ಕಳವು ಮತ್ತು ಅನಧಿಕೃತ ಪ್ರವೇಶದಿಂದ ರಕ್ಷಣೆ ನೀಡುತ್ತದೆ.
ದೇಶದಲ್ಲೇ ಪ್ರಥಮ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಿಡ್ ಆಧುನೀಕರಣದ ಭಾಗವಾಗಿ ಕೆಪಿಟಿಸಿಎಲ್ ದೇಶದಲ್ಲೇ ಮಾದರಿಯಾಗುವಂತಹ ಭವಿಷ್ಯದ ಸುರಕ್ಷಿತ ಡಿಜಿಟಲ್ ನೆಟ್‌ವರ್ಕ್ ಅನ್ನು ಯಶಸ್ವಿಯಾಗಿ ನಿರ್ಮಿಸಿದೆ. "ವಿದ್ಯುತ್ ಮೂಲಸೌಕರ್ಯವನ್ನು ಆಧುನೀಕರಿಸುತ್ತಿರುವ ಈ ಸಂದರ್ಭದಲ್ಲಿ, ಸೈಬರ್ ಭದ್ರತೆಯೂ ಭೌತಿಕ ವಿದ್ಯುತ್ ಜಾಲದಷ್ಟೇ ಮಹತ್ವದ್ದಾಗಿದೆ. ಈ ಉಪಕ್ರಮವು ತಂತ್ರಜ್ಞಾನ ಆಧಾರಿತ ಇಂಧನ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಗೆ ಕೊಂಡೊಯ್ಯಲಿದೆ." ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
"ಡಿಜಿಟಲ್ ವ್ಯವಸ್ಥೆಯ ಯಶಸ್ಸಿಗೆ ಡಿಜಿಟಲ್ ವಿಶ್ವಾಸ ಅಗತ್ಯ. ಈ ವ್ಯವಸ್ಥೆಯು ನಮ್ಮ ಮಹತ್ವದ ವಿದ್ಯುತ್ ಮೂಲಸೌಕರ್ಯಗಳಿಗೆ ಡಿಜಿಟಲ್ ರಕ್ಷಣೆ ಒದಗಿಸುವುದರ ಜೊತೆಗೆ, ಭವಿಷ್ಯದ ಇಂಟಲಿಜೆಂಟ್ ಗ್ರಿಡ್ ನಿರ್ಮಾಣಕ್ಕೆ ಭದ್ರ ಅಡಿಪಾಯವಾಗಲಿದೆ." ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

