KPSC ಅಕ್ರಮ: ಇಡಿ ಬಂಧನ ಭೀತಿಯಿಂದ IAS ಅಧಿಕಾರಿ ಜ್ಞಾನೇಂದ್ರ ಪರಾರಿ; ವಿಚಾರಣೆಯಿಂದ ಬಹಿರಂಗ
x

KPSC ಅಕ್ರಮ: ಇಡಿ ಬಂಧನ ಭೀತಿಯಿಂದ IAS ಅಧಿಕಾರಿ ಜ್ಞಾನೇಂದ್ರ ಪರಾರಿ; ವಿಚಾರಣೆಯಿಂದ ಬಹಿರಂಗ

ಪ್ರಭಾವಿಗಳ ಸಲಹೆಯಂತೆ ಬಟ್ಟೆ ಬ್ಯಾಗ್ ಜೊತೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ನೋಯ್ಡಾದಲ್ಲಿ ಬಾಡಿಗೆ ರೂಂ ಪಡೆದು ವಾಸ್ತವ್ಯ ಹೂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.


ಕೆಪಿಎಸ್ಸಿ ಪಶುವೈದ್ಯರ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಪ್ರಭಾವಿಗಳ ಸೂಚನೆಯಂತೆ ಪರಾರಿಯಾಗಿದ್ದ ಸಂಗತಿ ಸಿಐಡಿ ವಿಚಾರಣೆಯಿಂದ ಬಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಲೆಮರೆಸಿಕೊಳ್ಳಲು ಸೂಚನೆ ಕೊಟ್ಟಿದ್ದ ಆ ಪ್ರಭಾವಿಗಳು ಯಾರು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಪ್ರಭಾವಿ ವ್ಯಕ್ತಿಗಳು ನೀಡುತ್ತಿದ್ದ ನಿರಂತರ ಮಾಹಿತಿ ಹಾಗೂ ಸೂಚನೆ ಆಧಾರದ ಮೇಲೆಯೇ ಜ್ಞಾನೇಂದ್ರ ಕುಮಾರ್ ಅವರು ತಮ್ಮ ಸ್ಥಳ ಬದಲಾಯಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಬೆನ್ನಲ್ಲೇ ಜ್ಞಾನೇಂದ್ರ ಕುಮಾರ್ ಆತಂಕಕ್ಕೆ ಒಳಗಾಗಿದ್ದರು. ಮುಂದಿನ ಗುರಿ ತಾವೇ ಆಗಬಹುದು ಎಂಬುದನ್ನು ಅರಿತು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರಿನಿಂದ ಎಸ್ಕೇಪ್ ಆಗಲು ಯೋಜನೆ ರೂಪಿಸಿದ್ದರು.

ಪ್ರಭಾವಿಗಳ ಸಲಹೆಯಂತೆ ಬಟ್ಟೆ ಬ್ಯಾಗ್ ಜೊತೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ, ಅಲ್ಲಿಂದ ನೋಯ್ಡಾದಲ್ಲಿ ಬಾಡಿಗೆ ರೂಂ ಪಡೆದು ವಾಸ್ತವ್ಯ ಹೂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಗೆಳತಿಯ ಗಲಾಟೆ; ಕಪಾಳಮೋಕ್ಷ

ನೋಯ್ಡಾದಲ್ಲಿ ತಾವು ತಂಗಿದ್ದ ಕೊಠಡಿಗೆ ಜ್ಞಾನೇಂದ್ರ ಕುಮಾರ್ ಅವರು ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ ತಮ್ಮ ಗೆಳತಿಯನ್ನು ಕರೆಸಿಕೊಂಡಿದ್ದರು. ಈ ವೇಳೆ ಪ್ರಭಾವಿ ವ್ಯಕ್ತಿಯಿಂದ ಕರೆ ಬಂದು, "ನಿನ್ನ ಮೇಲೆ ಯಾವುದೇ ಕ್ಷಣದಲ್ಲಾದರೂ ಇಡಿ ದಾಳಿಯಾಗಬಹುದು. ಹಗರಣದ ಪ್ರಮುಖ ದಾಖಲೆಗಳು ಇಡಿ ಕೈಸೇರಿವೆ, ತಕ್ಷಣ ಸ್ಥಳ ಖಾಲಿ ಮಾಡು" ಎಂದು ಎಚ್ಚರಿಸಿದ್ದರು. ಈ ವಿಚಾರ ತಿಳಿದ ಜ್ಞಾನೇಂದ್ರ ಅವರ ಗೆಳತಿ ತೀವ್ರ ಕೋಪಗೊಂಡು, "ನಿನ್ನಿಂದಾಗಿ ನಾನು ತೊಂದರೆಗೆ ಸಿಲುಕುತ್ತೇನೆ" ಎಂದು ಕಪಾಳಕ್ಕೆ ಹೊಡೆದು ತೆರಳಿದ್ದರು ಎನ್ನಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿಯಿಂದ ಪಾಠ

ಪ್ರಭಾವಿ ವ್ಯಕ್ತಿಯ ಸೂಚನೆಯಂತೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ದೆಹಲಿಗೆ ತೆರಳಿ ಜ್ಞಾನೇಂದ್ರ ಕುಮಾರ್ ಅವರನ್ನು ಭೇಟಿಯಾಗಿದ್ದರು. ಇಡಿ ಅಧಿಕಾರಿಗಳು ಬಂಧಿಸಿದರೆ ಅಥವಾ ದಾಖಲೆಗಳನ್ನು ಮುಂದೆ ಇಟ್ಟಾಗ ಹೇಗೆ ಉತ್ತರಿಸಬೇಕು, ತನಿಖೆಯನ್ನು ಹೇಗೆ ಎದುರಿಸಬೇಕು ಎಂದು ಮಾರ್ಗದರ್ಶನ ನೀಡಿದ್ದರು ಎಂದು ತಿಳಿದುಬಂದಿದೆ.

ನಿವೃತ್ತ ಅಧಿಕಾರಿಯ ಭೇಟಿಯ ನಂತರ ಜ್ಞಾನೇಂದ್ರ ಕುಮಾರ್ ತಮ್ಮ ಮೂವರು ಐಎಎಸ್ ಬ್ಯಾಚ್‌ಮೇಟ್‌ಗಳನ್ನು ದೆಹಲಿಗೆ ಕರೆಸಿಕೊಂಡು, ನಾಲ್ವರೂ ಸೇರಿ ಶ್ರೀಲಂಕಾಗೆ ತೆರಳಿದ್ದರು. ಶ್ರೀಲಂಕಾದಲ್ಲಿ ಎರಡು ದಿನ ಉಳಿದುಕೊಂಡಿದ್ದಾಗ, ತಮ್ಮ ವಿರುದ್ಧ 'ಲುಕ್ಔಟ್ ನೋಟಿಸ್' ಹೊರಡಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿತ್ತು. ಲುಕ್ಔಟ್ ನೋಟಿಸ್ ಜಾರಿಯಾದರೆ ವಿಮಾನ ನಿಲ್ದಾಣದಲ್ಲೇ ಸಿಕ್ಕಿಬೀಳುವ ಭೀತಿಯಿಂದ ಕೊಲಂಬೊದಿಂದ ತಕ್ಷಣ ಚೆನ್ನೈಗೆ ಮರಳಿದ್ದರು.

ಆ ನಂತರ ಚೆನ್ನೈನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜ್ಞಾನೇಂದ್ರ ಅವರು ಪ್ರಭಾವಿ ವ್ಯಕ್ತಿಗಳ ಸೂಚನೆಯಂತೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಯಾವುದೇ ಕಾರಣಕ್ಕೂ ಇಡಿ ನೋಟಿಸ್‌ಗೆ ಉತ್ತರಿಸದಂತೆ ಅವರಿಗೆ ಸೂಚನೆ ಕೂಡ ನೀಡಿದ್ದರು ಎನ್ನಲಾಗಿದೆ.

ಸಿಐಡಿ ಆಫೀಸ್‌ನಲ್ಲೇ ಬಂಧನ

ಸಿಐಡಿ ನೋಟಿಸ್ ನೀಡಿ ವಿಚಾರಣೆಗೆ ಕರೆದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಎರಡು ದಿನ ಸಿಐಡಿ ಕಚೇರಿಗೆ ಹಾಜರಾಗಿದ್ದರು. ಎರಡನೇ ದಿನ ವಿಚಾರಣೆ ಮುಗಿಸಿ ಮನೆಗೆ ತೆರಳಲು ಸಿಐಡಿ ಕಚೇರಿಯಿಂದ ಹೊರಬರಲು ಮುಂದಾಗುತ್ತಿದ್ದಂತೆ, ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ "ಮನೆಯ ಬಳಿ ಇಡಿ ಅಧಿಕಾರಿಗಳು ಕಾಯುತ್ತಿದ್ದಾರೆ" ಎಂದು ಎಚ್ಚರಿಸಿದ್ದರು. ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಮತ್ತೆ ಸಿಐಡಿ ಕಚೇರಿಯೊಳಗೆ ಹೋಗಿದ್ದರು. ಈ ಹಿಂದೆ ನೀಡಿದ್ದ ನೋಟಿಸ್ಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಸಿಐಡಿ ಅಧಿಕಾರಿಗಳೇ ಅವರನ್ನು ಮಧ್ಯರಾತ್ರಿ ಬಂಧಿಸಿದ್ದರು.

ಪ್ರಸ್ತುತ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಹಗರಣದ ಮೂಲ, ಪ್ರಭಾವಿಗಳೊಂದಿಗಿನ ಸಂಪರ್ಕ ಹಾಗೂ ಪರಾರಿಯಾಗಲು ನೆರವಾದವರ ಜಾಲವನ್ನು ಭೇದಿಸಲು ವಿಚಾರಣೆ ಮುಂದುವರಿಸಿದ್ದಾರೆ.

Read More
Next Story