KPSC ಅಕ್ರಮ; ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ವಾರ್, ಕಿಂಗ್‌ಪಿನ್ ಜತೆ ಖಂಡ್ರೆ ಫೋಟೊ ಹಂಚಿಕೊಂಡ ಜೆಡಿಎಸ್
ಕೆಪಿಎಸ್‌ಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಬೆಂಗಳೂರಿನಲ್ಲಿ ಕೆ.ರತ್ನಪ್ರಭಾ ಸಾರಥ್ಯದಲ್ಲಿ ಮಹಿಳಾ ಉದ್ಯಮಿಗಳ ಸಮಾವೇಶ ನಡೆದಿದೆ.
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ತೀವ್ರಗೊಳಿಸಿದ್ದು, ಅಕ್ರಮದ ಜಾಲ ಮತ್ತಷ್ಟು ಆಳಕ್ಕೆ ಇಳಿಯುತ್ತಿದೆ. ಬಂಧಿತ ಐಎಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಕಿಂಗ್ಪಿನ್ ಬಸವರಾಜ್ ಕನ್ನಾಳೆ ಹಾಗೂ ಅಕ್ರಮ ಮಾರ್ಗದಲ್ಲಿ ಹುದ್ದೆ ಗಿಟ್ಟಿಸಿಕೊಂಡ ಅಭ್ಯರ್ಥಿಗಳ ವಿಚಾರಣೆಯಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಿಂಟ್ ಆಗುವ ಮುನ್ನವೇ 6 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲಿಸುತ್ತಿದ್ದೆ ಎಂದು ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ತಪ್ಪೊಪ್ಪಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ನಿವಾಸದ ಮೇಲೆ ನಡೆದ ದಾಳಿ ವೇಳೆ 2025ರ 'ಬಿ' ಗ್ರೂಪ್ ಹುದ್ದೆಗಳ ನೇಮಕಾತಿಯ 6 ಅಭ್ಯರ್ಥಿಗಳ ಪ್ರವೇಶಪತ್ರಗಳು ಪತ್ತೆಯಾಗಿವೆ. ಅಲ್ಲದೆ, ರೆಸಾರ್ಟ್‌ಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿ ಉತ್ತರ ಬರೆಸಲಾಗಿತ್ತು ಎಂಬ ಸತ್ಯವೂ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಆರ್‌ಡಿಪಿಆರ್ ಇಲಾಖೆಯ ಎಇಇ ಹುದ್ದೆಗಳ ನೇಮಕದಲ್ಲಿ ಆಗಿರುವ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ನಡುವೆ ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಕಿಂಗ್‌ಪಿನ್ ಜೊತೆಗಿರುವ ಫೋಟೊ ಹಂಚಿಕೊಂಡು ವಾಗ್ದಾಳಿ ನಡೆಸಿದೆ. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್, "KPSC ಅಧ್ಯಕ್ಷರನ್ನು ನೇಮಕ ಮಾಡಿದ್ದವರು ಯಾರು?, ಅವರ ಜತೆ ಸಂಪರ್ಕದಲ್ಲಿದ್ದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಕೆಪಿಎಸ್ಸಿ ಅಕ್ರಮದ ಪಿತಾಮಹ ಎನ್‌ಡಿಎ" ಎಂದು ಕಿಡಿಕಾರಿದ್ದಾರೆ. ತನಿಖೆಗೆ ಗೃಹ ಸಚಿವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಸರ್ಕಾರದ ಪರ ಕೌಂಟರ್ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೊಣೆ ವಹಿಸಲಾಗಿದೆ.
ಮುಡಾ: ಹೈಕೋರ್ಟ್ ಮಹತ್ವದ ತೀರ್ಪು ಇಂದು
ಮುಡಾ 50:50 ಅನುಪಾತದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ನೀಡಿದ್ದ ಕ್ಲೀನ್ ಚಿಟ್ (B-Report) ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಹೈಕೋರ್ಟ್ ಇಂದು ಸಂಜೆ ಮಹತ್ವದ ತೀರ್ಪು ನೀಡಲಿದೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ವಿಜಯನಗರದ ಬೆಲೆಬಾಳುವ ಪ್ರದೇಶದಲ್ಲಿ 14 ಬದಲಿ ನಿವೇಶನಗಳನ್ನು ನೀಡಲಾಗಿತ್ತು. ಇದರಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಪಾರ್ವತಿ ಅವರು 14 ಸೈಟುಗಳನ್ನು ಮುಡಾಗೆ ವಾಪಸ್ ಮಾಡಿದ್ದರು. ತದನಂತರ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಯಾವುದೇ ಆರೋಪ ಸಾಬೀತಾಗಿಲ್ಲ ಎಂದು 'ಬಿ' ರಿಪೋರ್ಟ್ ಸಲ್ಲಿಸಿದ್ದರು.
ಲೋಕಾಯುಕ್ತದ ಬಿ-ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಹಾಗೂ ಜಾರಿ ನಿರ್ದೇಶನಾಲಯ ಹೈಕೋರ್ಟ್ ಮೆಟ್ಟಿಲೇರಿದ್ದು, ಭೂ ಪರಿವರ್ತನೆ ಮತ್ತು ಕಾನೂನುಬಾಹಿರ ಅಂಶಗಳನ್ನು ಲೋಕಾಯುಕ್ತ ಪರಿಗಣಿಸಿಲ್ಲ ಎಂದು ವಾದಿಸಿವೆ. ಈ ಸುದೀರ್ಘ ವಿಚಾರಣೆ ಮುಕ್ತಾಯಗೊಂಡಿದ್ದು, ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ.
ಮಹಿಳಾ ಉದ್ಯಮಿಗಳ ಸಮಾವೇಶ
ಮಹಿಳಾ ಉದ್ಯಮಿಗಳ ಪ್ರಗತಿ, ಕೌಶಲ್ಯಾಭಿವೃದ್ಧಿ ಹಾಗೂ ಸಹಭಾಗಿತ್ವಕ್ಕೆ ದಾರಿದೀಪವಾಗುವಂತೆ ಸಿಲಿಕಾನ್ ಸಿಟಿಯಲ್ಲಿ 'ಟುಗೆದರ್ ವೀ ಗ್ರೋ' ಹೆಸರಿನ ಬೃಹತ್ ಸಮಾವೇಶ ನಡೆಯಿತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಸ್ಥಾಪಿಸಿರುವ 'ಉಬುಂಟು ಕನ್ಸೋರ್ಟಿಯಂ' ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
12 ರಾಜ್ಯಗಳಲ್ಲಿ ಸಕ್ರಿಯವಾಗಿರುವ ಈ ಕನ್ಸೋರ್ಟಿಯಂ, 70 ಮಹಿಳಾ ಸಂಘಟನೆಗಳ 30,000ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಒಂದೇ ಸೂರಿನಡಿ ತಂದಿದೆ. ಇ-ಕಾಮರ್ಸ್, ಡಿಜಿಟಲ್ ತಂತ್ರಜ್ಞಾನ ಹಾಗೂ ದೇಶ-ವಿದೇಶಗಳ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದೆ. ರತ್ನಪ್ರಭಾ ಅವರು ದೇವದಾಸಿ ಪದ್ಧತಿ ನಿರ್ಮೂಲನೆ, ದೇವದಾಸಿಯರಿಗೆ ಪುನರ್ವಸತಿ, ಕೃಷಿ ಭೂಮಿ ಹಾಗೂ ವಸತಿ ಕಲ್ಪಿಸುವ ಹೋರಾಟದಲ್ಲೂ ನಿರತರಾಗಿದ್ದಾರೆ.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, "ಮಹಿಳೆಯರು ಅತ್ಯಂತ ಸೃಜನಶೀಲರು ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸೂಕ್ಷ್ಮಮತಿಗಳು. ಕುಟುಂಬ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಅವರಲ್ಲಿದ್ದು, ಬೃಹತ್ ಉದ್ಯಮ ಕಟ್ಟುವ ಶಕ್ತಿ ಅವರಿಗಿದೆ" ಎಂದು ಶ್ಲಾಘಿಸಿದರು.

