
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ 329 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್ ನೀಡಿದೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ; ಸಿಐಡಿ ಮುಂದೆ ತಪ್ಪೊಪ್ಪಿಕೊಂಡ ಆರು ಅಭ್ಯರ್ಥಿಗಳು
ಪರೀಕ್ಷೆಗೆ ಕೆಲ ದಿನ ಮುಂಚೆಯೇ ಪ್ರಶ್ನೆಪತ್ರಿಕೆ ಅಕ್ರಮವಾಗಿ ಅಭ್ಯರ್ಥಿಗಳ ಕೈಗೆ ತಲುಪಿತ್ತು. ಪರೀಕ್ಷೆ ದಿನದಂದು ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿದ್ದ ಸಾಮಾನ್ಯ ಪರೀಕ್ಷಾ ಕೇಂದ್ರಗಳಿಗೆ ಹೋಗಿರಲಿಲ್ಲ ಎಂಬುದು ಅಭ್ಯರ್ಥಿಗಳ ವಿಚಾರಣೆಯಿಂದ ತಿಳಿದುಬಂದಿದೆ.
ಕೆಪಿಎಸ್‌ಸಿ ನಡೆಸಿದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಅಕ್ರಮದ ಕುರಿತು ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ತನಿಖೆಯ ವೇಳೆ ಒಟ್ಟು ಆರು ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಹಣ ಕೊಟ್ಟು ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆದಿದ್ದಾಗಿ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಅಭ್ಯರ್ಥಿ ಸುಹೇಲ್ ನೀಡಿದ ಮಾಹಿತಿಯಂತೆ ಒಂದು ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 40 ಲಕ್ಷ ರೂ.ಗೆ ಡೀಲ್ ಕುದುರಿಸಲಾಗಿತ್ತು. ಬೆಂಗಳೂರಿನ ರಾಜಾಜಿನಗರದ ರಹಸ್ಯ ಕಚೇರಿಯಲ್ಲಿ ಕೋಟಿ ಕೋಟಿ ವ್ಯವಹಾರದ ಮಾತುಕತೆ ನಡೆದಿದೆ. ವಾಟ್ಸಾಪ್ ಮೂಲಕವೇ ಸಂವಹನ ನಡೆಸಿ, ಪರೀಕ್ಷೆಗೂ ಮುನ್ನವೇ ಮುಂಗಡವಾಗಿ 20 ಲಕ್ಷ ರೂಪಾಯಿ ಹಣವನ್ನು ಮಧ್ಯವರ್ತಿಗಳಿಗೆ ತಲುಪಿಸಲಾಗಿತ್ತು ಎಂಬ ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಆಂಧ್ರದಲ್ಲಿ ಕುಳಿತು ಪರೀಕ್ಷೆ
ವಿಚಾರಣೆ ವೇಳೆ ಅಭ್ಯರ್ಥಿಗಳು ಬಾಯ್ಬಿಟ್ಟ ಹಲವು ಸಂಗತಿಗಳು ಸಿಐಡಿ ತನಿಖಾಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ. ಪರೀಕ್ಷೆಗೆ ಕೆಲ ದಿನಗಳ ಮುಂಚೆಯೇ ಪ್ರಶ್ನೆಪತ್ರಿಕೆ ಅಕ್ರಮವಾಗಿ ಅಭ್ಯರ್ಥಿಗಳ ಕೈಗೆ ತಲುಪಿತ್ತು. ಪರೀಕ್ಷೆಯ ದಿನದಂದು ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿದ್ದ ಸಾಮಾನ್ಯ ಪರೀಕ್ಷಾ ಕೇಂದ್ರಗಳಿಗೆ ಹೋಗಿರಲಿಲ್ಲ. ಬದಲಾಗಿ ಬೆಂಗಳೂರಿನ ರೆಸಾರ್ಟ್‌ಗಳು, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ಕುಳಿತು ಪರೀಕ್ಷೆ ಬರೆಯಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಬಸವರಾಜ್ ಕನ್ನಾಳೆ ಸೂತ್ರಧಾರ
ಕೆಪಿಎಸ್‌ಸಿ ಅಕ್ರಮ ಜಾಲದ ಹಿಂದೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿದಂತೆ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಹಾಗೂ ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಅಭ್ಯರ್ಥಿಗಳು ಸಿಐಡಿಗೆ ವಿವರವಾದ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾರಿಗೆ ಎಷ್ಟು ಕೋಟಿ ರೂಪಾಯಿ ಲಂಚ ನೀಡಲಾಗಿದೆ, ಡೀಲ್ ಎಲ್ಲೆಲ್ಲಿ ಮತ್ತು ಯಾರ ಸಮ್ಮುಖದಲ್ಲಿ ನಡೆದಿದೆ ಎನ್ನುವ ದಾಖಲೆ ಸಹಿತ ವಿವರಗಳನ್ನು ಸಿಐಡಿ ಅಧಿಕಾರಿಗಳು ಕಲೆಹಾಕಿದ್ದಾರೆ. ಇತ್ತೀಚೆಗಷ್ಟೇ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದೆ. ಈಗ ಅಭ್ಯರ್ಥಿಗಳ ತಪ್ಪೊಪ್ಪಿಗೆಯಿಂದ ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಶೀಘ್ರದಲ್ಲೇ ಇನ್ನಷ್ಟು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ.

