
ಪ್ರಕರಣದ ತನಿಖೆಯಲ್ಲಿ KPSC ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳ ನಡುವಿನ ಸಂಪರ್ಕದ ಬಗ್ಗೆಯೂ ಸಿಐಡಿ ಮಾಹಿತಿ ಕಲೆಹಾಕುತ್ತಿದೆ.
ಕೆಪಿಎಸ್ಸಿ ಅಕ್ರಮ: ಪರೀಕ್ಷೆಗೂ ಮೊದಲೇ 24 ಅಭ್ಯರ್ಥಿಗಳಿಂದ 12 ಕೋಟಿ ರೂ. ವಸೂಲಿ
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆಯಲ್ಲಿ ಹಣದ ವಹಿವಾಟು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಭ್ಯರ್ಥಿಗಳಿಗೆ ತರಬೇತಿ ನೀಡಿದ ಆರೋಪಗಳ ಬಗ್ಗೆ ಸಿಐಡಿ ಪರಿಶೀಲನೆ ಮುಂದುವರಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಿಐಡಿ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ. ತನಿಖೆಯ ಪ್ರಕಾರ, ಒಟ್ಟು 24 ಅಭ್ಯರ್ಥಿಗಳು ಹಣ ಪಾವತಿಸಿ ಸರ್ಕಾರಿ ಹುದ್ದೆ ಪಡೆಯಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ನೇಮಕಾತಿ ಪರೀಕ್ಷೆ ನಡೆಯುವ ಮುನ್ನವೇ ಆರೋಪಿಗಳ ತಂಡವು ಆಯ್ದ ಅಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರಿಗೆ ಪ್ರತ್ಯೇಕ ತರಬೇತಿ ನೀಡಿತ್ತು ಎಂದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿದೆ. ಹುದ್ದೆ ಕೊಡಿಸುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಪಡೆದಿರುವ ಶಂಕೆಯೂ ವ್ಯಕ್ತವಾಗಿದೆ.
ಒಬ್ಬ ಅಭ್ಯರ್ಥಿಯಿಂದ 20ರಿಂದ 80 ಲಕ್ಷ ರೂ.ವರೆಗೆ
ತನಿಖೆಯ ಪ್ರಕಾರ, ಅಭ್ಯರ್ಥಿಗಳಿಂದ ಅವರ ಸಾಮರ್ಥ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಭಾರಿ ಮೊತ್ತವನ್ನು ಸಂಗ್ರಹಿಸಲಾಗಿತ್ತು. ಕೆಲವರಿಂದ 20 ಲಕ್ಷ ರೂ., ಇನ್ನು ಕೆಲವರಿಂದ 40 ಲಕ್ಷ ರೂ. ಹಾಗೂ ಮತ್ತಿತರರಿಂದ 80 ಲಕ್ಷ ರೂ.ವರೆಗೆ ಹಣ ಪಡೆದಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಒಟ್ಟಾರೆ 24 ಅಭ್ಯರ್ಥಿಗಳಿಂದ 12 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಬಹುತೇಕ ಹಣ ನಗದು ರೂಪದಲ್ಲಿ ಸ್ವೀಕಾರ
ಅಕ್ರಮ ನೇಮಕಾತಿಗಾಗಿ ಸಂಗ್ರಹಿಸಿದ ಹಣದ ಬಹುಪಾಲು ನಗದು ರೂಪದಲ್ಲೇ ಕೈ ಬದಲಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಹಣದ ವಹಿವಾಟಿನ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಆರೋಪಿ ಬಸವರಾಜ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯೊಂದರಲ್ಲಿ ಸುಮಾರು 75 ಲಕ್ಷ ರೂ. ಹಣದ ವಹಿವಾಟು ನಡೆದಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಈ ಖಾತೆ ಬೀದರ್‌ನ ಕೋ-ಆಪರೇಟಿವ್ ಬ್ಯಾಂಕ್‌ಗೆ ಸೇರಿದೆ ಎಂದು ತಿಳಿದುಬಂದಿದೆ.
ಬ್ಯಾಂಕ್ ಖಾತೆ, ದಾಖಲೆಗಳ ಪರಿಶೀಲನೆ
ಪ್ರಕರಣದ ತನಿಖೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳು ಬ್ಯಾಂಕ್ ಖಾತೆಗಳಲ್ಲಿನ ವಹಿವಾಟು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಕ್ರಮ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಣಕಾಸಿನ ವಹಿವಾಟಿನ ಮಾಹಿತಿಯನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ, ಹಣದ ವಹಿವಾಟು ಯಾರ್ಯಾರಿಗೆ ತಲುಪಿದೆ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಹೇಗೆ ಅನುಕೂಲ ಮಾಡಿಕೊಡಲಾಯಿತು ಎಂಬುದರ ಕುರಿತು ಸಿಐಡಿ ತನಿಖೆ ಮುಂದುವರಿದಿದೆ.

