
ಸಚಿವ ಈಶ್ವರ್ ಖಂಡ್ರೆ ಅವರು ಕೆಪಿಎಸ್‌ಸಿ ಕಿಂಗ್‌ಪಿನ್ ಬಸವರಾಜ ಕನ್ನಾಳೆಗೆ ಸಿಹಿ ತಿನ್ನಿಸುತ್ತಿರುವ ಚಿತ್ರವನ್ನು ಜೆಡಿಎಸ್ ಬಿಡುಗಡೆ ಮಾಡಿದೆ.
KSPC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ; ಒಎಂಆರ್ ಶೀಟ್ ತಿದ್ದಿದ್ದೇ ಐಎಎಸ್ ಅಧಿಕಾರಿ ಜ್ಞಾನೇಂದ್ರ?
ಡೀಲ್ ಮಾಡಿಕೊಂಡಿದ್ದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸದಿದ್ದರೂ ಅವರ ಒಎಂಆರ್ ಶೀಟ್‌ಗಳನ್ನು ಜ್ಞಾನೇಂದ್ರ ಕುಮಾರ್ ಅವರೇ ತಿದ್ದಿ, ಮೆರಿಟ್ ಪಟ್ಟಿಯಲ್ಲಿ ಬರುವಂತೆ ಅಂಕ ಹೆಚ್ಚಿಸುತ್ತಿದ್ದರು.
ಕೆಪಿಎಸ್ಸಿ ನಡೆಸಿದ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿರುವ ಸ್ಫೋಟಕ ಮಾಹಿತಿ ಸಿಐಡಿ ತನಿಖೆಯಿಂದ ಬಯಲಾಗಿವೆ. ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಕಿಂಗ್‌ಪಿನ್ ಮಧ್ಯವರ್ತಿ ಬಸವರಾಜ್ ಕನ್ನಾಳೆ ಸೇರಿಕೊಂಡು ಸಿನಿಮೀಯ ಶೈಲಿಯಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ.
ಮೂರು ಹಂತಗಳಲ್ಲಿ ಅಕ್ರಮ ಕಾರ್ಯಾಚರಣೆ
ಸಿಐಡಿ ಮೂಲಗಳ ಪ್ರಕಾರ ಈ ನೇಮಕಾತಿ ಜಾಲವು ಅತ್ಯಂತ ಸಂಘಟಿತವಾಗಿ 3 ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಪರೀಕ್ಷೆಗೂ ಮುನ್ನ ಸಿದ್ಧಪಡಿಸುತ್ತಿದ್ದ 5 ಮಾದರಿ ಪ್ರಶ್ನೆ ಪತ್ರಿಕೆಗಳ ಪೈಕಿ ಅಂತಿಮಗೊಳ್ಳುತ್ತಿದ್ದ ಪ್ರಶ್ನೆಗಳನ್ನು ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಅವರು ತಾವೇ ಖುದ್ದಾಗಿ ಬರೆದುಕೊಳ್ಳುತ್ತಿದ್ದರು. ಪರೀಕ್ಷೆಗೆ 2 ದಿನ ಬಾಕಿ ಇರುವಾಗ ಈ ಮಾಹಿತಿಯನ್ನು ಬಸವರಾಜ್ಗೆ ತಲುಪಿಸಲಾಗುತ್ತಿತ್ತು. ರಾಜಾಜಿನಗರ ಕಚೇರಿಯಲ್ಲಿ ಬಸವರಾಜ್ ಡೀಲ್ ಮುಗಿಸಿ, ಅಭ್ಯರ್ಥಿಗಳನ್ನು ಬೆಂಗಳೂರು, ತುಮಕೂರು ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿರಿಸಿ ಉತ್ತರಗಳನ್ನು ಸಿದ್ಧಪಡಿಸುತ್ತಿದ್ದರು. ಬಳಿಕ ಖಾಸಗಿ ಬಸ್‌ಗಳ ಮೂಲಕ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ಕರೆತರಲಾಗುತ್ತಿತ್ತು.
ಡೀಲ್ ಮಾಡಿಕೊಂಡಿದ್ದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸದಿದ್ದರೂ ಅವರ ಒಎಂಆರ್ ಶೀಟ್‌ಗಳನ್ನು ಜ್ಞಾನೇಂದ್ರ ಕುಮಾರ್ ಅವರೇ ತಿದ್ದಿ, ಮೆರಿಟ್ ಪಟ್ಟಿಯಲ್ಲಿ ಬರುವಂತೆ ಅಂಕ ಹೆಚ್ಚಿಸುತ್ತಿದ್ದರು. 1:3 ಅನುಪಾತದಂತೆ ಅಭ್ಯರ್ಥಿಗಳು ಕೆಪಿಎಸ್ಸಿ ಅಧ್ಯಕ್ಷರ ಮುಂದೆ ಹಾಜರಾಗುತ್ತಿದ್ದ ವೇಳೆ, ಲಿಖಿತ ಪರೀಕ್ಷೆಯ ಅಂಕ ಮತ್ತು ಸಂದರ್ಶನದ ಅಂಕಗಳನ್ನು ಮ್ಯಾಚ್ ಮಾಡಿ ಅವರಿಗೆ ನೇಮಕಾತಿ ಆದೇಶ ಸಿಗುವಂತೆ ನೋಡಿಕೊಳ್ಳಲಾಗುತ್ತಿತ್ತು.
ಕನ್ನಾಳೆ ಮನೆಯಲ್ಲಿ ಹಾಲ್ ಟಿಕೆಟ್ ಜಪ್ತಿ
ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ నిವಾಸದ ಮೇಲೆ ದಾಳಿ ನಡೆಸಿದ ವೇಳೆ ಆಘಾತಕಾರಿ ಸಾಕ್ಷ್ಯಗಳು ಲಭ್ಯವಾಗಿವೆ.
2025ರಲ್ಲಿ ನಡೆದ 'ಬಿ' ಗ್ರೂಪ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ 6 ಅಭ್ಯರ್ಥಿಗಳ ಪ್ರವೇಶಪತ್ರಗಳು ಜಪ್ತಿಯಾಗಿವೆ. ಪಶುವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ, ಇತರೆ ಗ್ರೂಪ್ 'ಬಿ' ಹುದ್ದೆಗಳ ನೇಮಕಾತಿಯಲ್ಲೂ ಕನ್ನಾಳೆ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಜಪ್ತಿಯಾದ ಹಾಲ್ ಟಿಕೆಟ್‌ನಲ್ಲಿದ್ದ 6 ಅಭ್ಯರ್ಥಿಗಳಿಗೆ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಬುಲಾವ್ ನೀಡಿದ್ದು, ಹಗರಣದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ಲಕ್ಷಣಗಳು ಕಂಡುಬಂದಿವೆ.
ಸಚಿವ ಖಂಡ್ರೆ ಫೋಟೋ ವೈರಲ್ ಮಾಡಿದ ಜೆಡಿಎಸ್
ಅಕ್ರಮದ ತನಿಖೆ ಕಾವೇರಿದ ಬೆನ್ನಲ್ಲೇ, ಜೆಡಿಎಸ್ ಪಕ್ಷವು ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ಸಿಹಿ ತಿನ್ನಿಸುತ್ತಿರುವ ಫೋಟೋ ಹಂಚಿಕೊಂಡು ಸರ್ಕಾರದ ವಿರುದ್ಧ ಕಿಡಿ ಕಾರಿದೆ. "ಕಿಂಗ್‌ಪಿನ್‌ಗಳಿಗೆ ಸಿಹಿ ಊಟ ನೀಡುತ್ತಿರುವ ಸಚಿವರು ಹಾಗೂ ಸರ್ಕಾರದ ಶೇಕಡಾವಾರು ಪಾತ್ರವೇನು?, ಪ್ರಾಮಾಣಿಕವಾಗಿ ಅಧ್ಯಯನ ನಡೆಸಿ ಕಣ್ಣೀರಿಡುತ್ತಿರುವ ಯುವಜನತೆಗೆ ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಜೆಡಿಎಸ್ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, "ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರ ಈ ಹಗರಣದಲ್ಲಿ ಸಚಿವರ ಪಾತ್ರವೇನು ಎಂಬುದನ್ನು ಬಹಿರಂಗಪಡಿಸಬೇಕು" ಎಂದು ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

