x

80 ಲಕ್ಷಕ್ಕೆ ಸರ್ಕಾರಿ ಹುದ್ದೆ ಸೇಲ್​, ಕಾರ್ಪೊರೇಟ್ ಕೈಗೆ ಸರ್ಕಾರಿ ಶಾಲೆ, ಶಾಸಕರ ಮೇಲೆ ಮೊಟ್ಟೆ ಎಸೆತಕ್ಕೆ ಬಿಜೆಪಿ ಕೆಂಡ

80 ಲಕ್ಷಕ್ಕೆ ಪಶು ವೈದ್ಯಾಧಿಕಾರಿ ಹುದ್ದೆ ಮಾರಾಟ ಆರೋಪ, CSR ನಿಧಿ ಬಳಕೆಗೆ ಹೊಸ ಯೋಜನೆ, ಹರೀಶ್ ಮೇಲೆ ಮೊಟ್ಟೆ ಎಸೆತ ಖಂಡಿಸಿ ಬಿಜೆಪಿ ಪ್ರತಿಭಟನೆ


Click the Play button to hear this message in audio format

ರಾಜ್ಯದ ಪ್ರತಿಭಾವಂತ ಯುವಕ-ಯುವತಿಯರ ಪಾಲಿನ ಆಶಾಕಿರಣವಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೀಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ. ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅಮಾನತ್ತಿನ ಬೆನ್ನಲ್ಲೇ, ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಕೋಟಿ ಕೋಟಿ ರೂಪಾಯಿಗಳ ಹಗರಣ ಬಯಲಾಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಶಂಕರಪ್ಪ ಸಾಹುಕಾರ್ ತಮ್ಮ ಅಧಿಕಾರವಧಿಯಲ್ಲಿ ಕೆಪಿಎಸ್‌ಸಿಯ ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಆಪ್ತರು ಮತ್ತು ಸಂಬಂಧಿಕರಿಗೆ ಹೆಚ್ಚಿನ ಅಂಕಗಳನ್ನು ನೀಡಿ ಉದ್ಯೋಗ ಕೊಡಿಸಿದ್ದಾರೆ ಎಂಬ ಗಂಭೀರ ಆರೋಪವಿದೆ. ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ, ತಮ್ಮ ವರ್ಚಸ್ಸಿನಿಂದ ಕೆಲವರನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂಬುದು ಮುಖ್ಯ ಆರೋಪ ಇದೆ. ಇದು ಬಹಿರಂಗಗೊಂಡ ಬೆನ್ನಲ್ಲೇ ಸರ್ಕಾರವು ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿಯೂ ಇವರ ಕೈವಾಡ ಇದೆ ಎಂಬ ಆರೋಪಗಳಿವೆ.

ರಾಜ್ಯ ಸರ್ಕಾರ ಪಶುಸಂಗೋಪನಾ ಇಲಾಖೆಯಡಿ ಒಟ್ಟು 400 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು (342 ಸಾಮಾನ್ಯ ಮತ್ತು 58 ಬ್ಯಾಕ್‌ಲಾಗ್) ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿತ್ತು. ಇದರಂತೆ ಕಳೆದ ಜನವರಿ 8 ರಂದು ರಾಜ್ಯದಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯನ್ನು ನಂಬಿ ಸಾವಿರಾರು ಅಭ್ಯರ್ಥಿಗಳು ಹಗಲಿರುಳು ಶ್ರಮಿಸಿ ಓದಿದ್ದರು. ಆದರೆ, ಜುಲೈ 17ರಂದು ಪ್ರಕಟವಾದ ಫಲಿತಾಂಶವು ನಿಜವಾದ ಆಕಾಂಕ್ಷಿಗಳಿಗೆ ಆಘಾತವನ್ನುಂಟು ಮಾಡಿತು. ಅರ್ಹ ಅಭ್ಯರ್ಥಿಗಳು ಉತ್ತೀರ್ಣರಾಗಲು ಪರದಾಡುವಂತಾದರೆ, ಮಧ್ಯವರ್ತಿಗಳ ಮೂಲಕ ಹಣ ನೀಡಿದವರು ಸುಲಭವಾಗಿ ಆಯ್ಕೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ನೇಮಕಾತಿಯಲ್ಲಿ ಬರೋಬ್ಬರಿ ಶೇ. 60ರಷ್ಟು ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ದೂರುತ್ತಿದ್ದಾರೆ. ಒಂದು ಪಶು ವೈದ್ಯಾಧಿಕಾರಿ ಹುದ್ದೆಗೆ ಮಧ್ಯವರ್ತಿಗಳು 80 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರು ಎಂಬುದು ಇದೀಗ ಬಹಿರಂಗವಾಗಿದೆ. ಕೇವಲ ಹಣದ ವ್ಯವಹಾರವಷ್ಟೇ ಅಲ್ಲ, ಅಮಾನತ್ತಾಗಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಆಪ್ತರು ಈ ಅಕ್ರಮದ ಹಿಂದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಕಾರ್ಪೋರೇಟ್‌ ಕಂಪನಿಗಳಿಗೆ ಗ್ರಾಮೀಣ ಶಾಲೆಗಳ ನಿರ್ಮಾಣ

ಸಿಎಸ್‌ಆರ್‌ನಿಧಿಯಲ್ಲಿ ಕಾರ್ಪೋರೇಟ್‌ಕಂಪನಿಗಳು ಅಕ್ರಮ ಎಸಗುತ್ತಿವೆ ಎಂಬ ಆರೋಪದ ನಡುವೆ ರಾಜ್ಯ ಸರ್ಕಾರವು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಕಾರ್ಪೋರೇಟ್‌ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ನೇರವಾಗಿ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣದ ಬಲವರ್ಧನೆಗೆ ಬಳಸಬೇಕು ಎಂಬ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ವಾರ್ಷಿಕ ಸುಮಾರು 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಿಎಸ್‌ಆರ್ ನಿಧಿ ಲಭ್ಯವಿದೆ. ಕಾನೂನಿನ ಪ್ರಕಾರ, ಲಾಭಗಳಿಸುವ ಪ್ರತಿ ಕಂಪನಿಯು ತನ್ನ ನಿವ್ವಳ ಲಾಭದ ನಿರ್ದಿಷ್ಟ ಭಾಗವನ್ನು ಸಾಮಾಜಿಕ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಆದರೆ, ಈವರೆಗೆ ಈ ನಿಧಿಯ ಬಳಕೆಯು ಪಾರದರ್ಶಕವಾಗಿರಲಿಲ್ಲ. ಸುಮಾರು ಶೇ.50 ಉದ್ಯಮಿಗಳು ಸಿಎಸ್‌ಆರ್ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರತ್ಯೇಕ ಅಧಿಕಾರಿಗಳ ತಂಡವನ್ನು ನೇಮಿಸಿ ನಿಧಿಯ ಪರಿಶೀಲನೆ ನಡೆಸುವ ಸರ್ಕಾರದ ನಿರ್ಧಾರ, ಕಾರ್ಪೊರೇಟ್ ವಲಯದಲ್ಲಿ ಜವಾಬ್ದಾರಿಯನ್ನು ಮೂಡಿಸುವ ದಿಸೆಯಲ್ಲಿನ ಮೊದಲ ಹೆಜ್ಜೆಯಾಗಿದೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಈ ಕುರಿತು ಮಾತನಾಡಿ, ಸಿಎಸ್‌ಆರ್‌ನಿಧಿಯನ್ನು ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಬಳಕೆಯಾಗಬೇಕಿದೆ ಎಂದಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಹಳ್ಳಿಯ ಮಕ್ಕಳು ನಗರದತ್ತ ವಲಸೆ ಹೋಗುವುದನ್ನು ತಡೆಯಲು, ಹಳ್ಳಿಗಳಲ್ಲೇ ಉನ್ನತ ಮಟ್ಟದ ಮೂಲಸೌಕರ್ಯವುಳ್ಳ ಶಾಲೆಗಳನ್ನು ನಿರ್ಮಿಸುವುದು ಅತ್ಯಗತ್ಯ. ಸರ್ಕಾರದ 2 ಸಾವಿರ ಜಾಗಗಳಲ್ಲಿ ಅತ್ಯುತ್ತಮ ಶಾಲೆಗಳನ್ನು ನಿರ್ಮಿಸಲು ಕೈಗಾರಿಕೋದ್ಯಮಿಗಳನ್ನು ಸರ್ಕಾರ ಆಹ್ವಾನಿಸಿದೆ.

ಮೊಟ್ಟೆ ಎಸೆತ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಶಾಸಕ ಬಿ.ಪಿ.ಹರೀಶ್‌ ಮೇಲಿನ ಮೊಟ್ಟೆ ಹಲ್ಲೆ ಪ್ರಕರಣವು ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‌ನ ಸಾಥ್ ಸಿಕ್ಕಿರುವ ಬೆನ್ನಲ್ಲೇ, ವಿರೋಧ ಪಕ್ಷವಾದ ಬಿಜೆಪಿ ರಸ್ತೆಗಿಳಿದು ಹೋರಾಟ ಆರಂಭಿಸಿದೆ. ಮೊಟ್ಟೆ ಹಲ್ಲೆ ಘಟನೆಯು ಕೇವಲ ಒಂದು ಪ್ರಕರಣವಾಗಿ ಉಳಿಯದೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸೈದ್ಧಾಂತಿಕ ಹಾಗೂ ರಾಜಕೀಯ ಸಮರದ ಹೊಸ ಮಜಲಿಗೆ ಸಾಕ್ಷಿಯಾಗಿದೆ. ದೆಹಲಿಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ಪ್ರತಿಭಟನೆ ನಡೆಸಿದರೆ, ರಾಜ್ಯದಲ್ಲಿ ಸರ್ಕಾರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಿದೆ. ತಮ್ಮ ಮೂಗಿನ ನೇರಕ್ಕೆ ಬಿಜೆಪಿ ಧರಣಿ ನಡೆಸುತ್ತಿದೆ. 'ಕಾಕ್ರೋಚ್ ಜನತಾ ಪಾರ್ಟಿ' ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿರುವ ಕಾಂಗ್ರೆಸ್‌ನ ನಿಲುವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಈ ಪ್ರತಿಭಟನೆಯನ್ನು ಬಿಜೆಪಿ 'ದೇಶದ್ರೋಹಿ' ಕೃತ್ಯ ಎಂದು ಬಣ್ಣಿಸಿದೆ.

ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ, ಕಾಂಗ್ರೆಸ್‌ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಪ್ರತಿಭಟನೆ ಬಳಿಕ ಲೋಕಭವನ ಕಚೇರಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Read More
Next Story