
ಕೆಪಿಎಸ್‌ಸಿ ನೇಮಕಾತಿಯಲ್ಲಿ ಬದಲಾವಣೆ: ಯುಪಿಎಸ್‌ಸಿ ಮಾದರಿಯ ಪರೀಕ್ಷಾ ಪದ್ಧತಿ ಜಾರಿ
ಇನ್ನು ಮುಂದೆ ಪರೀಕ್ಷಾ ಪ್ರಕ್ರಿಯೆಯನ್ನು ಕೇವಲ 3 ರಿಂದ 5 ತಿಂಗಳೊಳಗೆ ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ಉದ್ಯೋಗದ ನೇಮಕಾತಿ ಪತ್ರಗಳನ್ನು ನೀಡುವ ಗುರಿಯನ್ನು ಕೆಪಿಎಸ್‌ಸಿ ಹೊಂದಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಐತಿಹಾಸಿಕ ಮತ್ತು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ದಶಕಗಳಿಂದ ಅಭ್ಯರ್ಥಿಗಳ ಬಹುದೊಡ್ಡ ಬೇಡಿಕೆಯಾಗಿದ್ದ ಪಾರದರ್ಶಕತೆ ಮತ್ತು ತ್ವರಿತ ನೇಮಕಾತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆಯೋಗವು ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಇತ್ತೀಚೆಗೆ ನಡೆದ ಆಯೋಗದ ಉನ್ನತ ಮಟ್ಟದ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಂತ್ರಜ್ಞಾನಾಧಾರಿತಗೊಳಿಸುವ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ನಡೆಸುವ ಕುರಿತು ನಿರ್ಣಾಯಕ ಚರ್ಚೆ ನಡೆದಿದೆ.
ಈ ಮಹತ್ವದ ಸಭೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಪಾರ ಅನುಭವ ಹೊಂದಿರುವ ಹೆಚ್. ಪ್ರಸನ್ನ ಅವರು ಕೆಪಿಎಸ್‌ಸಿಯ ನೂತನ ಪರೀಕ್ಷಾ ನಿಯಂತ್ರಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಆಯೋಗದ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಸಭೆಯ ಉದ್ದಕ್ಕೂ ಹೆಚ್. ಪ್ರಸನ್ನ ಅವರು ಮಂಡಿಸಿದ ದೂರದೃಷ್ಟಿಯ ಯೋಜನೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ.
ಜಾರಿಗೆ ತರಲು ಉದ್ದೇಶಿಸಿರುವ ಸುಧಾರಣೆಗಳು
ಕೆಪಿಎಸ್‌ಸಿ ಜಾರಿಗೆ ತರಲು ಉದ್ದೇಶಿಸಿರುವ ಪ್ರಮುಖ ಸುಧಾರಣೆಗಳು ಇಂತಿವೆ. ದೇಶದ ಅತ್ಯುನ್ನತ ಪರೀಕ್ಷಾ ಸಂಸ್ಥೆಯಾದ ಯುಪಿಎಸ್‌ಸಿಯಲ್ಲಿ ಇರುವಂತಹ ಕಟ್ಟುನಿಟ್ಟಿನ ಪಾರದರ್ಶಕತೆ ಮತ್ತು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೆಪಿಎಸ್‌ಸಿಯಲ್ಲೂ ಅಳವಡಿಸಿಕೊಳ್ಳಲು ಆಯೋಗ ನಿರ್ಧರಿಸಿದೆ. ನೇಮಕಾತಿ ಅಧಿಸೂಚನೆ ಹೊರಬಿದ್ದ ದಿನದಿಂದ ಹಿಡಿದು ಆಯ್ಕೆ ಪಟ್ಟಿ ಪ್ರಕಟಿಸುವವರೆಗೆ ಸಾಮಾನ್ಯವಾಗಿ ವರ್ಷಗಟ್ಟಲೆ ಸಮಯ ಹಿಡಿಯುತ್ತಿತ್ತು. ಇನ್ನು ಮುಂದೆ ಪರೀಕ್ಷಾ ಪ್ರಕ್ರಿಯೆಯನ್ನು ಕೇವಲ 3 ರಿಂದ 5 ತಿಂಗಳೊಳಗೆ ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ಉದ್ಯೋಗದ ನೇಮಕಾತಿ ಪತ್ರಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಪರೀಕ್ಷೆ ಮುಗಿದ ತಕ್ಷಣ, ಆಯಾ ಜಿಲ್ಲೆಗಳಲ್ಲಿ ಲಭ್ಯವಿರುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇವುಗಳನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ತಕ್ಷಣವೇ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಯನ್ನು ತಾವೇ ಪರಿಶೀಲಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಮೌಲ್ಯಮಾಪನದಲ್ಲಿ ಯಾವುದೇ ತಪ್ಪು ನಡೆಯದಂತೆ ಪಾರದರ್ಶಕತೆ ಕಾಪಾಡಬಹುದು. ಅಭ್ಯರ್ಥಿಗಳಲ್ಲಿ ಕುತೂಹಲ ಮೂಡಿಸುವ ಅತಿದೊಡ್ಡ ಅಂಶವೆಂದರೆ ಫಲಿತಾಂಶದ ದಿನಾಂಕ. ಈ ಹೊಸ ವ್ಯವಸ್ಥೆಯಲ್ಲಿ ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಸಭೆಯಲ್ಲಿ ಭಾಗವಹಿಸಿದ್ದ ಆಯೋಗದ ಸದಸ್ಯರು, ಈ ಹೊಸ ಸುಧಾರಣೆಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಂತ್ರಜ್ಞಾನಾಧಾರಿತಗೊಳಿಸುವುದರಿಂದ ಅಭ್ಯರ್ಥಿಗಳ ಸಮಯ ಉಳಿಯುವುದಲ್ಲದೆ, ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗ ಸಿಗುವ ವ್ಯವಸ್ಥೆ ದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರದ ಆಶಯದಂತೆ, ಅತ್ಯಂತ ವೇಗವಾಗಿ ಮತ್ತು ನ್ಯಾಯಯುತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯೋಗದ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತದೆ ಅಥವಾ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಬಹುದು ಎಂಬ ವದಂತಿಗಳು ಅಭ್ಯರ್ಥಿಗಳನ್ನು ದಾರಿ ತಪ್ಪಿಸುತ್ತವೆ. ಈ ಹಿನ್ನೆಲೆಯಲ್ಲಿ ಆಯೋಗವು ಅಭ್ಯರ್ಥಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಯಾವುದೇ ವ್ಯಕ್ತಿಗಳು ನೀಡುವ ಆಮಿಷಗಳಿಗೆ ಒಳಗಾಗಬೇಡಿ, ಅನಧಿಕೃತ ವ್ಯಕ್ತಿಗಳ ಭರವಸೆಗಳಿಗೆ ಬಲಿಯಾಗಬೇಡಿ. ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಬರುವ ಮಾಹಿತಿಯನ್ನು ಮಾತ್ರ ನಂಬಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಅಭ್ಯರ್ಥಿಗಳಿಗೆ ಸಿಗುವ ಅನುಕೂಲಗಳು
ನೇಮಕಾತಿ ಪ್ರಕ್ರಿಯೆಯು ನಿಗದಿತ ಕಾಲಮಿತಿಯೊಳಗೆ ನಡೆಯುವುದರಿಂದ ಅಭ್ಯರ್ಥಿಗಳು ಮುಂದಿನ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ. ತಮ್ಮ ಉತ್ತರ ಪತ್ರಿಕೆಗಳನ್ನು ನೋಡುವ ಅವಕಾಶ ಸಿಗುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗೂ ಪರೀಕ್ಷಾ ಮಂಡಳಿಯ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಸುದೀರ್ಘ ಸಮಯದ ಕಾಯುವಿಕೆಯಿಂದ ಅಭ್ಯರ್ಥಿಗಳ ಮೇಲೆ ಬೀಳುವ ಮಾನಸಿಕ ಮತ್ತು ಆರ್ಥಿಕ ಹೊರೆ ತಗ್ಗಲಿದೆ.

