ಕೆಪಿಎಸ್‌ಸಿ ವಿವಾದ: ಸುಪ್ರೀಂನಲ್ಲಿ ತಪ್ಪು ಮಾಹಿತಿ, ಸಿಎಸ್‌ಗೆ ಅಲೋಕ್ ಕುಮಾರ್ ಪತ್ರ
x

ಕೆಪಿಎಸ್‌ಸಿ ವಿವಾದ: ಸುಪ್ರೀಂನಲ್ಲಿ ತಪ್ಪು ಮಾಹಿತಿ, ಸಿಎಸ್‌ಗೆ ಅಲೋಕ್ ಕುಮಾರ್ ಪತ್ರ

ಸುಪ್ರೀಂನಲ್ಲಿ ಕಪಿಲ್‌ ಸಿಬಲ್‌ ವಾದವು ರಾಷ್ಟ್ರಮಟ್ಟದಲ್ಲಿ ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅಲೋಕ್ ಕುಮಾರ್ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮದ ತನಿಖೆಗಾಗಿ ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ ತಮ್ಮ ನೇಮಕವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಸಿಬಿಐ ತನಿಖೆ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಕ್ಟೋಬರ್ 5ರಂದು ಸುದೀರ್ಘ ಪತ್ರ ಬರೆದು ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಅಲೋಕ್ ಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ಬಾಕಿ ಇದೆ ಎಂಬ ವಾದವನ್ನು ಸರ್ಕಾರದ ಪರ ವಕೀಲರು ಮಂಡಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅಲೋಕ್ ಕುಮಾರ್ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನನ್ನ ವಿರುದ್ಧ ಯಾವುದೇ ಸಿಬಿಐ ತನಿಖೆ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲ ಎಂಬುದು ಅಧಿಕೃತ ದಾಖಲೆಗಳಿಂದ ಸಾಬೀತಾಗಿದೆ. ನ್ಯಾಯಾಲಯದ ಮುಂದೆ ತಪ್ಪು ಮಾಹಿತಿ ನೀಡಿರುವುದು ವಿಷಾದನೀಯ" ಎಂದು ಸ್ಪಷ್ಟಪಡಿಸಿದ್ದಾರೆ.

ಬಿ-ರಿಪೋರ್ಟ್ ಸಲ್ಲಿಸಿರುವ ಸಿಬಿಐ

ಅಲೋಕ್ ಕುಮಾರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ತನಿಖೆ ನಡೆಸಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದೆ. ಈ ವರದಿಯನ್ನು ಫೆಬ್ರವರಿ 13, 2024ರಂದು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಈ ಮೂಲಕ ಆ ಪ್ರಕರಣದ ಕಡತವನ್ನು ಮುಚ್ಚಲಾಗಿದೆ ಎಂಬುದು ಅಧಿಕೃತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಲಾಖಾ ವಿಚಾರಣೆ ಅಗತ್ಯವಿಲ್ಲ

ಪತ್ರದಲ್ಲಿ ಅಲೋಕ್ ಕುಮಾರ್ ಅವರು ಮತ್ತೊಂದು ಪ್ರಮುಖ ಅಂಶವನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ ಈ ವಿಷಯದಲ್ಲಿ ಇಲಾಖಾ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು 2023ರಲ್ಲೇ ಅಂದಿನ ಮುಖ್ಯಮಂತ್ರಿಗಳು ಸ್ಪಷ್ಟ ಆದೇಶ ನೀಡಿದ್ದರು. ಕೇಂದ್ರೀಯ ಆಡಳಿತಾತ್ಮಕ ಮಂಡಳಿ ಕೂಡ ಈ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಶೋಕಾಸ್ ನೋಟಿಸ್ ಮತ್ತು ಚಾರ್ಜ್‌ಶೀಟ್‌ನ್ನು ರದ್ದುಗೊಳಿಸಿದೆ. ಈ ಆದೇಶಕ್ಕೆ ಹೈಕೋರ್ಟ್ ಕೂಡ ಯಾವುದೇ ತಡೆ ನೀಡಿಲ್ಲ ಎಂಬುದನ್ನು ಅವರು ದಾಖಲೆ ಸಮೇತ ವಿವರಿಸಿದ್ದಾರೆ. ಎಸ್‌ಐಟಿ ಮುಖ್ಯಸ್ಥರ ಹುದ್ದೆಗೆ ಅಲೋಕ್ ಕುಮಾರ್ ಅವರು ಯಾವುದೇ ಆಕಾಂಕ್ಷಿಯಾಗಿರಲಿಲ್ಲ. ಹೈಕೋರ್ಟ್ ಸ್ವಯಂ ಪ್ರೇರಣೆಯಿಂದ ತನ್ನ ವಿವೇಚನೆಯನ್ನು ಬಳಸಿ ಅವರನ್ನು ನೇಮಿಸಿತ್ತು. ನ್ಯಾಯಾಲಯದ ಆದೇಶದಂತೆ ಕರ್ತವ್ಯ ನಿರ್ವಹಿಸಲು ಮುಂದಾದಾಗ, ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ತಪ್ಪು ಮಾಹಿತಿ ನೀಡಿರುವುದು ಅಲೋಕ್ ಕುಮಾರ್ ಅವರ ನೈತಿಕ ಸ್ಥೈರ್ಯಕ್ಕೆ ಮತ್ತು ವೃತ್ತಿಪರ ಗೌರವಕ್ಕೆ ಪೆಟ್ಟು ನೀಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯುವುದಕ್ಕೂ ಮುನ್ನವೇ, ಸರ್ಕಾರವು ತಾನು ನೀಡಿದ್ದ ತಪ್ಪಾದ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕೆಂದು ಅಲೋಕ್ ಕುಮಾರ್ ಒತ್ತಾಯಿಸಿದ್ದಾರೆ. ಸತ್ಯಾಸತ್ಯತೆಯನ್ನು ಒಳಗೊಂಡ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅವರು ಮನವಿ ಮಾಡಿದ್ದಾರೆ. ಸರ್ಕಾರವು ತನ್ನ ವಕೀಲರ ಮೂಲಕ ನೀಡಿದ ಹೇಳಿಕೆಯನ್ನು ಹಿಂಪಡೆದು, ಅಧಿಕೃತ ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಬೇಕೆಂದು ಕೋರಿದ್ದಾರೆ.

ಪ್ರಕರಣದ ಗಂಭೀರತೆ

ಕೆಪಿಎಸ್‌ಸಿ ನೇಮಕಾತಿ ಅಕ್ರಮದಂತಹ ಸೂಕ್ಷ್ಮ ಪ್ರಕರಣದಲ್ಲಿ ಸರ್ಕಾರ ಮತ್ತು ತನಿಖಾ ತಂಡದ ನಡುವೆ ಉಂಟಾಗಿರುವ ಈ ಸಂಘರ್ಷವು ರಾಜ್ಯದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಹೈಕೋರ್ಟ್ ನೇಮಿಸಿದ ಅಧಿಕಾರಿಯನ್ನು ಸರ್ಕಾರವೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಿರುವುದು ಮತ್ತು ಅದಕ್ಕೆ ಬಳಸಿದ ವಾದವೇ ತಪ್ಪಾಗಿದೆ ಎಂಬ ಆರೋಪ ಎದುರಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

Read More
Next Story