x

ಮೊಬೈಲ್ ಸ್ವಿಚ್ ಆಫ್; ಎಲ್ಲಿದ್ದಾರೆ ಐಎಎಸ್ ಅಧಿಕಾರಿ?; ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ; ಕರಾವಳಿಗೆ ರೈಲ್ವೆ ಇಲಾಖೆಯು ಸಂತಸ ಸುದ್ದಿ ನೀಡಿದೆ; ನಕಲಿ ಪನೀರ್ ಅನ್ನು ಒಂದು ವರ್ಷ ನಿಷೇಧಿಸಲಾಗಿದೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಡೆದ ನೇಮಕಾತಿ ಅಕ್ರಮ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಐಎಎಸ್‌ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಾಪತ್ತೆಯಾಗಿರುವ ವಿಚಾರ ಹೊರ ಬಂದಿರುವುದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮಾರ್ಚ್‌ವರೆಗೆ ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್, ಪ್ರಸ್ತುತ ಎಂಎಸ್‌ಎಂಇ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಕಳೆದ ಜನವರಿಯಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಉಸ್ತುವಾರಿಯನ್ನೂ ಜ್ಞಾನೇಂದ್ರ ಕುಮಾರ್ ವಹಿಸಿದ್ದರು.​ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಇಡಿ ಅಧಿಕಾರಿಗಳು 21 ಕಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ದಾಳಿಯ ಬೆನ್ನಲ್ಲೇ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇಡಿ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಲು ಆರಂಭಿಸುತ್ತಿದ್ದಂತೆಯೇ, ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆಯಾಗಿರುವುದು ಆಕಸ್ಮಿಕವೇ ಅಥವಾ ವ್ಯವಸ್ಥಿತ ಪಲಾಯನವೇ ಎಂಬ ಅನುಮಾನಗಳನ್ನು ಬಲಪಡಿಸಿದೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಮತ್ತು ಕುಟುಂಬಸ್ಥರೊಂದಿಗೂ ಸಂಪರ್ಕ ಇಲ್ಲದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಸಿಸಿ ಕ್ಯಾಮೆರಾದಲ್ಲಿಯೂ ಅವರ ತೆರಳಿರುವ ದೃಶ್ಯ ಸೆರೆಯಾಗಿದೆ. ಗಮನಾರ್ಹ ಸಂಗತಿಯೆಂದರೆ, ವಿಮಾನ ಹಾರಾಟಕ್ಕೆ ಕೇವಲ 90 ನಿಮಿಷಗಳ ಮೊದಲು ತೀರಾ ತರಾತುರಿಯಲ್ಲಿ ಈ ಬುಕ್ಕಿಂಗ್ ನಡೆದಿದೆ. 30,253 ರೂಪಾಯಿಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿರುವ ಅವರು, ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸಿದ ನಂತರ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಇಲ್ಲಿ ಉದ್ಭವವಾಗಿರುವ ಪ್ರಶ್ನೆ ಎಂದರೆ, ಅವರು ದೆಹಲಿಗೆ ಪ್ರಯಾಣಿಸಲು ವಿಮಾನ ಏರಿದ್ದರೇ ಅಥವಾ ವಿಮಾನ ನಿಲ್ದಾಣವನ್ನೇ ತಮ್ಮ ಸುರಕ್ಷಿತ ನಿರ್ಗಮನ ಮಾರ್ಗವನ್ನಾಗಿ ಬಳಸಿಕೊಂಡಿದ್ದರೇ? ಎಂಬ ಕುತೂಹಲ ಕೆರಳಿಸಿದೆ.

ಮೈಸೂರು ರೈಲ್ವೆ ವಿಭಾಗಕ್ಕೆ ಮಂಗಳೂರು ರೈಲ್ವೆ

ಭಾರತೀಯ ರೈಲ್ವೆ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರವು ಕರಾವಳಿ ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ದಶಕಗಳ ಕಾಲದ ಬೇಡಿಕೆಯಂತೆ, ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ಈ ಬದಲಾವಣೆಯು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ನಿರ್ಧಾರವು ಕೇವಲ ಆಡಳಿತಾತ್ಮಕ ವರ್ಗಾವಣೆಯಲ್ಲ, ಬದಲಾಗಿ ಕರಾವಳಿಯ ರೈಲ್ವೆ ಮೂಲಸೌಕರ್ಯ, ಕಾರ್ಯಾಚರಣೆ ಮತ್ತು ಭವಿಷ್ಯದ ಅಭಿವೃದ್ಧಿ ಯೋಜನೆಗಳಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ.

ಇಲ್ಲಿಯವರೆಗೆ, ಮಂಗಳೂರು ರೈಲ್ವೆ ಜಾಲವು ಮೂರು ವಿಭಿನ್ನ ನಿಯಂತ್ರಣಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ದಕ್ಷಿಣ ರೈಲ್ವೆ (ಪಾಲಕ್ಕಾಡ್ ವಿಭಾಗ), ನೈರುತ್ಯ ರೈಲ್ವೆ (ಮೈಸೂರು ವಿಭಾಗ) ಮತ್ತು ಕೊಂಕಣ ರೈಲ್ವೆ ನಿಗಮ. ಇದರಿಂದಾಗಿ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ರೈಲುಗಳ ಸಂಚಾರ ಸಮಯ ನಿರ್ವಹಣೆ, ಹಳಿಗಳ ನಿರ್ವಹಣೆ, ನಿಲ್ದಾಣಗಳ ಅಭಿವೃದ್ಧಿ ಮತ್ತು ಹೊಸ ರೈಲುಗಳನ್ನು ಘೋಷಿಸುವಾಗ ಈ ಮೂರು ವಲಯಗಳ ನಡುವಿನ ಸಮನ್ವಯವು ಸವಾಲಿನ ಕೆಲಸವಾಗಿತ್ತು. ಮುಖ್ಯವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಬೇಡಿಕೆಗಳನ್ನು ಈಡೇರಿಸಲು, ಪಾಲಕ್ಕಾಡ್ ವಿಭಾಗದ ಮೇಲೆ ಅವಲಂಬಿತರಾಗಬೇಕಿತ್ತು. ಇದು ಕರಾವಳಿಯ ಅಗತ್ಯತೆಗಳಿಗೆ ಆದ್ಯತೆ ಸಿಗುವಲ್ಲಿ ವಿಳಂಬ ಉಂಟುಮಾಡುತ್ತಿತ್ತು.

ಕೃತಕ ಪನೀರ್ ತಯಾರಿಕೆ, ಮಾರಾಟ ನಿಷೇಧ

ರಾಜ್ಯದಲ್ಲಿ ಕೃತಕ ಪನೀರ್​​ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಿಂದ ಸಾರ್ವಜನಿಕ ಅರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯಿಂದ ಈ ಆದೇಶ ಮಾಡಲಾಗಿದೆ.

ಪನೀರ್ ಎಂಬುದು ಹಾಲಿನಿಂದ ತಯಾರಿಸಲಾದ ಪ್ರಾಮಾಣೀಕೃತ ಆಹಾರ ಉತ್ಪನ್ನವಾಗಿದೆ. ಪನೀರ್‌ನಲ್ಲಿ ಹಾಲಿನ ಕೊಬ್ಬು ಪ್ರಮುಖ ಅಂಶವಾಗಿದ್ದು, ಅದರ ಬದಲಿಗೆ ಅಥವಾ ಅದರ ಜೊತೆಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬಳಸುವುದಕ್ಕೆ ಅನುಮತಿಯಿಲ್ಲ ಎಂದು ಇಲಾಖೆ ತಿಳಿಸಿದೆ.

ಕಲಬೆರಕೆ ಇಲ್ಲದಿದ್ದರೂ ನಿಷೇಧ: ಕರ್ನಾಟಕದಲ್ಲಿ ಹಲವಾರು ಪನೀರ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಕಲಬೆರಕೆ ಇಲ್ಲ ಎಂದು ಕಂಡುಬಂದಿದೆ. ಪನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ಡೈರಿ ಪದಾರ್ಥಗಳೊಂದಿಗೆ ಕಲಬೆರಕೆ ಇಲ್ಲದಿದ್ದರೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಉತ್ಪನ್ನಗಳನ್ನು ಬಳಸಬಾರದು, ಸಂಗ್ರಹಿಸಬಾರದು, ಸರಬರಾಜು ಮಾಡಬಾರದು, ಮಾರಾಟ ಮಾಡಬಾರದು ಅಥವಾ ಸಾಗಿಸಬಾರದು ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಇಲಾಖೆ ಹೇಳಿದೆ.

Read More
Next Story