ಸತತ 31 ಗಂಟೆಗಳಿಗೂ ಅಧಿಕ ಸಮಯ ವಿಚಾರಣೆ: ಸಾಹುಕಾರ್ ನಿವಾಸದ ಮೇಲೆ ಮುಂದುವರಿದ ಶೋಧ
x

ಸತತ 31 ಗಂಟೆಗಳಿಗೂ ಅಧಿಕ ಸಮಯ ವಿಚಾರಣೆ: ಸಾಹುಕಾರ್ ನಿವಾಸದ ಮೇಲೆ ಮುಂದುವರಿದ ಶೋಧ

ಶಿವಶಂಕರಪ್ಪ ಸಾಹುಕಾರ್ ಮತ್ತವರ ಪುತ್ರಿ ಸುಮಾ ಅವರನ್ನು ಇಡಿ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಹಗರಣದ ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣವು ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸಗಳು ಮತ್ತು ಆಯೋಗದ ಕಚೇರಿ ಸೇರಿದಂತೆ ರಾಜ್ಯದ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸುತ್ತಿರುವ ದಾಳಿ ಎರಡನೇ ದಿನವೂ ಭಾರಿ ತೀವ್ರತೆಯಲ್ಲಿ ಮುಂದುವರಿದಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು, ಮಂಗಳವಾರ ಮುಂಜಾನೆ ಆರಂಭಿಸಿದ ಶೋಧ ಕಾರ್ಯಾಚರಣೆಯನ್ನು ಬುಧವಾರ ರಾತ್ರಿಯವರೆಗೂ ನಿರಂತರವಾಗಿ ಮುಂದುವರಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ 'ಹೊಯ್ಸಳ ಡ್ರೀಮ್ಸ್' ಅಪಾರ್ಟ್‌ಮೆಂಟ್ ಮತ್ತು ಕಲಬುರಗಿಯಲ್ಲಿರುವ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪ್ರತಿಯೊಂದು ಕಡತವನ್ನೂ ಜಾಲಾಡುತ್ತಿದ್ದಾರೆ. ಸತತ 31 ಗಂಟೆಗಳ ಕಾಲ ಸುದೀರ್ಘ ಶೋಧ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಮತ್ತು ಅವರ ಪುತ್ರಿ ಸುಮಾ ಅವರನ್ನು ಇ.ಡಿ. ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಹಣಕಾಸಿನ ವ್ಯವಹಾರಗಳು, ಮಧ್ಯವರ್ತಿಗಳ ಜತೆಗಿನ ಸಂಪರ್ಕ ಮತ್ತು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದರ ಕುರಿತು ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ. ಮಂಗಳವಾರ ತಡರಾತ್ರಿಯವರೆಗೆ ನಡೆದ ವಿಚಾರಣೆ ಬುಧವಾರ ಬೆಳಗ್ಗೆ 9 ಗಂಟೆಯಿಂದ ಮತ್ತೆ ಮುಂದುವರಿದಿದ್ದು, ರಾತ್ರಿಯವರೆಗೂ ವಿಚಾರಣೆ ಮುಂದುವರಿದಿದೆ. ಹಗರಣದ ಕಿಂಗ್‌ಪಿನ್‌ಗಳಾದ ಮಧ್ಯವರ್ತಿಗಳ ಪಟ್ಟಿ ಮತ್ತು ಅವರೊಂದಿಗೆ ಸಾಹುಕಾರ್ ಅವರಿಗಿರುವ ನಂಟಿನ ಬಗ್ಗೆ ಇ.ಡಿ. ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೆಪಿಎಸ್‌ಸಿ ಕೇಂದ್ರ ಕಚೇರಿಯ ಮೇಲೆ ಇಡಿ ಕಣ್ಣು

ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಕರಾಳ ಅಧ್ಯಾಯವನ್ನೇ ತೆರೆದಿರುವ ಇ.ಡಿ., ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆಳೆಯಲು ಕೆಪಿಎಸ್‌ಸಿ ಕೇಂದ್ರ ಕಚೇರಿಯ ಕಡತಗಳ ಪರಿಶೀಲನೆ ನಡೆಸುತ್ತಿದೆ. 2021ರಿಂದ ಇಲ್ಲಿಯವರೆಗೆ ನಡೆದಿರುವ ವಿವಿಧ ಇಲಾಖೆಗಳ ನೇಮಕಾತಿಗಳ ಪಟ್ಟಿ, ಅಯ್ಕೆಯಾದ ಅಭ್ಯರ್ಥಿಗಳ ವಿವರ ಮತ್ತು ನೇಮಕಾತಿ ಆದೇಶಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಪಿಎಸ್‌ಸಿ ಕಾರ್ಯದರ್ಶಿಯಿಂದ ಈ ಅವಧಿಯ ಎಲ್ಲಾ ಮಾಹಿತಿಗಳನ್ನು ಪಡೆದಿರುವ ಅಧಿಕಾರಿಗಳು, ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚುತ್ತಿದ್ದಾರೆ.

ಸಿಐಡಿ ವಶದಲ್ಲಿರುವ ಒಎಂಆರ್ ಶೀಟ್‌ಗಳು

ತನಿಖೆಯ ವೇಳೆ ಇ.ಡಿ. ಅಧಿಕಾರಿಗಳು ಪಶುವೈದ್ಯಾಧಿಕಾರಿಗಳ ನೇಮಕಾತಿಯ ಸುಮಾರು 400 ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಕೇಳಿದ್ದಾರೆ. ಆದರೆ, ಈ ಶೀಟ್‌ಗಳನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಕೆಪಿಎಸ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಸಿಐಡಿ ಮತ್ತು ಇ.ಡಿ. ನಡುವಿನ ಸಮನ್ವಯದ ಮೂಲಕ ಹಗರಣದ ಆಳವನ್ನು ಅಗೆಯಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಅಕ್ರಮಕ್ಕೆ ಕಾರಣವಾದ ಸಾಫ್ಟ್‌ವೇರ್, ಅಂಕಗಳ ಬದಲಾವಣೆ ಮತ್ತು ಮಧ್ಯವರ್ತಿಗಳ ಪಾತ್ರದ ಬಗ್ಗೆ ಸಿಐಡಿ ಸಂಗ್ರಹಿಸಿರುವ ಪ್ರಾಥಮಿಕ ವರದಿಯನ್ನು ಇ.ಡಿ. ತನ್ನ ಅಕ್ರಮ ಹಣ ವರ್ಗಾವಣೆ ತನಿಖೆಗೆ ಆಧಾರವಾಗಿಟ್ಟುಕೊಳ್ಳಲಿದೆ.

ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಕಂಡುಬಂದಿರುವ ಬ್ಯಾಂಕ್ ಖಾತೆಗಳು, ಹೂಡಿಕೆಯ ದಾಖಲೆಗಳು ಮತ್ತು ಆಸ್ತಿ ಪತ್ರಗಳನ್ನು ಪರಿಶೀಲಿಸುತ್ತಿರುವ ಇ.ಡಿ. ಅಧಿಕಾರಿಗಳು, ಅಕ್ರಮ ಹಣ ವರ್ಗಾವಣೆಯ ಜಾಲವನ್ನು ಭೇದಿಸುತ್ತಿದ್ದಾರೆ. ನೇಮಕಾತಿ ಹಗರಣದಲ್ಲಿ ಪಡೆದ ಲಂಚದ ಹಣವನ್ನು ರಿಯಲ್ ಎಸ್ಟೇಟ್, ಉದ್ಯಮಗಳು ಮತ್ತು ವಿದೇಶಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆಯೇ ಎಂಬುದರ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ. ಇ.ಡಿ.ಯ ಈ ದಾಳಿಯು ಕೆಪಿಎಸ್‌ಸಿಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಭ್ರಷ್ಟಾಚಾರ ತನಿಖೆಯಾಗಿದೆ ಎಂದು ಹೇಳಲಾಗಿದೆ.

ಕೆಪಿಎಸ್‌ಸಿಯಂತಹ ಪವಿತ್ರ ಸಂಸ್ಥೆಯಲ್ಲಿನ ನೇಮಕಾತಿ ಹಗರಣವು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ. ಈ ದಾಳಿ ಮತ್ತು ತನಿಖೆಯು ಕೇವಲ ಒಂದು ನೇಮಕಾತಿಗೆ ಸೀಮಿತವಾಗದೆ, ಕಳೆದ ಮೂರು ವರ್ಷಗಳಲ್ಲಿ ನಡೆದ ಹಲವು ನೇಮಕಾತಿಗಳ ಮೇಲೆಯೂ ಸಂಶಯದ ಕಾರ್ಮೋಡವನ್ನು ಉಂಟುಮಾಡಿದೆ. ಶಿವಶಂಕರಪ್ಪ ಸಾಹುಕಾರ್ ಅವರ ಕಾಲಾವಧಿಯಲ್ಲಿ ನಡೆದ ಎಲ್ಲಾ ನೇಮಕಾತಿಗಳನ್ನು ಮರುಪರಿಶೀಲನೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ಇ.ಡಿ. ದಾಳಿಯು ಮುಂದುವರಿದಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಈ ಹಗರಣದಲ್ಲಿ ಭಾಗಿಯಾಗಿರುವ ದೊಡ್ಡ ದೊಡ್ಡ ರಾಜಕೀಯ ಮುಖಂಡರು ಮತ್ತು ಪ್ರಭಾವಿ ವ್ಯಕ್ತಿಗಳ ಹೆಸರುಗಳು ಹೊರಬರುವ ಸಾಧ್ಯತೆ ಇದೆ. ಸದ್ಯಕ್ಕೆ, ದಾಖಲೆಗಳ ಪರಿಶೀಲನೆ ಮತ್ತು ಬಂಧನಗಳ ಪ್ರಕ್ರಿಯೆ ಭರದಿಂದ ಸಾಗಿದ್ದು, ನೇಮಕಾತಿ ಹಗರಣದ ಕರಾಳ ಮುಖ ಇನ್ನಷ್ಟೇ ಸಂಪೂರ್ಣವಾಗಿ ಬಯಲಾಗಬೇಕಿದೆ.

Read More
Next Story