
ಬರೆಯಲೂ ಬಾರದ ಅಭ್ಯರ್ಥಿಗಳಿಗೆ ಉದ್ಯೋಗ: ಇಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು
ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪರೀಕ್ಷೆ ಬರೆಸಿದ್ದು ಮಾತ್ರವಲ್ಲದೆ, ಇಂಗ್ಲಿಷ್ನಲ್ಲಿ ಹೆಸರು ಬರೆಯಲು ಬಾರದವರಿಗೂ ಉದ್ಯೋಗ ಕೊಡಿಸಿರುವ ವಂಚನೆಯನ್ನು ಇಡಿ ಪತ್ತೆ ಹಚ್ಚಿದೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯಲ್ಲಿ, ಈ ಹಗರಣವು ಕೇವಲ ಪ್ರಶ್ನೆಪತ್ರಿಕೆ ಸೋರಿಕೆಗೆ ಸೀಮಿತವಾಗಿರದೆ, ಅತ್ಯಂತ ವ್ಯವಸ್ಥಿತವಾದ 'ಅಕ್ರಮ ನೇಮಕಾತಿ ಜಾಲ' ಎಂಬುದನ್ನು ಸಾಬೀತುಪಡಿಸುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪರೀಕ್ಷೆ ಬರೆಸಿದ್ದು ಮಾತ್ರವಲ್ಲದೆ, ಇಂಗ್ಲಿಷ್ನಲ್ಲಿ ತಮ್ಮ ಹೆಸರು ಬರೆಯಲು ಬಾರದವರಿಗೂ ಸರ್ಕಾರಿ ಉದ್ಯೋಗ ಕೊಡಿಸಿರುವ ಅತಿದೊಡ್ಡ ವಂಚನೆಯನ್ನು ಇಡಿ ಪತ್ತೆ ಹಚ್ಚಿದೆ.
ಕೆಪಿಎಸ್ಸಿ ಸದಸ್ಯರೇ ನೇರವಾಗಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಭಾವಿ ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ಕುಳಿತು ಪರೀಕ್ಷೆ ಬರೆಯುವ ಕಷ್ಟ ತಪ್ಪಿಸಲು, ಇವರೇ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ಗಳನ್ನು 'ಪರೀಕ್ಷಾ ಕೇಂದ್ರ'ಗಳಾಗಿ ಬಳಸಿಕೊಂಡಿದ್ದಾರೆ. ಪರೀಕ್ಷೆಗೂ ಮುನ್ನವೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಚೀಟಿಯಲ್ಲಿ ಉತ್ತರಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿತ್ತು. ಒಂದು ವೇಳೆ ಅದನ್ನೂ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗೆ, ಆಯೋಗದ ಸದಸ್ಯರೇ ಖುದ್ದು ಪ್ರಶ್ನೆಪತ್ರಿಕೆ ಮತ್ತು ಓಎಂಆರ್ ಶೀಟ್ ಒದಗಿಸಿ, ಹೋಟೆಲ್ನಲ್ಲೇ ಪರೀಕ್ಷೆ ಬರೆಸುವ ವಿಶೇಷ ಪ್ಲ್ಯಾನ್ ಮಾಡಿದ್ದರು.
ಅನಕ್ಷರಸ್ಥರಿಗೆ ಸರ್ಕಾರಿ ಹುದ್ದೆ: ಇಡಿಯ ಶಾಕಿಂಗ್ ರಿಪೋರ್ಟ್
ಈ ಹಗರಣದ ಅತ್ಯಂತ ಆಘಾತಕಾರಿ ಅಂಶವೆಂದರೆ, ಅರ್ಹತೆ ಇಲ್ಲದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು. ಇಡಿ ತನಿಖೆ ವೇಳೆ ಪತ್ತೆಯಾದ ಅಂಶವೊಂದರ ಪ್ರಕಾರ, ಸರ್ಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯೊಬ್ಬನಿಗೆ ಕನಿಷ್ಠ ತನ್ನ ಹೆಸರು ಮತ್ತು ವಿಳಾಸವನ್ನು ಇಂಗ್ಲಿಷ್ನಲ್ಲಿ ಬರೆಯಲು ಬರುತ್ತಿರಲಿಲ್ಲ. ಅಂತಹ ವ್ಯಕ್ತಿಗೆ, ಅತ್ಯಂತ ಸರ್ಕಾರಿ ಹುದ್ದೆಯನ್ನು ಕೊಡಿಸಲಾಗಿದೆ. ಇಂಗ್ಲಿಷ್ ಬರೆಯಲು ಬಾರದ ಅಭ್ಯರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಹೇಗೆ? ಎಂಬ ಪ್ರಶ್ನೆ ಇದೀಗ ತನಿಖೆಯ ದಿಕ್ಕನ್ನು ಬದಲಿಸಿದೆ. ಇಡಿ ಅಧಿಕಾರಿಗಳು ಈ ಅಭ್ಯರ್ಥಿಯ ಹಿನ್ನೆಲೆ ಮತ್ತು ಆತ ಆಯ್ಕೆಯಾದ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
ಫೈವ್ ಸ್ಟಾರ್ ಹೋಟೆಲ್ನಲ್ಲಿ ನಡೆದ ಈ ಪ್ರಹಸನದ ಬಳಿಕ, ಆ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ಅಧಿಕಾರಿಗಳು ಅತ್ಯಂತ ಜಾಣ್ಮೆಯಿಂದ ಮೂಲ ಉತ್ತರ ಪತ್ರಿಕೆಗಳ ಜೊತೆ ಸೇರಿಸುತ್ತಿದ್ದರು. ಮೌಲ್ಯಮಾಪನ ಮಾಡುವಾಗ ಯಾರಿಗೂ ಅನುಮಾನ ಬಾರದಂತೆ, ಅಕ್ರಮವಾಗಿ ಭರ್ತಿ ಮಾಡಿದ ಓಎಂಆರ್ ಶೀಟ್ಗಳಿಗೆ ಹೆಚ್ಚಿನ ಅಂಕಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಎಂಬುದು ಹೆಸರಿಗಷ್ಟೇ ಉಳಿದಿತ್ತು, ಒಳಗೊಳಗೆ ವ್ಯವಸ್ಥಿತವಾಗಿ ಮೆರಿಟ್ ಇಲ್ಲದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹುನ್ನಾರ ನಡೆದಿತ್ತು ಎಂದು ತನಿಖಾ ವರದಿಗಳು ತಿಳಿಸುತ್ತವೆ.
ಇಡಿ ತನಿಖೆಯ ಚುರುಕು
ಜಾರಿ ನಿರ್ದೇಶನಾಲಯವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮದಲ್ಲಿ ಭಾಗಿಯಾದ ಹೋಟೆಲ್ಗಳ ಸಿಬ್ಬಂದಿ, ಆಯೋಗದ ಸದಸ್ಯರು ಮತ್ತು ಫಲಾನುಭವಿ ಅಭ್ಯರ್ಥಿಗಳ ಜಾಡು ಹಿಡಿದಿದೆ. ಹೋಟೆಲ್ಗಳಲ್ಲಿ ನಡೆದ ಪರೀಕ್ಷೆಗಳ ಬಗ್ಗೆ ದೃಢವಾದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಅಧಿಕಾರಿಗಳು, ಈ ಅಕ್ರಮಕ್ಕೆ ಪರದೆಯ ಹಿಂದಿನಿಂದ ಸಹಕರಿಸಿದ ರಾಜಕೀಯ ಪ್ರಭಾವಿಗಳನ್ನೂ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಹಗರಣವು ಲಕ್ಷಾಂತರ ಯುವಕರ ಭವಿಷ್ಯದ ಜೊತೆ ಆಟವಾಡಿದೆ. ಹಗಲಿರುಳು ಕಷ್ಟಪಟ್ಟು ಓದಿ, ಗ್ರಂಥಾಲಯಗಳಲ್ಲಿ ನಿದ್ದೆ ಮಾಡಿ ಪರೀಕ್ಷೆ ಬರೆದ ಸಾವಿರಾರು ಪ್ರತಿಭಾವಂತ ಯುವಕರಿಗೆ ಈ ನೇಮಕಾತಿ ಅಕ್ರಮದಿಂದ ಅನ್ಯಾಯವಾಗಿದೆ. ನಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ, ಆದರೆ ಹಣವಿದ್ದವರಿಗೆ ಅಥವಾ ಪ್ರಭಾವಿಗಳಿಗೆ ನೇರವಾಗಿ ಸರ್ಕಾರಿ ಕೆಲಸ ಸಿಗುತ್ತಿದೆ ಎಂಬ ನೋವು ಈಗ ರಾಜ್ಯದ ಯುವಜನತೆಯಲ್ಲಿ ಭುಗಿಲೆದ್ದಿದೆ. ಈ ಅಕ್ರಮ ನೇಮಕಾತಿ ಜಾಲದಿಂದ ಸಮಾಜಕ್ಕೆ ಸಮರ್ಥ ಆಡಳಿತಗಾರರು ಸಿಗುವ ಬದಲು, ಲಂಚಬಾಕರು ಮತ್ತು ಅನರ್ಹರು ಅಧಿಕಾರಿಗಳಾಗಿ ಪ್ರವೇಶ ಪಡೆಯುತ್ತಿರುವುದು ದುರಂತ.
ಕೆಪಿಎಸ್ಸಿ ಹಗರಣದ ಈ ಬೆಳವಣಿಗೆಗಳು ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ಬಂದ ಸರ್ಕಾರಗಳ ಅವಧಿಯಲ್ಲೇ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸಿದೆ. ಇಡಿ ತನಿಖೆಯು ಅಂತಿಮ ಹಂತ ತಲುಪಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ದೊಡ್ಡ ಮೀನುಗಳ ಬಂಧನವಾಗುತ್ತಾ? ಅಥವಾ ರಾಜಕೀಯ ಪ್ರಭಾವದ ಬಳಸಿ ಈ ಪ್ರಕರಣವನ್ನೂ ಮುಚ್ಚಿ ಹಾಕಲಾಗುತ್ತಾ? ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

