ಐಎಎಸ್ ಅಧಿಕಾರಿಗಳ ನೇಮಕ ಕೆಪಿಎಸ್ಸಿಗೆ ಕಾಯಕಲ್ಪವೇ, ತಾತ್ಕಾಲಿಕ ಉಪಶಮನವೇ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪಾರದರ್ಶಕತೆ ತಂದಿದ್ದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್. ಅವರಿಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹೆಚ್ಚುವರಿ ಹೊಣೆಗಾರಿಕೆ ಹಾಗೂ ಲವಿಶ್ ಓರ್ಡಿಯಾ ಅವರಿಗೆ ಜಂಟಿ ಪರೀಕ್ಷಾ ನಿಯಂತ್ರಕರ ಜವಾಬ್ದಾರಿ ನೀಡಲಾಗಿದೆ.
ಒಂದು ಕಾಲದಲ್ಲಿ ಯುಪಿಎಸ್‌ಸಿ ಮಾದರಿಯಲ್ಲೇ ಅತ್ಯಂತ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ ಕಳೆದ ಕೆಲವು ವರ್ಷಗಳಿಂದ ನಿರಂತರ ಪೇಪರ್ ಲೀಕ್, ನೇಮಕಾತಿ ಅಕ್ರಮ, ಲಂಚದ ಆರೋಪ ಹಾಗೂ ವರ್ಷಗಳ ಕಾಲ ಫಲಿತಾಂಶ ವಿಳಂಬದಂತಹ ಸವಾಲುಗಳಿಂದ ತೀವ್ರ ಹಿನ್ನಡೆ ಅನುಭವಿಸಿದೆ. ಲಕ್ಷಾಂತರ ಅಭ್ಯರ್ಥಿಗಳಲ್ಲಿ ಮೂಡಿರುವ ತೀವ್ರ ಆಕ್ರೋಶದ ನಡುವೆ, ರಾಜ್ಯ ಸರ್ಕಾರಿ ರಂಗದಲ್ಲಿ ಆಡಳಿತಾತ್ಮಕ ಕಾಯಕಲ್ಪ ನೀಡಲು ಮಹತ್ವದ ಹೆಜ್ಜೆ ಇರಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪಾರದರ್ಶಕತೆ ತಂದಿದ್ದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಎಚ್. ಅವರಿಗೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹೆಚ್ಚುವರಿ ಹೊಣೆಗಾರಿಕೆ ಹಾಗೂ ಲವಿಶ್ ಓರ್ಡಿಯಾ ಅವರಿಗೆ ಜಂಟಿ ಪರೀಕ್ಷಾ ನಿಯಂತ್ರಕರ ಜವಾಬ್ದಾರಿ ನೀಡಲಾಗಿದೆ.
KEA ಮಾದರಿ KPSCಯಲ್ಲಿ ಸಾಧ್ಯವೇ?
ಕೆಇಎ ತಂತ್ರಜ್ಞಾನ ಆಧಾರಿತ ಪರೀಕ್ಷಾ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದು, ಬಯೋಮೆಟ್ರಿಕ್ ಹಾಜರಾತಿ, ಲೈವ್ ಸಿಸಿಟಿವಿ ಕಣ್ಗಾವಲು ಹಾಗೂ ಡಿಜಿಟಲ್ ಮೌಲ್ಯಮಾಪನ ಅಳವಡಿಸಿಕೊಂಡಿದೆ. ಆದರೆ, ಕೆಇಎ ಬಹುತೇಕ ಬಹು ಆಯ್ಕೆ ಮಾದರಿಯ ಪರೀಕ್ಷೆಗಳನ್ನು ನಡೆಸಿದರೆ, ಕೆಪಿಎಸ್ಸಿ ಕೆಎಎಸ್ ನಂತಹ ಪ್ರಬಂಧ ಹಾಗೂ ವಿವರಣಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಹೀಗಾಗಿ, ಕೆಇಎ ಮಾದರಿಯನ್ನು ಸಂಪೂರ್ಣವಾಗಿ ನಕಲು ಮಾಡುವುದು ಸಾಧ್ಯವಿಲ್ಲದಿದ್ದರೂ, ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲು ಅವಕಾಶವಿದೆ.
ತಕ್ಷಣ ಜಾರಿಗೆ ಬರಬೇಕಾದ ತಂತ್ರಜ್ಞಾನಗಳು
ಪ್ರಶ್ನೆಪತ್ರಿಕೆ ಬಾಕ್ಸ್‌ಗಳಿಗೆ ಜಿಪಿಎಸ್ ಅಳವಡಿಕೆ ಹಾಗೂ ಪರೀಕ್ಷೆಗೆ 30 ನಿಮಿಷ ಮುನ್ನ ಒಟಿಪಿ ಮೂಲಕ ತೆರೆಯುವ ಸ್ಮಾರ್ಟ್ ಲಾಕ್ ವ್ಯವಸ್ಥೆ ಮಾಡಬೇಕು.
ಪ್ರತಿ ಪ್ರಶ್ನೆಪತ್ರಿಕೆಯಲ್ಲೂ ವೈಯಕ್ತಿಕ ಕ್ಯೂಆರ್ ಕೋಡ್ ಮತ್ತು ವಾಟರ್ಮಾರ್ಕ್ ಇರಿಸುವುದರಿಂದ ಲೀಕ್ ಆದ ಪತ್ರಿಕೆಯ ಮೂಲವನ್ನು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬಹುದು. ಪರೀಕ್ಷಾ ಕೇಂದ್ರಗಳ ಲೈವ್ ವೆಬ್‌ಕಾಸ್ಟಿಂಗ್ ಹಾಗೂ ಮುಖಚಹರೆ ಗುರುತಿಸುವಿಕೆ ಜಾರಿಯಾಗಬೇಕು. ಕೆಎಎಸ್ ಮುಖ್ಯ ಪರೀಕ್ಷೆಯ ವಿವರಣಾತ್ಮಕ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಇವ್ಯಾಲ್ಯುಯೇಷನ್ಗೆ ಒಳಪಡಿಸುವುದರಿಂದ ಅಕ್ರಮಗಳನ್ನು ತಹಬದಿಗೆ ತರಬಹುದಾಗಿದೆ.
ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಶೀಟ್ ಇ-ಪ್ರತಿಯನ್ನು ಅಭ್ಯರ್ಥಿಯ ಲಾಗಿನ್‌ಗೆ ಅಪ್ಲೋಡ್ ಮಾಡುವುದು. 24 ಗಂಟೆಗಳಲ್ಲಿ ಕೀ ಉತ್ತರ ಬಿಡುಗಡೆ ಮಾಡುವ ನಿಖರತೆ ಕೆಪಿಎಸ್ಸಿಗೆ ತರುವುದು ಅತ್ಯಗತ್ಯ. ಕೇವಲ ಅಧಿಕಾರಿಗಳ ಬದಲಾವಣೆಯಿಂದ ವ್ಯವಸ್ಥೆ ಬದಲಾಗುವುದಿಲ್ಲ, ರಾಜಕೀಯ ಇಚ್ಛಾಶಕ್ತಿ ಹಾಗೂ ಕಠಿಣ ಕಾನೂನು ಜಾರಿಯಿಂದ ಮಾತ್ರ ಕೆಪಿಎಸ್ಸಿ ತನ್ನ ಕಳೆದುಹೋದ ಘನತೆಯನ್ನು ಮರಳಿ ಪಡೆಯಲು ಸಾಧ್ಯ.
ಮೂಲಭೂತ ಸವಾಲುಗಳೇನು?
ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಯಲ್ಲಿ ರಾಜಕೀಯ ಪ್ರಭಾವ ತಪ್ಪಿಸಿ, ಯುಪಿಎಸ್‌ಸಿ ಮಾದರಿಯಲ್ಲಿ ಸ್ವತಂತ್ರ ಸಮಿತಿ ರಚಿಸುವುದು. ವರ್ಷದ ಆರಂಭದಲ್ಲೇ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ ಕಡ್ಡಾಯವಾಗಿ ಪಾಲಿಸುವುದು. 2023ರ ಸಾರ್ವಜನಿಕ ಪರೀಕ್ಷೆ ಕಾಯ್ದೆಯಡಿ 3 ರಿಂದ 5 ವರ್ಷ ಜೈಲು ಶಿಕ್ಷೆ ಹಾಗೂ ಶಾಶ್ವತ ಡಿಬಾರ್ ಮಾಡುವುದು ಹಾಗೂ ಪೇಪರ್ ಲೀಕ್ ಅಥವಾ ಕೋಚಿಂಗ್ ಸೆಂಟರ್ ಭಾಗಿ ಸಾಬೀತಾದರೆ 5-10 ವರ್ಷ ಜೈಲು ಮತ್ತು ₹1 ಕೋಟಿ ದಂಡ ವಿಧಿಸುವಂತಹ ಕಾನೂನನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಕೆಪಿಎಸ್ಸಿಯ ಕಳಂಕ ತೊಳೆಯಬಹುದಾಗಿದೆ.

