ಕೆಪಿಎಸ್‌ಸಿ ನೇಮಕಾತಿ ಹಗರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ನಿವೃತ್ತ ಅಧಿಕಾರಿ
x

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿರುವ ನಿವೃತ್ತ ಅಧಿಕಾರಿ ಟಿ. ಪ್ರಕಾಶ್ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹಿಂಪಡೆದಿದ್ದಾರೆ.

ಕೆಪಿಎಸ್‌ಸಿ ನೇಮಕಾತಿ ಹಗರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ನಿವೃತ್ತ ಅಧಿಕಾರಿ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಟಿ. ಪ್ರಕಾಶ್, ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡಿದ್ದ ಹಲವು ಆಯ್ಕೆ ಪಟ್ಟಿಗಳಿಗೆ ಸಹಿ ಹಾಕಿದ್ದ ಅಧಿಕಾರಿಯಾಗಿದ್ದಾರೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಗಳ ತನಿಖೆ ಎದುರಿಸುತ್ತಿರುವ ನಿವೃತ್ತ ಸಹಾಯಕ ಕಾರ್ಯದರ್ಶಿ ಟಿ. ಪ್ರಕಾಶ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹಿಂಪಡೆದಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಾಗೂ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (CID) ತನಿಖೆ ನಡೆಸುತ್ತಿದೆ. ಈ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಪ್ರಕಾಶ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಎರಡು ನೇಮಕಾತಿ ಹಗರಣಗಳಲ್ಲಿ ತನಿಖೆ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಟಿ. ಪ್ರಕಾಶ್, ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡಿದ್ದ ಹಲವು ಆಯ್ಕೆ ಪಟ್ಟಿಗಳಿಗೆ ಸಹಿ ಹಾಕಿದ್ದ ಅಧಿಕಾರಿಯಾಗಿದ್ದಾರೆ. ರಾಜ್ಯದಲ್ಲಿ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಾಗೂ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಪ್ರಕಾಶ್ ಅವರ ಪಾತ್ರದ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.

ಇ.ಡಿ. ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ

ಪ್ರಕಾಶ್ ಅವರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಕಳೆದ ಆಗಸ್ಟ್‌ನಲ್ಲಿ ಶೋಧ ನಡೆಸಿತ್ತು. ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರಗಳ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ. ಪ್ರಕಾಶ್ ಅವರ ಜಾಮೀನು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ಪ್ರಕರಣಗಳಿಗೆ ಸಂಬಂಧಿಸಿದಂತೆ ಇ.ಡಿ. ಆಕ್ಷೇಪಣೆ ಸಲ್ಲಿಸಬೇಕಿದೆ ಎಂದು ರಾಜ್ಯದ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೆ, ಎರಡು ಪ್ರಕರಣಗಳಲ್ಲಿ ಒಂದನ್ನು ಕರ್ನಾಟಕ ಹೈಕೋರ್ಟ್ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದ್ದರು.

ಇದರ ಬೆನ್ನಲ್ಲೇ ಟಿ. ಪ್ರಕಾಶ್ ತಮ್ಮ ಅರ್ಜಿಗಳನ್ನು ಹಿಂಪಡೆದಿದ್ದಾರೆ. ಅರ್ಜಿಗಳನ್ನು ಹಿಂಪಡೆಯಲು ಅನುಮತಿ ನೀಡಿದ ನ್ಯಾಯಾಲಯ, ಅಗತ್ಯವಿದ್ದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಪರೀಕ್ಷೆಯಿಂದ ಸಂದರ್ಶನದವರೆಗೆ ಲಂಚದ ಆರೋಪ

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪರೀಕ್ಷೆ, ಸಂದರ್ಶನ ಹಾಗೂ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸುವ ಹಂತಗಳಲ್ಲಿ ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ ಎಂಬ ಆರೋಪಗಳಿವೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದೆ. ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸಿಐಡಿ ಮತ್ತು ಇ.ಡಿ. ಬಂಧಿಸಿವೆ. ಅಭ್ಯರ್ಥಿಗಳಿಂದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಮೂಲಕ 1.5 ಕೋಟಿ ರೂ.ಗೂ ಅಧಿಕ ಲಂಚ ಪಡೆದು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಆರೋಪ ಅವರ ಮೇಲಿದೆ.

ಇನ್ನೊಂದೆಡೆ, 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಪ್ರಕರಣದಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಯೊಬ್ಬರೊಂದಿಗೆ ಸಂದರ್ಶನಕ್ಕೂ ಮುನ್ನ 13 ಬಾರಿ ದೂರವಾಣಿ ಸಂಪರ್ಕ ಹೊಂದಿದ್ದ ಆರೋಪದ ಕುರಿತು ಸಿಐಡಿ ಪರಿಶೀಲನೆ ನಡೆಸುತ್ತಿದೆ. ಈ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಡೆಹಿಡಿಯಲಾಗಿದೆ.

Read More
Next Story