ಸಂಬಂಧಿಕರಿಗೆ ಕ್ಲಾಸ್‌-1ಹುದ್ದೆ ಕೊಡಿಸಿದ್ದು ಯಾರು?; ಎಚ್‌ಡಿಕೆಗೆ ಖರ್ಗೆ ತಿರುಗೇಟು
x

ಸಂಬಂಧಿಕರಿಗೆ ಕ್ಲಾಸ್‌-1ಹುದ್ದೆ ಕೊಡಿಸಿದ್ದು ಯಾರು?; ಎಚ್‌ಡಿಕೆಗೆ ಖರ್ಗೆ ತಿರುಗೇಟು

"ನನ್ನ ವಿರುದ್ಧ ಮಾತನಾಡುವ ಮೂಲಕ ಕೇಂದ್ರ ಸಂಪುಟದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹಾಗೂ ಬಿಜೆಪಿ, ಸಂಘ ಪರಿವಾರವನ್ನು ಮೆಚ್ಚಿಸಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ" ಎಂದು ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ಮುಂದುವರಿದಿದೆ. ಪಶುವೈದ್ಯಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ಮೆಚ್ಚಿಸಲು ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲೂ ಎಇಇ ನೇಮಕಾತಿಯಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ಸ್ವತಃ ಕೆಪಿಎಸ್ಸಿ ವರದಿ ನೀಡಿತ್ತು. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದೆ ತಪ್ಪಿತಸ್ಥರನ್ನು ರಕ್ಷಿಸಿರುವ ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಆಗ್ರಹಿಸಿದ್ದರು.

ಎಚ್‌ಡಿಕೆಗೆ ಖರ್ಗೆ ತಿರುಗೇಟು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ನನ್ನ ವಿರುದ್ಧ ಮಾತನಾಡುವ ಮೂಲಕ ಕೇಂದ್ರ ಸಂಪುಟದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹಾಗೂ ಬಿಜೆಪಿ, ಸಂಘ ಪರಿವಾರವನ್ನು ಮೆಚ್ಚಿಸಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಸ್ತುತ ಅಮಾನತಿನಲ್ಲಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ನೇಮಿಸಿದ್ದು ಯಾರು?, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಎಷ್ಟು ವ್ಯವಹಾರ ನಡೆದಿತ್ತು ಎಂಬುದು ಮೈತ್ರಿ ಮಿತ್ರರಾದ ಬಿಜೆಪಿಗರಿಗೇ ಗೊತ್ತಿದೆ. ಈ ಬಗ್ಗೆ ತಮ್ಮ ಕೇಸರಿ ಮಿತ್ರರನ್ನೇ ಕೇಳಲಿ. ನನ್ನ ವಿರುದ್ಧದ ಆರೋಪಕ್ಕೆ ವಾಸ್ತವಾಂಶಗಳ ಮೂಲಕವೇ ಉತ್ತರ ನೀಡುತ್ತೇನೆ ಎಂದು ಟಾಂಗ್‌ ಕೊಟ್ಟಿದ್ದಾರೆ.

ಈ ಹಿಂದೆ ಜೆಡಿಎಸ್ ತೊರೆದ ನಾಯಕರೊಬ್ಬರ ವಿರುದ್ಧ ಮಾತನಾಡುವಾಗ ಸ್ವತಃ ಕುಮಾರಸ್ವಾಮಿ ಅವರೇ,"ನನ್ನ ಅವಧಿಯಲ್ಲಿ ಹಲವು ಸಂಬಂಧಿಕರಿಗೆ ಕ್ಲಾಸ್-1 ಹುದ್ದೆಗಳನ್ನು ಕೊಡಿಸಿದ್ದೆ" ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದಲೇ ನೇಮಕಾತಿಗಳಲ್ಲಿ ಅವರ ಪ್ರಭಾವ ಎಷ್ಟಿತ್ತು ಎಂಬುದು ಗೊತ್ತಾಗಲಿದೆ ಎಂದು ಟೀಕಿಸಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಹಾಗೂ ಈ ಹಿಂದೆ ಹೆಚ್ಡಿಕೆ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೆಎಎಸ್ ಅಧಿಕಾರಿಗಳ ನೇಮಕಾತಿ ಅಕ್ರಮಗಳು ಮತ್ತು ಕೆಪಿಎಸ್ಸಿಯ ಹಿಂದಿನ ಅಧ್ಯಕ್ಷರ ಹಗರಣಗಳನ್ನು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

Read More
Next Story