x

KPSC ಹಗರಣದ ರೂವಾರಿ ಸಾಹುಕಾರ್‌ ಮನೆ ಮೇಲೆ ಇಡಿ ದಾಳಿ ಸೇರಿದಂತೆ ಇಂದಿನ ಪ್ರಮುಖ 3 ಸುದ್ದಿಗಳು

ಕೆಪಿಎಸ್‌ಸಿ ಹಗರಣದ ಸಾಹುಕಾರ್‌ ತಂಡದ ಮೇಲೆ ಇಡಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ. ಹನೂರು ಪ್ರಕರಣದಲ್ಲಿ ಮೂಗು ತೂರಿಸದಂತೆ ತ.ನಾಡಿಗೆ ಕರ್ನಾಟಕ ಎಚ್ಚರಿಕೆ ನೀಡಿದೆ. ಮೇಕೆದಾಟು ಯೋಜನೆ ಸಂಬಂಧ ಪರಿಷ್ಕೃತ ಡಿಪಿಆರ್‌ ಸಲ್ಲಿಕೆಯಾಗಿದೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣವು ರಾಜ್ಯದ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಮತ್ತು ನಂಬಿಕೆಗೆ ದೊಡ್ಡ ಪೆಟ್ಟು ನೀಡಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಮತ್ತು ಅಕ್ರಮಗಳ ಕುರಿತಾಗಿ ಜಾರಿ ನಿರ್ದೇಶನಾಲಯ, ಅಂದರೆ ಇಡಿ ನಡೆಸಿರುವ ಬೃಹತ್ ಶೋಧ ಕಾರ್ಯಾಚರಣೆಯು ಇದೀಗ ರಾಜ್ಯದ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಕರ್ನಾಟಕ ಮಾತ್ರವಲ್ಲದೇ, ಗುಜರಾತ್‌ನ ಅಹಮದಾಬಾದ್‌ಸೇರಿ ಒಟ್ಟು 21 ಕಡೆಗಳಲ್ಲಿ ಬೆಂಗಳೂರು ವಲಯದ ಇಡಿ ಅಧಿಕಾರಿಗಳು ಇವತ್ತು ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್.ಸಾಹುಕಾರ್, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ, ಹಗರಣದ ಮಧ್ಯವರ್ತಿಗಳು, ಪರೀಕ್ಷಾ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದ ಜವಾಬ್ದಾರಿ ಹೊತ್ತಿದ್ದ ಎಡುಟೆಸ್ಟ್ ಸೊಲ್ಯೂಷನ್ಸ್ ಸಂಸ್ಥೆಯ ಕಚೇರಿ ಹಾಗೂ ಆಯ್ಕೆಯಾದ ಪಶು ವೈದ್ಯಾಧಿಕಾರಿ ಅಭ್ಯರ್ಥಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಶೋಧ ಕಾರ್ಯದ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ಮೂಲಗಳು ಹೇಳಿವೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಇಡಿ ಕಾರ್ಯಾಚರಣೆ ಕೈಗೊಂಡಿದೆ. ಮುಂಜಾನೆಯಿಂದಲೇ ಶೋಧ ಕಾರ್ಯ ನಡೆಯುತ್ತಿವೆ.

ಇಡಿ ಅಧಿಕಾರಿಗಳು ಏಕಕಾಲದಲ್ಲಿ 21 ಕಡೆಗಳಲ್ಲಿ ನಡೆಸಿರುವ ದಾಳಿಯ ಪೈಕಿ ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರಗಿ, ಬೆಳಗಾವಿ ಮತ್ತು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಈ ದಾಳಿ, ಹಗರಣವು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ, ಬದಲಾಗಿ ಅಂತಾರಾಜ್ಯ ಸಂಪರ್ಕವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ. ಎಡುಟೆಸ್ಟ್ ಸೊಲ್ಯೂಷನ್ಸ್ ಸಂಸ್ಥೆಯು ಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನದ ಜವಾಬ್ದಾರಿಯನ್ನು ಹೊತ್ತಿದ್ದು, ಈ ಸಂಸ್ಥೆಯ ಮೇಲಿನ ದಾಳಿಯು ಅತ್ಯಂತ ನಿರ್ಣಾಯಕವಾಗಿದೆ. ತಾಂತ್ರಿಕವಾಗಿ ಮೌಲ್ಯಮಾಪನದಲ್ಲಿ ನಡೆದಿರುವ ತಿರುಚುವಿಕೆಗಳ ಬಗ್ಗೆ ಇಡಿ ಆಳವಾದ ತನಿಖೆ ನಡೆಸುತ್ತಿದೆ.

ಶಿವಶಂಕರಪ್ಪ ಸಾಹುಕಾರ್ ಅವರ ಬೆಂಗಳೂರು, ಕಲಬುರಗಿ ನಿವಾಸ ಮತ್ತು ಕೆಪಿಎಸ್‌ಸಿ ಕಚೇರಿ ಸೇರಿದಂತೆ ಇತರೆಡೆಯಲ್ಲಿಯೂ ಶೋಧ ನಡೆಯುತ್ತಿದೆ. ಅಕ್ರಮದಲ್ಲಿ ಪಡೆದ ಹಣವನ್ನು ಹವಾಲ‌ಮೂಲಕ ವರ್ಗಾವಣೆ ಶಂಕೆ ವ್ಯಕ್ತವಾಗಿದೆ. ಹೊಯ್ಸಳ ಡ್ರೀಮ್ಸ್ ಅಪಾರ್ಟ್​​ಮೆಂಟ್ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗುತ್ತಿದೆ. ಶಿವಶಂಕರಪ್ಪ ಸಾಹುಕಾರ್​ಗೆ ಸೇರಿದ ಪ್ಲಾಟ್ ನಂಬರ್​ 304ರಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಆರ್​ಪಿಎಫ್ ಭದ್ರತೆಯೊಂದಿಗೆ ಕೆಪಿಎಸ್​ಸಿ ಕಚೇರಿಗೆ ನಾಲ್ಕು ಕಾರುಗಳಲ್ಲಿ ಬಂದ ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ.

ಒಕ್ಕೂಟ ವ್ಯವಸ್ಥೆ ನಡುವೆ ರಾಜಕೀಯ ಸಂಘರ್ಷ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣವು ಕೇವಲ ಒಂದು ರಾಜ್ಯದ ಕಾನೂನು-ಸುವ್ಯವಸ್ಥೆಯ ಸಮಸ್ಯೆಯಾಗಿ ಉಳಿಯದೆ, ಇದೀಗ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಒಕ್ಕೂಟ ವ್ಯವಸ್ಥೆ ನಡುವಿನ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ನೆಪದಲ್ಲಿ ತಮಿಳುನಾಡಿನ ರಾಜಕೀಯ ನಾಯಕರು ಕರ್ನಾಟಕದ ಆಡಳಿತದ ಬಗ್ಗೆ ನೀಡಿರುವ ಹೇಳಿಕೆಗಳು ಒಕ್ಕೂಟ ವ್ಯವಸ್ಥೆಯಲ್ಲಿ ಇನ್ನೊಂದು ರಾಜ್ಯ ಮೂಗು ತೂರಿಸುವ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದಿವೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್​ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ತಂಡ ಭೇಟಿ ನೀಡಿದೆ. ತೋಮಿಯರ್​ಪಾಳ್ಯದ ಚರ್ಚ್​ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ಅಲ್ಲದೇ, ಸಂತ್ರಸ್ತರ ಕುಟುಂಬದವರನ್ನು ಭೇಟಿ ಮಾಡಿ ಸಂತ್ವಾನ ಹೇಳಿದ್ದಾರೆ.

ಈ ನಡುವೆ, ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್​​ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನೂ ನೆರೆ ರಾಜ್ಯದ ಸರ್ಕಾರ ಘೋಷಿಸಿದೆ. ಅಲ್ಲಿನ ವಿಧಾನಸಭೆಯಲ್ಲೂ ಹನೂರು ಶೂಟೌಟ್​​ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದು, ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಇದೇ ಸಂದರ್ಭದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಅವರು ಈ ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ಅವರ ಜೊತೆಗೆ ತಮಿಳುನಾಡಿನ ಇತರ ನಾಯಕರೂ ಇದೇ ಧಾಟಿಯಲ್ಲಿ ಮಾತನಾಡುತ್ತಿರುವುದು ಕರ್ನಾಟಕ ಸರ್ಕಾರಕ್ಕೆ ಅಸಮಾಧಾನ ತಂದಿದೆ.

ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಸೇರಿದಂತೆ ಇತರರು ಮಧ್ಯಪ್ರವೇಶಿಸಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜ್ಯದ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಕೇಂದ್ರಕ್ಕೆ ಪರಿಷ್ಕೃತ ಡಿಪಿಆರ್‌ ಸಲ್ಲಿಕೆ

ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗವು ವಾಪಸ್‌ಕಳುಹಿಸಿದ ವಿಸ್ತೃತ ಯೋಜನಾ ವರದಿಯನ್ನು ರಾಜ್ಯ ಸರ್ಕಾರವು ಮತ್ತೊಮ್ಮೆ ಪರಿಷ್ಕರಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಕೇಂದ್ರ ಜಲ ಆಯೋಗಕ್ಕೆ ಸಲ್ಲಿಕೆಯಾಗಿರುವ ಡಿಪಿಆರ್‌ನಲ್ಲಿ ಲೋಪದೋಷಗಳನ್ನು ಸರಿಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

6.95 ಟಿಎಂಸಿಗೆ ಹೆಚ್ಚಳ ಮಾಡಿರುವುದು ಸೇರಿದಂತೆ ಕೇಂದ್ರ ಎತ್ತಿದ್ದ ಆಕ್ಷೇಪಗಳನ್ನು ಸರಿಪಡಿಸಲಾಗಿದೆ. ಈಗ ಮೂಲ ಅನುಮೋದನೆ ಪಡೆದ 4.75 ಟಿಎಂಸಿಯ ಮಿತಿಗೆ ಅನುಗುಣವಾಗಿ ಪರಿಷ್ಕೃತ ಡಿಪಿಆರ್ ಮಾಡಲಾಗಿದೆ. ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿರುವ ರಾಜ್ಯ ಸರ್ಕಾರವು ಮುಂದಿನ ವರ್ಷದ ಆಗಸ್ಟ್ ಒಳಗಾಗಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.

ಕೇಂದ್ರ ಜಲ ಆಯೋಗವು ಮೂಲ ಪ್ರಸ್ತಾವನೆಯಲ್ಲಿ 4.75 ಟಿಎಂಸಿ ನೀರಿನ ಬಳಕೆ ಎಂದು ನಮೂದಿಸಲಾಗಿತ್ತು. ಆದರೆ, ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಇದನ್ನು 6.95 ಟಿಎಂಸಿಗೆ ಏರಿಸಲಾಗಿದೆ. ಈ ಹೆಚ್ಚುವರಿ ಬಳಕೆಯು ಸುಪ್ರೀಂ ಕೋರ್ಟ್‌ನ 2018ರ ತೀರ್ಪಿನ ಪ್ರಕಾರ ನಿಗದಿಪಡಿಸಿರುವ ಮಿತಿಯನ್ನು ಮೀರಿದೆ ಎಂಬುದು ಆಯೋಗದ ಆಕ್ಷೇಪವಾಗಿತ್ತು. ಅಲ್ಲದೇ, ಯೋಜನೆಯಲ್ಲಿ ಬಳಸಲಾದ ಕುಡಿಯುವ ನೀರಿನ ಬೇಡಿಕೆಯ ಅಂಕಿ-ಅಂಶಗಳು 1990ರ ಕಾಲಘಟ್ಟಕ್ಕೆ ಸೇರಿವೆ. ಕಳೆದ 36 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ ಮತ್ತು ನೀರಿನ ಬೇಡಿಕೆಯಲ್ಲಿ ಅಗಾಧ ಬದಲಾವಣೆಯಾಗಿದೆ. 2026ರ ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸದ ಹಳೇ ವರದಿಗಳು ತಾಂತ್ರಿಕವಾಗಿ ಮಾನ್ಯವಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಡಿಪಿಆರ್‌ನಲ್ಲಿ ಕೇವಲ ಮೇಕೆದಾಟು ಜಲಾಶಯದ ಕುರಿತು ಮಾತ್ರ ಸ್ಪಷ್ಟತೆ ಇರಬೇಕಿತ್ತು. ಆದರೆ, ಮಧ್ಯದಲ್ಲಿಯೇ ಶಿವನಸಮುದ್ರ ರನ್-ಆಫ್-ರಿವರ್ ಪವರ್ ಯೋಜನೆಯನ್ನು ಸೇರಿಸಿರುವುದು ವರದಿಯನ್ನು ಸಂಕೀರ್ಣಗೊಳಿಸಿದೆ. ಇದು ಮೂಲ ಯೋಜನೆಯ ಉದ್ದೇಶದಿಂದ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿದೆ. ಈ ಎಲ್ಲಾ ಅಂಶಗಳನ್ನು ಸರಿಪಡಿಸಿ ಪರಿಷ್ಕತವಾದ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Read More
Next Story