ಕೆಪಿಎಸ್‌ಸಿ ಹಗರಣ:‌ ಜೈಲಿನಲ್ಲಿರುವ ಜ್ಞಾನೇಂದ್ರ ಕುಮಾರ್, ಕನ್ನಾಳೆ ಇಡಿ ವಶಕ್ಕೆ
x

ಕೆಪಿಎಸ್‌ಸಿ ಹಗರಣ:‌ ಜೈಲಿನಲ್ಲಿರುವ ಜ್ಞಾನೇಂದ್ರ ಕುಮಾರ್, ಕನ್ನಾಳೆ ಇಡಿ ವಶಕ್ಕೆ

ಇಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದ ಇಡಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಜಾರಿ ನಿರ್ದೇಶನಾಲಯ (ಇಡಿ) ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಜೈಲಿನಲ್ಲೇ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಣದ ವಹಿವಾಟು ಹಾಗೂ ಅಕ್ರಮ ಹಣ ವರ್ಗಾವಣೆಯ ಕುರಿತು ಇಡಿ ತನಿಖೆ ನಡೆಸುತ್ತಿದೆ.

ಇಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ವಿಚಾರಣೆಗಾಗಿ ಅವರನ್ನು ವಶಕ್ಕೆ ಪಡೆದಿರುವ ಇಡಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ.

ಇದಕ್ಕೂ ಮುನ್ನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಪಶುವೈದ್ಯಾಧಿಕಾರಿಗಳ ಹುದ್ದೆ ಕೊಡಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ 11 ಕೋಟಿ ರೂ.ಗಳಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂಬುದನ್ನು ಪತ್ತೆಹಚ್ಚಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೆಲವು ಬ್ಯಾಂಕ್ ಖಾತೆಗಳ ಪರಿಶೀಲನೆ ಬಾಕಿ ಇದ್ದು, ಕೆಲವರು ನಗದು ರೂಪದಲ್ಲಿಯೂ ಹಣ ನೀಡಿರುವ ಶಂಕೆ ಇದೆ ಎಂದು ತನಿಖಾ ಮೂಲಗಳು ಹೇಳಿವೆ.

ಅಕ್ರಮ ಹಣದಿಂದ ಆಸ್ತಿ ಖರೀದಿ ಆರೋಪ

ತನಿಖೆಯಲ್ಲಿರುವ ಆರೋಪಿಗಳಾದ ಬಸವರಾಜ್ ಕನ್ನಾಳೆ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಅಕ್ರಮವಾಗಿ ಸಂಗ್ರಹಿಸಿದ ಹಣದಲ್ಲಿ ಆಭರಣ, ವಾಹನ ಹಾಗೂ ಫ್ಲ್ಯಾಟ್ ಖರೀದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸಿಐಡಿ ವಿಚಾರಣೆ ವೇಳೆ ಕನ್ನಾಳೆ ಅವರು ಜ್ಞಾನೇಂದ್ರ ಕುಮಾರ್ ಅವರ ಮಾತನ್ನು ನಂಬಿ ತಮ್ಮ ಭವಿಷ್ಯ ಹಾಳು ಮಾಡಿಕೊಂಡಿರುವುದಾಗಿ ಅಳಲು ತೋಡಿಕೊಂಡಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ. ಆರೋಪಿಗಳನ್ನು ಸಿಐಡಿ ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

56 ಲಕ್ಷ ರೂ. ಮೌಲ್ಯದ ಆಭರಣ ಖರೀದಿ ಆರೋಪ

ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮ್ಮ ಆಪ್ತ ಗೆಳತಿಗೆ ದುಬಾರಿ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಹೊರರಾಜ್ಯದ ಮಳಿಗೆಯೊಂದರಲ್ಲಿ ಸುಮಾರು 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿರುವ ದಾಖಲೆಗಳು ಈ ಹಿಂದೆ ಪತ್ತೆಯಾಗಿದ್ದವು. ತನಿಖೆ ಮುಂದುವರಿಸಿದಾಗ ಬೆಂಗಳೂರಿನ ಪ್ರತಿಷ್ಠಿತ ಮಳಿಗೆಯೊಂದರಲ್ಲಿ ಮತ್ತೊಂದು 30 ಲಕ್ಷ ರೂ. ಮೌಲ್ಯದ ಆಭರಣ ಖರೀದಿಸಿರುವ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ಹೀಗಾಗಿ, ಪ್ರಕರಣದಲ್ಲಿ ಅಭ್ಯರ್ಥಿಗಳಿಂದ ಸಂಗ್ರಹಿಸಲಾಗಿದೆ ಎನ್ನಲಾದ ಹಣದಲ್ಲಿ ಒಟ್ಟು 56 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಜ್ಞಾನೇಂದ್ರ ಕುಮಾರ್ ಖರೀದಿಸಿದ್ದಾರೆ ಎಂದು ಸಿಐಡಿ ಮೂಲಗಳು ಹೇಳಿವೆ.

ಬೀದರ್ ಜಿಲ್ಲೆಯ ಭಾಲ್ಕಿಯ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯಲ್ಲಿನ ಖಾತೆಗಳ ಪರಿಶೀಲನೆ ವೇಳೆ ಆಭರಣ ಮಳಿಗೆಗಳಿಗೆ ಹಣ ವರ್ಗಾವಣೆಯಾಗಿರುವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಹಣದ ವಹಿವಾಟಿನ ಜಾಡು ಹಿಡಿದು ತನಿಖೆ ನಡೆಸಿದಾಗ ದೆಹಲಿಯಲ್ಲಿ ನೆಲೆಸಿರುವ ಗೆಳತಿಗೆ ಆಭರಣ ನೀಡಿರುವ ವಿಚಾರವೂ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದಲ್ಲಿ ಹಣದ ಮೂಲ, ಬ್ಯಾಂಕ್ ವಹಿವಾಟು ಹಾಗೂ ಅಕ್ರಮದಿಂದ ಸಂಗ್ರಹಿಸಲಾಗಿದೆ ಎನ್ನಲಾದ ಹಣವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Read More
Next Story