
319 ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ನ.15ರಂದು ನಡೆಯಲಿದೆ. ಅಕ್ರಮ ತಡೆಗೆ ಸಿಸಿಟಿವಿ, ಇಬ್ಬರು ಮೇಲ್ವಿಚಾರಕರು, ಒಎಂಆರ್ನಲ್ಲಿ ಐದನೇ ವೃತ್ತದ ವ್ಯವಸ್ಥೆ ಜಾರಿ.
ಕೆಪಿಎಸ್ಸಿ ಪರೀಕ್ಷೆಗೆ ಕ್ಷಣಗಣನೆ: ನವೆಂಬರ್ 15ಕ್ಕೆ ಪೂರ್ವಭಾವಿ ಪರೀಕ್ಷೆ , ಕಟ್ಟುನಿಟ್ಟಿನ ಕ್ರಮ
ಒಎಂಆರ್ ಶೀಟ್ಗಳಲ್ಲಿ ತಿದ್ದುಪಡಿ ನಡೆಯುತ್ತಿದೆ ಎಂಬ ಅಭ್ಯರ್ಥಿಗಳ ಅನುಮಾನ ನಿವಾರಿಸುವುದು ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಈ ಹೊಸ ವ್ಯವಸ್ಥೆಯ ಉದ್ದೇಶವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ (KPSC) 319 ಗೆಜೆಟೆಡ್ ಪ್ರೊಬೇಷನರಿ (GP) ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಪೂರ್ವಭಾವಿ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 15ರಂದು ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮುಂದೂಡಿಕೆಯಾಗುವ ಅಥವಾ ವೇಳಾಪಟ್ಟಿ ಬದಲಾಗುವ ಸಾಧ್ಯತೆಗಳ ಕುರಿತು ಅಭ್ಯರ್ಥಿಗಳಲ್ಲಿದ್ದ ಗೊಂದಲಕ್ಕೆ ಕೆಪಿಎಸ್ಸಿ ತೆರೆ ಎಳೆದಿದೆ. ನಿಗದಿತ ವೇಳಾಪಟ್ಟಿಯಂತೆಯೇ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆ ನಡೆಯಲಿದ್ದು, ಫಲಿತಾಂಶವನ್ನೂ ಪ್ರಕಟಿಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಪರೀಕ್ಷಾ ಅಕ್ರಮ ತಡೆಗೆ ಕೆಪಿಎಸ್ಸಿಯಿಂದ ಬಿಗಿ ಕ್ರಮ
ಹಿಂದಿನ ಪರೀಕ್ಷೆಗಳಲ್ಲಿ ನಡೆದ ಲೋಪದೋಷಗಳು ಮತ್ತು ಅಕ್ರಮಗಳು ಮರುಕಳಿಸದಂತೆ ಕೆಪಿಎಸ್ಸಿ ಈ ಬಾರಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 24 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತಿದೆ.
ಇದರ ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಸಿಗ್ನಲ್ ಜಾಮರ್ಗಳನ್ನು ಅಳವಡಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾಡಳಿತದ ಮೂಲಕವೇ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ. ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಪಿಎಸ್ಸಿ ವೆಬ್ಸೈಟ್ಗೆ ಅಪ್ಲೋಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಯೋಗ ಮುಂದಾಗಿದೆ.
ಒಎಂಆರ್ ಶೀಟ್ನಲ್ಲಿ ಐದನೇ ವೃತ್ತದ ವಿಶೇಷತೆ ಏನು?
ಈ ಬಾರಿಯ ಕೆಪಿಎಸ್ಸಿ ಪರೀಕ್ಷೆಯಲ್ಲಿ ಒಎಂಆರ್ ಉತ್ತರ ಪತ್ರಿಕೆಯ ಐದನೇ ವೃತ್ತ ವಿಶೇಷ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ನಾಲ್ಕು ಉತ್ತರ ಆಯ್ಕೆಗಳ ವೃತ್ತಗಳಿರುತ್ತಿದ್ದವು. ಆದರೆ ಈ ಬಾರಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಐದನೇ ವೃತ್ತವನ್ನೂ ಪರಿಚಯಿಸಲಾಗಿದೆ.
ಯಾವುದೇ ಪ್ರಶ್ನೆಗೆ ಉತ್ತರ ತಿಳಿದಿಲ್ಲದಿದ್ದರೆ ಅಭ್ಯರ್ಥಿಗಳು ಕೊನೆಯ ಬೆಲ್ ನಂತರ ನೀಡಲಾಗುವ ಹೆಚ್ಚುವರಿ ಐದು ನಿಮಿಷಗಳ ಅವಧಿಯಲ್ಲಿ ಐದನೇ ವೃತ್ತವನ್ನು ಶೇಡ್ ಮಾಡಬೇಕು. ಉತ್ತರ ತಿಳಿಯದ ಪ್ರಶ್ನೆಗೆ ಮೊದಲ ನಾಲ್ಕು ವೃತ್ತಗಳನ್ನು ಖಾಲಿ ಬಿಟ್ಟು ಐದನೇ ವೃತ್ತವನ್ನು ಗುರುತಿಸಿದರೆ ಯಾವುದೇ ಅಂಕ ಕಡಿತವಾಗುವುದಿಲ್ಲ. ಆದರೆ ತಪ್ಪು ಉತ್ತರವನ್ನು ಆಯ್ಕೆ ಮಾಡಿದರೆ ಮಾತ್ರ ನೆಗೆಟಿವ್ ಮಾರ್ಕ್ಸ್ ಅನ್ವಯವಾಗಲಿದೆ. ಒಎಂಆರ್ ಶೀಟ್ಗಳಲ್ಲಿ ತಿದ್ದುಪಡಿ ನಡೆಯುತ್ತಿದೆ ಎಂಬ ಅಭ್ಯರ್ಥಿಗಳ ಅನುಮಾನ ನಿವಾರಿಸುವುದು ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಈ ಹೊಸ ವ್ಯವಸ್ಥೆಯ ಉದ್ದೇಶವಾಗಿದೆ.
2027ರ ಜೂನ್ಗೆ ಆಯ್ಕೆ ಪಟ್ಟಿ ಸಲ್ಲಿಸುವ ಗುರಿ
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಹಲವು ಬದಲಾವಣೆಗಳನ್ನು ಜಾರಿಗೆ ತಂದಿರುವ ಕೆಪಿಎಸ್ಸಿ, ಈ ಬಾರಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪರೀಕ್ಷೆ ನಡೆಸುವ ಭರವಸೆ ನೀಡಿದೆ. ಅಲ್ಲದೆ, 2027ರ ಜೂನ್ ವೇಳೆಗೆ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವ ಗುರಿಯನ್ನೂ ಹೊಂದಿದೆ. ಈ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ನವೆಂಬರ್ 15ರಂದು ನಡೆಯಲಿರುವ ಪರೀಕ್ಷೆ ಎಷ್ಟರಮಟ್ಟಿಗೆ ಪಾರದರ್ಶಕವಾಗಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

