ಕೆಪಿಎಸ್ಸಿ ಅಧ್ಯಕ್ಷರ ಅಮಾನತು: ಅಕ್ರಮ ನಡೆಸುವವರ ಮಾಹಿತಿ ಬಹಿರಂಗಪಡಿಸಿದ ಮಾಜಿ ಸದಸ್ಯರು
ಇತ್ತೀಚಿನ ಈ ಬೆಳವಣಿಗೆ ಇಡೀ ಸಮಾಜಕ್ಕೆ ಮತ್ತು ನಾಗರಿಕರಿಗೆ ನೋವು ತಂದಿದೆ. 75 ವರ್ಷಗಳ ಇತಿಹಾಸದಲ್ಲಿ ಸಂಸ್ಥೆಯು ಅತ್ಯಂತ ಪ್ರಾಮಾಣಿಕ ಅಧಿಕಾರಿಗಳನ್ನು ನೀಡಿದ ಇತಿಹಾಸ ಹೊಂದಿದೆ.
ಕರ್ನಾಟಕ ಲೋಕಸೇವಾ ಆಯೋಗದ 75 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಜನ ಪಕ್ಷಪಾತ ಮತ್ತು ಅಧಿಕಾರ ದುರ್ಬಳಕೆಯ ಗಂಭೀರ ಆರೋಪದ ಮೇಲೆ ಆಯೋಗದ ಅಧ್ಯಕ್ಷರಾಗಿದ್ದ ಸಾಹುಕಾರ್ ಎಸ್. ಶಿವಶಂಕರಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಜಿ ಸದಸ್ಯರಾದ ಡಾ. ಚಂದ್ರಕಾಂತ್ ಡಿ. ಶಿವಕೇರಿ ಮತ್ತು ಡಾ. ರೊನಾಲ್ಡೋ ಅನಿಲ್ ಫರ್ನಾಂಡಿಸ್ ಅವರು ಆಯೋಗದ ಪ್ರಸ್ತುತ ಸ್ಥಿತಿಗತಿ ಹಾಗೂ ಸುಧಾರಣೆಗಳ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂಸ್ಥೆಯ ಗೌರವಕ್ಕೆ ಬಂದ ಕಪ್ಪು ಚುಕ್ಕೆ
ವಿಷಯದ ಕುರಿತು ಮಾತನಾಡಿದ ಮಾಜಿ ಸದಸ್ಯ ಡಾ. ಚಂದ್ರಕಾಂತ್ ಶಿವಕೇರಿ ಅವರು, "ಕೆಪಿಎಸ್ಸಿ ಎನ್ನುವುದು ಒಂದು ಅತ್ಯುನ್ನತ ಸಂವಿಧಾನಾತ್ಮಕ ಸಂಸ್ಥೆ. ಇಲ್ಲಿ ಅಧ್ಯಕ್ಷ ಸ್ಥಾನ ಸಿಗುವುದು ಅತ್ಯಂತ ಗೌರವದ ಸಂಗತಿ. ಅದನ್ನು ಉಳಿಸಿಕೊಂಡು ಹೋಗುವುದು ಆಯಾ ವ್ಯಕ್ತಿಗಳ ಜವಾಬ್ದಾರಿಯಾಗಿರುತ್ತದೆ. ಇತ್ತೀಚಿನ ಈ ಬೆಳವಣಿಗೆ ಇಡೀ ಸಮಾಜಕ್ಕೆ ಮತ್ತು ನಾಗರಿಕರಿಗೆ ನೋವು ತಂದಿದೆ. 75 ವರ್ಷಗಳ ಇತಿಹಾಸದಲ್ಲಿ ಸಂಸ್ಥೆಯು ಅತ್ಯಂತ ಪ್ರಾಮಾಣಿಕ ಅಧಿಕಾರಿಗಳನ್ನು ನೀಡಿದ ಇತಿಹಾಸ ಹೊಂದಿದೆ. ಆದರೆ ಪ್ರಸ್ತುತ ಪ್ರಕರಣವು ಸಂಸ್ಥೆಯ ಘನತೆಗೆ ಕಪ್ಪು ಚುಕ್ಕೆ ತಂದಿರುವುದು ವಿಷಾದನೀಯ. ಸದ್ಯ ಪ್ರಕರಣವು ತನಿಖಾ ಹಂತದಲ್ಲಿ ಹಾಗೂ ನ್ಯಾಯಾಲಯದ ಅಧೀನದಲ್ಲಿ ಇರುವುದರಿಂದ ಹೆಚ್ಚು ಪ್ರತಿಕ್ರಿಯಿಸುವುದು ಸೂಕ್ತವಲ್ಲ" ಎಂದರು.
ಓಎಂಆರ್ ಶೀಟ್ ತಿದ್ದುಪಡಿ: ಮಾಜಿ ಸದಸ್ಯರ ಆತಂಕ
ಮತ್ತೊಬ್ಬ ಮಾಜಿ ಸದಸ್ಯ ಡಾ. ರೊನಾಲ್ಡೋ ಅನಿಲ್ ಫರ್ನಾಂಡಿಸ್ ಅವರು ತಮ್ಮ ಅಧಿಕಾರಾವಧಿಯಲ್ಲಾದ ಒಂದು ಪ್ರಮುಖ ಅಕ್ರಮದ ತನಿಖೆಯನ್ನು ನೆನಪಿಸಿಕೊಂಡರು. "2022-23ರ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ದೂರು ನೀಡಿದ್ದರು. ಆಗ ಕೆಪಿಎಸ್ಸಿ ಸದಸ್ಯರೇ ಸಮಿತಿ ರಚಿಸಿ ತನಿಖೆ ನಡೆಸಿದಾಗ ಓಎಂಆರ್ (OMR) ಶೀಟ್ ತಿದ್ದುಪಡಿ ಮಾಡಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿತ್ತು. ಸಿಸಿಟಿವಿ ಫುಟೇಜ್ ಪರಿಶೀಲಿಸಿದಾಗ ಅಭ್ಯರ್ಥಿಯೊಬ್ಬ 100 ಪ್ರಶ್ನೆಗಳಲ್ಲಿ ಕೇವಲ 17 ಪ್ರಶ್ನೆಗಳನ್ನು ಮಾತ್ರ ಉತ್ತರಿಸಿದ್ದ, ಆದರೆ ನಂತರ ಇಡೀ ಶೀಟ್ ಭರ್ತಿಯಾಗಿತ್ತು. ಇಂತಹ ತಾಂತ್ರಿಕ ಲೋಪ ಹಾಗೂ ಅಕ್ರಮಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಸಂಸ್ಥೆಯ ಬಗ್ಗೆ ಸಂಶಯ ಮೂಡಿಸುವಂತೆ ಮಾಡಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಅಂಕಗಳ ಗೌಪ್ಯತೆಯೇ ಸಮಸ್ಯೆಗೆ ಮೂಲ?
ಅಭ್ಯರ್ಥಿಗಳ ಅಂಕಗಳನ್ನು ಬಹಿರಂಗಪಡಿಸದೆ ಗೌಪ್ಯವಾಗಿಡುವ ಸದ್ಯದ ವ್ಯವಸ್ಥೆಯ ಬಗ್ಗೆ ಡಾ. ಶಿವಕೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಹಿಂದೆ ಪರೀಕ್ಷೆ ಮುಗಿದ ತಕ್ಷಣ ಮಾರ್ಕ್ಸ್ ಲಿಸ್ಟ್ ಪ್ರಕಟಿಸಲಾಗುತ್ತಿತ್ತು. ಇದರಿಂದ ಅಭ್ಯರ್ಥಿಗಳಿಗೆ ತಮ್ಮ ಅರ್ಹತೆಯ ಬಗ್ಗೆ ಆತ್ಮವಿಶ್ವಾಸವಿರುತ್ತಿತ್ತು. ಆದರೆ ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ತಡೆಗೆಂದು ರಚಿಸಲಾಗಿದ್ದ 'ಹೋಟಾ ಸಮಿತಿ'ಯ ಶಿಫಾರಸಿನ ಮೇರೆಗೆ ಅಂಕಗಳನ್ನು ಗೌಪ್ಯವಾಗಿಡುವ ನಿಯಮ ತರಲಾಯಿತು. ನನ್ನ ಪ್ರಕಾರ ಅಂಕಗಳನ್ನು ಬಚ್ಚಿಡುವುದರಿಂದಲೇ ಭ್ರಷ್ಟಾಚಾರ ಮತ್ತು ಸಂಶಯಗಳು ಹೆಚ್ಚಾಗಲು ಕಾರಣವಾಯಿತು. ಹಳೆಯ ಪಾರದರ್ಶಕ ಪದ್ಧತಿಯನ್ನು ಮರುಜಾರಿಗೊಳಿಸಿದರೆ ಅಭ್ಯರ್ಥಿಗಳಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ ಮತ್ತು ಸ್ವಜನ ಪಕ್ಷಪಾತ ಕಡಿಮೆಯಾಗುತ್ತದೆ" ಎಂದು ಪ್ರತಿಪಾದಿಸಿದರು.

