ಅಧಿಕಾರ ದುರುಪಯೋಗ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ ಅಮಾನತು
ಭಾರತದ ಸಂವಿಧಾನದ ವಿಧಿ 317(1)ರ ಅಡಿಯಲ್ಲಿ ಅಗತ್ಯ ತನಿಖೆ ನಡೆಸಲು ಪ್ರಕರಣವನ್ನು ಭಾರತದ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಸಮಗ್ರತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ, ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅದೇಶ ಹೊರಡಿಸಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರನ್ನ ಅಮಾನತುಗೊಳಿಸಿರುವ ಪ್ರಕರಣ ನಡೆದಿದೆ.
ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಕ್ರೀಮಿ ಲೇಯರ್ ವಿನಾಯಿತಿ ಪಡೆಯಲು ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಈ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರಪತಿಗಳಿಗೆ ರಾಜ್ಯಪಾಲರ ಶಿಫಾರಸು
ಶಿವಶಂಕರಪ್ಪ ಎಸ್ ಸಾಹುಕಾರ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಅವರ 'ದುರ್ನಡತೆ'ಯನ್ನು ಎತ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ವಿಧಿ 317(1)ರ ಅಡಿಯಲ್ಲಿ ಅಗತ್ಯ ತನಿಖೆ ನಡೆಸಲು ಪ್ರಕರಣವನ್ನು ಭಾರತದ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿರಲಿದೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯ ಜಿ. ಪ್ರಭುದೇವ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಏನಿದು ಹಗರಣ?
ಶಿವಶಂಕರಪ್ಪ ಎಸ್ ಸಾಹುಕಾರ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು 'ಕೈಗಾರಿಕಾ ವಿಸ್ತರಣಾ ಅಧಿಕಾರಿ' ಹುದ್ದೆಗಳಿಗೆ ಕಾನೂನುಬಾಹಿರವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಂದೆಯಾಗಿ ಆಯೋಗದ ಉನ್ನತ ಹುದ್ದೆಯಲ್ಲಿದ್ದರೂ, ತಮ್ಮ ನೇರ ಅವಲಂಬಿತರು ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿದ್ದಾಗ ಅವರು ಈ ಪ್ರಕ್ರಿಯೆಯಿಂದ ದೂರವಿರಲಿಲ್ಲ. ಜೊತೆಗೆ ಯಾವುದೇ ಔಪಚಾರಿಕ 'ಹಿತಾಸಕ್ತಿ ಸಂಘರ್ಷ' ಘೋಷಿಸಲು ವಿಫಲರಾಗಿದ್ದಾರೆ.
ನಕಲಿ ಆದಾಯ ಪ್ರಮಾಣಪತ್ರ
ಅಧ್ಯಕ್ಷರ ಪುತ್ರಿಯೊಬ್ಬರು ತಂದೆಯ ಮಾಸಿಕ ವೇತನವೇ ಲಕ್ಷಾಂತರ ರೂಪಾಯಿ ಇದ್ದರೂ, ಇಡೀ ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ರೂ. ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಸತ್ಯಾಂಶ ಮರೆಮಾಚಿ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಹಾಗೂ 'ಕ್ರೀಮಿ ಲೇಯರ್' ವಿನಾಯಿತಿ ಕೋರಿ ವಂಚಿಸಲು ಯತ್ನಿಸಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.
2002 ಮಾರ್ಚ್ 30ರ ಸರ್ಕಾರಿ ಆದೇಶ ಸಂಖ್ಯೆ SWD 225 BCA 2000 ರ ಪ್ರಕಾರ, ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಲ್ಲ. ಈ ನಿಯಮ ಗೊತ್ತಿದ್ದರೂ ನಿಯಮ ಮೀರಿ ಲಾಭ ಪಡೆಯಲು ಯತ್ನಿಸಲಾಗಿದೆ. ಕೆಪಿಎಸ್‌ಸಿಯಂತಹ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸಲು ಮತ್ತು ಯಾವುದೇ ಪ್ರಭಾವವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಯಲು ಅಧ್ಯಕ್ಷರ ಅಮಾನತು ಅನಿವಾರ್ಯವಾಗಿತ್ತು ಎಂದು ರಾಜ್ಯಪಾಲರ ಸಚಿವಾಲಯ ತಿಳಿಸಿದೆ.

