ರಸಗೊಬ್ಬರದ ಜತೆ ಇತರೆ ಉತ್ಪನ್ನಗಳ ಕಡ್ಡಾಯ ಖರೀದಿ;  ದೇಶಾದ್ಯಂತ ಕೃಷಿ ಪರಿಕರ ಮಾರಾಟಗಾರರ ಮುಷ್ಕರ ನಾಳೆ
x
ಯೂರಿಯಾ, ಡಿಎಪಿ ಸಾಂದರ್ಭಿಕ ಚಿತ್ರ

ರಸಗೊಬ್ಬರದ ಜತೆ ಇತರೆ ಉತ್ಪನ್ನಗಳ ಕಡ್ಡಾಯ ಖರೀದಿ; ದೇಶಾದ್ಯಂತ ಕೃಷಿ ಪರಿಕರ ಮಾರಾಟಗಾರರ ಮುಷ್ಕರ ನಾಳೆ

ಡಿಎಪಿ, ಯೂರಿಯಾ ಜೊತೆಗೆ ಅವರಿಗೆ ಬೇಡದ ಇತರ ದುಬಾರಿ ದ್ರವ ರೂಪದ ಗೊಬ್ಬರ ಅಥವಾ ಕೀಟನಾಶಕವನ್ನು ಕಡ್ಡಾಯವಾಗಿ ಖರೀದಿಸುವಂತೆ ಕಂಪನಿಗಳು, ವಿತರಕರು ಒತ್ತಾಯಿಸುತ್ತಿರುವುದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.


ಡಿಎಪಿ, ಯೂರಿಯಾ ಸೇರಿದಂತೆ ರಸಗೊಬ್ಬರ ಮಾರಾಟ ಮಾಡುವಾಗ ಇತರೆ ಉತ್ಪನ್ನಗಳನ್ನೂ ಕಡ್ಡಾಯವಾಗಿ ಖರೀದಿಸಬೇಕೆಂಬ ರಸಗೊಬ್ಬರ ಕಂಪನಿಗಳ ಅಲಿಖಿತ ನಿಯಮವು ಮಾರಾಟಗಾರರ ಹಾಗೂ ರೈತರ ಮೇಲೆ ಮಾರಕ ಪರಿಣಾಮ ಬೀರಿದೆ. ಇತರೆ ಉತ್ಪನ್ನಗಳ ಕಡ್ಡಾಯ ಖರೀದಿ (ಟ್ಯಾಗಿಂಗ್‌)ಯನ್ನು ಕೂಡಲೇ ಕೈಬಿಡಬೇಕು. ಅಲ್ಲದೇ ರಸಗೊಬ್ಬರ ಸಾಗಣೆ ವೆಚ್ಚವನ್ನು ಕಂಪನಿಗಳೇ ಭರಿಸಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಕೃಷಿ ಉತ್ಪನ್ನ ಮಾರಾಟಗಾರರು ನಾಳೆ (ಏ. 27) ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕ ಪ್ರಾಂತ ರೈತ ಸಂಘ ಪೂರ್ಣ ಬೆಂಬಲ ಘೋಷಿಸಿದೆ.

ರೈತರನ್ನು ಶೋಷಣೆಯಿಂದ ಮುಕ್ತಗೊಳಿಸಲು ಮತ್ತು ಕೃಷಿ ವಲಯದ ಮೇಲೆ ಕಾರ್ಪೊರೇಟ್ ಕಂಪನಿಗಳ ಏಕಸ್ವಾಮ್ಯ ತಡೆಗಟ್ಟಲು ಮುಷ್ಕರಕ್ಕೆ ಕರೆ ನೀಡಲಾಗಿದೆ.

ರೈತರ ಮೇಲಿನ ಶೋಷಣೆಗೆ ಇತಿಶ್ರೀ ಹಾಡಿ

ಕೃಷಿ ಪರಿಕರಗಳ ಮಾರಾಟ ವ್ಯವಸ್ಥೆಯಲ್ಲಿ ರೈತರು ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರಿಗೆ ಅಗತ್ಯವಿರುವ ಡಿಎಪಿ, ಯೂರಿಯಾ ಜೊತೆಗೆ ಅವರಿಗೆ ಬೇಡದ ಇತರ ದುಬಾರಿ ದ್ರವ ರೂಪದ ಗೊಬ್ಬರ ಅಥವಾ ಕೀಟನಾಶಕವನ್ನು ಕಡ್ಡಾಯವಾಗಿ ಖರೀದಿಸುವಂತೆ ಕಂಪನಿಗಳು, ವಿತರಕರು ಒತ್ತಾಯಿಸುತ್ತಿರುವುದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ನಿಗದಿತ ಗರಿಷ್ಠ ಚಿಲ್ಲರೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ನಡೆಸುವ ಪ್ರವೃತ್ತಿ ಹೆಚ್ಚಾಗಿದೆ. ಬಿತ್ತನೆ ಬೀಜ ಮತ್ತು ಕೀಟನಾಶಕಗಳ ಗುಣಮಟ್ಟದಲ್ಲಿ ರಾಜಿಯಾಗುತ್ತಿರುವುದು ರೈತರ ಬೆಳೆ ನಾಶಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಈ ನಿಯಮಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ.

ಕಾರ್ಪೊರೇಟ್ ಏಕಸ್ವಾಮ್ಯದ ವಿರುದ್ಧ ಆಕ್ರೋಶ

"ಕೆಲವೇ ಕೆಲವು ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು ಕೃಷಿ ಪರಿಕರಗಳ ಉತ್ಪಾದನೆ ಮತ್ತು ವಿತರಣೆಯ ಮೇಲೆ ಏಕಸ್ವಾಮ್ಯ ಸಾಧಿಸಿವೆ. ಇವುಗಳ ಹಿಡಿತದಿಂದಾಗಿ ಚಿಲ್ಲರೆ ಮಾರಾಟಗಾರರು ಮತ್ತು ರೈತರು ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವ್ಯವಸ್ಥೆಯನ್ನು ಪ್ರಶ್ನಿಸಿ ಮಾರಾಟಗಾರರು ನಡೆಸುತ್ತಿರುವ ಹೋರಾಟ ಸ್ವಾಗತಾರ್ಹ" ಎಂದು ಯು. ಬಸವರಾಜ ಹೇಳಿದ್ದಾರೆ.

ಆಹಾರ ಭದ್ರತೆಗೆ ಭೀತಿ ಸಾಧ್ಯತೆ

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ಸಾಮ್ರಾಜ್ಯಶಾಹಿ ನೀತಿಗಳಿಂದಾಗಿ ರಸಗೊಬ್ಬರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದು ದೇಶದ ಆಹಾರ ಭದ್ರತೆಯ ಮೇಲೆ ನೇರ ಪ್ರಭಾವ ಬೀರಲಿದ್ದು, ಕೈಗಾರಿಕಾ ವಲಯ ಮತ್ತು ಒಟ್ಟಾರೆ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ಕೃಷಿ ಪರಿಕರಗಳ ಬೆಲೆ ನಿಯಂತ್ರಿಸಬೇಕು. ರೈತರಿಗೆ ಬಿತ್ತನೆ ಹಂಗಾಮಿನಲ್ಲಿ ರಸಗೊಬ್ಬರ ಮತ್ತು ಬೀಜಗಳು ಸುಲಭವಾಗಿ, ಕೈಗೆಟುಕುವ ದರದಲ್ಲಿ ಸಿಗುವಂತೆ ಕ್ರಮ ವಹಿಸಬೇಕು. ರಸಗೊಬ್ಬರ ಖರೀದಿಗೆ ರೈತರ ಗುರುತಿನ ಸಂಖ್ಯೆ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡಬೇಕು.

ರಸಗೊಬ್ಬರ ಸರಕು ಸಾಗಾಣಿಕೆ ವೆಚ್ಚದ ಪೂರ್ಣ ಹೊಣೆಯನ್ನು ಉತ್ಪಾದಕ ಕಂಪನಿಗಳೇ ಹೊರಬೇಕು. ಕೃಷಿ ವಲಯದ ಹಿತದೃಷ್ಟಿಯಿಂದ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಮಾರಾಟಗಾರರ ಮತ್ತು ರೈತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.

ಟ್ಯಾಗಿಂಗ್‌ ಕಾನೂನುಬಾಹಿರ

ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಜೊತೆಗೆ ಇತರೆ ಅನಗತ್ಯ ಉತ್ಪನ್ನಗಳಾದ ನ್ಯಾನೋ ಯೂರಿಯಾ, ಬಯೋ-ಸ್ಟಿಮ್ಯುಲೆಂಟ್‌ಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಮಾರಾಟಗಾರರು ರೈತರ ಮೇಲೆ ಒತ್ತಡ ಹೇರುವುದು ಕಾನೂನುಬಾಹಿರವಾಗಿದೆ.

ಕೇಂದ್ರ ಸರ್ಕಾರವು ರಸಗೊಬ್ಬರವನ್ನು ಅತ್ಯಗತ್ಯ ವಸ್ತುಗಳ ಕಾಯ್ದೆ, 1955ರ ಅಡಿ ತಂದಿದೆ. ಡಿಎಪಿ, ಯೂರಿಯಾ ಜೊತೆ ಇತರೆ ಉತ್ಪನ್ನಗಳೊಂದಿಗೆ ಜೋಡಿಸಿ ಮಾರಾಟ ಮಾಡುವುದನ್ನು ನಿಷೇಧಿಸಿದೆ. ಆದರೆ, ರಸಗೊಬ್ಬರ ಕಂಪನಿಗಳು ಅಥವಾ ಡೀಲರ್‌ಗಳು ಉತ್ಪನ್ನ ಮಾರಾಟ ಮಾಡುವಾಗ ಬೇರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.

2026-27ನೇ ಸಾಲಿನಲ್ಲಿ ರೈತರು ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಖರೀದಿಸಲು ಎಫ್‌ಐಡಿ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ 'ಕೆ-ಕೆಸಾನ್' ತಂತ್ರಾಂಶದಲ್ಲಿ ರೈತರ ಎಫ್‌ಐಡಿ ಸಂಖ್ಯೆ ಬಳಸಿ ರಸಗೊಬ್ಬರ ಮಾರಾಟ ಮಾಡಬೇಕು ಎಂದು ಸೂಚಿಸಿದೆ. ಹೀಗಿದ್ದರೂ, ರಸಗೊಬ್ಬರ ಟ್ಯಾಗಿಂಗ್‌ ನಡೆಯುತ್ತಿರುವ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಯಾವುದೇ ಡೀಲರ್‌ಗಳು ರಸಗೊಬ್ಬರದೊಂದಿಗೆ ಇತರ ವಸ್ತುಗಳನ್ನು ಖರೀದಿಸಲು ಬಲವಂತ ಮಾಡಿದರೆ, ಕೃಷಿ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು. ಅಂತಹ ಡೀಲರ್‌ಗಳ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Read More
Next Story