
ಕೋರಮಂಗಲ ಪೊಲೀಸ್ ಠಾಣೆ ಬಳಿ ಆಡಿ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ
ಮೃತರನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಐಷಾರಾಮಿ ಆಡಿ ಕಾರಿನಲ್ಲಿ ಭಾನುವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಮೃತರನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಧ್ಯರಾತ್ರಿ ಸುಮಾರು 2.30ರ ವೇಳೆಗೆ KA51 MG 9786 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಆಡಿ ಕಾರು ಕೋರಮಂಗಲ ಠಾಣೆ ಬಳಿಯ ಹೋಟೆಲ್ ಒಂದರ ಮುಂದೆ ಬಂದು ನಿಂತಿತ್ತು. ಬೆಳಿಗ್ಗೆಯಾದರೂ ಕಾರು ಅದೇ ಸ್ಥಳದಲ್ಲೇ ನಿಂತಿರುವುದನ್ನು ಕಂಡ ಹೋಟೆಲ್ ಸಿಬ್ಬಂದಿ, ಚಾಲಕನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾರಿನ ಗಾಜುಗಳನ್ನು ಮುಚ್ಚಿದ್ದು, ಒಳಗಿರುವ ವ್ಯಕ್ತಿ ಯಾವುದೇ ಚಲನವಲನವಿಲ್ಲದೆ ಸೀಟಿನ ಮೇಲೆ ವಾಲಿರುವುದನ್ನು ಕಂಡು ತಕ್ಷಣವೇ ಕೋರಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಸೋಕೋ ತಂಡ ಭೇಟಿ, ಪರಿಶೀಲನೆ
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೋರಮಂಗಲ ಪೊಲೀಸರು ಕಾರಿನ ಬಾಗಿಲು ತೆರೆದು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಸೋಕೊ ತಂಡವನ್ನು ಕರೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
'ಕಾರಿನಲ್ಲಿ ಇರುವ ವ್ಯಕ್ತಿಯ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ತಡರಾತ್ರಿ ಚಾಲನೆ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಸಾಧ್ಯತೆಯಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು, ಕಾರಿನ ನೋಂದಣಿ ಸಂಖ್ಯೆಯನ್ನು ಇಟ್ಟುಕೊಂಡು ಮೃತ ಅಕ್ಬರ್ ಅವರ ಕುಟುಂಬದವರನ್ನು ಸಂಪರ್ಕಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

