ಬರದ ಮಧ್ಯೆ ವಿದ್ಯುತ್ ಲೋಡ್ ಶೆಡ್ಡಿಂಗ್ ಬರೆ; ಬೀದಿಗಿಳಿದ ಕೋಲಾರ ರೈತರು
ಬೋರ್‌ವೆಲ್ ನೀರು ನಂಬಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದ ಬೆಳೆಗಳಿಗೂ ವಿದ್ಯುತ್ ಇಲ್ಲದೆ ನೀರು ಹರಿಸಲು ಆಗುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ಕೋಲಾರ ಜಿಲ್ಲೆಯ ರೈತರು, ಬೆಸ್ಕಾಂ ಕಚೇರಿ ಮುಂದೆ ತರಕಾರಿ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದ ಹಿನ್ನೆಲೆ ರೈತ ಸಮುದಾಯ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಕೋಲಾರದ ರೈತ ಮುಖಂಡರಾದ ನಾರಾಯಣಗೌಡ ಹಾಗೂ ಚಿನ್ನಪ್ಪ ರೆಡ್ಡಿ ಅವರು ರಾಜ್ಯ ಸರ್ಕಾರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಳವೆಬಾವಿ ನೀರು ನಂಬಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಅಲ್ಪಸ್ವಲ್ಪ ಬೆಳೆಗಳಿಗೂ ವಿದ್ಯುತ್ ಇಲ್ಲದೆ ನೀರು ಹರಿಸಲು ಆಗುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ಕೋಲಾರ ಜಿಲ್ಲೆಯ ರೈತರು, ಬೆಸ್ಕಾಂ ಕಚೇರಿ ಮುಂದೆ ತರಕಾರಿ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ದಿನದ 24 ಗಂಟೆಯೂ ಕೈಗಾರಿಕೆಗಳಿಗೆ ಹಾಗೂ ನಗರ ಪ್ರದೇಶಗಳಿಗೆ ನಿರಂತರ ವಿದ್ಯುತ್ ನೀಡುತ್ತಿರುವ ಸರ್ಕಾರ, ಅನ್ನದಾತನಿಗೆ ಮಾತ್ರ ಕೇವಲ 2ರಿಂದ 3 ಗಂಟೆಗಳ ಕಾಲ ಅಸಮರ್ಪಕ ಹಾಗೂ ಕಳಪೆ ಗುಣಮಟ್ಟದ ವಿದ್ಯುತ್ ನೀಡುತ್ತಿದೆ. ಇದರಿಂದ ರೈತರ ಟ್ರಾನ್ಸ್ಫಾರ್ಮರ್ಗಳು ಪದೇಪದೇ ಸುಟ್ಟುಹೋಗುತ್ತಿವೆ. ಹೊಸ ಟಿಸಿಗಳನ್ನು ಪಡೆಯಲು ರೈತರು ಹತ್ತರಿಂದ 15 ದಿನ ಕಾಲ ಅಲೆದರೂ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ, ಕಾಲಮಿತಿಯಲ್ಲಿ ವಿದ್ಯುತ್ ಪರಿವರ್ತಕ ಬದಲಿಸದೇ ಸತಾಯಿಸಲಾಗುತ್ತಿದೆ ಎಂದು ರೈತ ಮುಖಂಡರು ದೂರಿದ್ದಾರೆ.
ರಾತ್ರಿ ವೇಳೆ ಹಾವು-ಚೇಳುಗಳ ಕಾಟದ ನಡುವೆ, ತೋಟಗಳಲ್ಲಿ ಕಾವಲು ಕಾಯುವ ಅನಿವಾರ್ಯತೆ ಎದುರಾಗಿದೆ. ಕೇವಲ ದೊಡ್ಡ ದೊಡ್ಡ ಫ್ಯಾಕ್ಟರಿಗಳು ಮತ್ತು ಉದ್ಯಮಿಗಳಿಂದ ದುಡ್ಡು ವಸೂಲಿ ಮಾಡುವ ಉದ್ದೇಶದಿಂದ ಸರ್ಕಾರವು ರೈತರ ಬದುಕನ್ನು ಬೀದಿಗೆ ತರುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೋಲಾರ ಜಿಲ್ಲೆಯನ್ನು ಕೂಡಲೇ ಅಧಿಕೃತವಾಗಿ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಇನ್ನು ಮುಂದೆ ಎಚ್ಚೆತ್ತುಕೊಳ್ಳದಿದ್ದರೆ, ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ರೈತರು ದಂಗೆ ಎದ್ದು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

