x

ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿ, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ ಶಾಸಕ ಕೆ.ಎನ್.‌ರಾಜಣ್ಣ

ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆಯೂ ಸುಳಿವು ನೀಡಿರುವ ಕೆ.ಎನ್. ರಾಜಣ್ಣ, ಒಂದು ವೇಳೆ ಕ್ಷೇತ್ರ ಪುನರ್ ವಿಂಗಡಣೆಯಾದರೆ ಮುಂದಿನ ದಿನಗಳಲ್ಲಿ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ತಮ್ಮದೇ ಪಕ್ಷದ ಸರ್ಕಾರದ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೆಲವು ನಿರ್ಧಾರಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಅವರು, ರಾಜ್ಯ ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳು, ಅಪೆಕ್ಸ್ ಬ್ಯಾಂಕ್ ಚುನಾವಣೆ, ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ಜಾತಿಗಣತಿ ಕುರಿತು ಹಲವು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಜಕೀಯದಲ್ಲಿ ಐದು ದಶಕಗಳ ಕಾಲದ ಏರಿಳಿತಗಳನ್ನು ಕಂಡಿರುವ ತಮಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿರುವುದು ಯಾವುದೇ ಹತಾಶೆ ತಂದಿಲ್ಲ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ. "ಯಾವುದೇ ಅವಕಾಶ ಒಲಿದು ಬಂದಾಗ ಬೀಗುವ ಹಾಗೂ ಅವಕಾಶ ಕೈತಪ್ಪಿದಾಗ ಕುಗ್ಗುವ ಜಾಯಮಾನ ನನ್ನದಲ್ಲ. ರಾಜಕೀಯ ಅಧಿಕಾರ ಎಂಬುದು ಯಾರಪ್ಪನ ಸ್ವತ್ತೂ ಅಲ್ಲ," ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಇಷ್ಟದಂತೆ ನಡೆದುಕೊಂಡಿದ್ದಾರೆ. ತಾವು ಸಿದ್ದರಾಮಯ್ಯ ಅವರ ಜೊತೆಗಿರುವುದೇ ಹಾಲಿ ಮುಖ್ಯಮಂತ್ರಿಯವರಿಗೆ ಸರಿಬಂದಿಲ್ಲ, ಹೀಗಾಗಿಯೇ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ದೂರವಿಡಲಾಗಿದೆ. ಒಂದು ವೇಳೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರೆ ನೂರಕ್ಕೆ ನೂರು ತಾವೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗುತ್ತಿದ್ದೆ ಎಂದು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವರೇ ಏಕೈಕ 'ಎಂಜಿನ್'

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ದೃಢವಾಗಿ ನಿಂತಿರುವ ರಾಜಣ್ಣ, ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರೇ ನಿರ್ವಿವಾದ ನಾಯಕ ಎಂದು ಬಣ್ಣಿಸಿದ್ದಾರೆ. "ರೈಲಿಗೆ ಬೋಗಿಗಳು ಬಹಳಷ್ಟಿದ್ದರೂ ಎಂಜಿನ್ ಮಾತ್ರ ಒಂದೇ ಇರುತ್ತದೆ. ಅದೇ ರೀತಿ ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಅವರೇ ಏಕೈಕ ಎಂಜಿನ್. ಅವರು ಬದುಕಿರುವವರೆಗೂ ಅವರೇ ಅಹಿಂದ ನಾಯಕ," ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಅಥವಾ ಸಕ್ರಿಯ ರಾಜಕಾರಣದಿಂದ ದೂರ ಉಳಿದರೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಅನಾಹುತ ಕಾದಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದೆ ಎಂದಿರುವ ಅವರು, ಈ ಸತ್ಯ ಕಾಂಗ್ರೆಸ್ ಹೈಕಮಾಂಡ್‌ಗೂ ಅರಿವಿದೆ ಎಂದು ತಿಳಿಸಿದ್ದಾರೆ.

ಡಿಕೆಶಿ ವಿರುದ್ಧ ಕಿಡಿ ಹಾಗೂ ಸತೀಶ್ ಜಾರಕಿಹೊಳಿ ಹೇಳಿಕೆಗೆ ಸಹಮತ

ಸರ್ಕಾರದ ನೂರು ದಿನಗಳ ಕಾರ್ಯಕ್ರಮಕ್ಕೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಆಹ್ವಾನಿಸದಿರುವ ಬಗ್ಗೆ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಒಂದು ವೇಳೆ ಡಿ.ಕೆ. ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಈ ರೀತಿ ಕಡೆಗಣಿಸಿದ್ದರೆ ಅವರು ಸುಮ್ಮನಿರುತ್ತಿದ್ದರೇ? ಅವರ ನಡವಳಿಕೆ ಸರ್ವಾಧಿಕಾರಿಯದ್ದೋ, ನಿರಂಕುಶ ಪ್ರಭುತ್ವವೋ ಅಥವಾ ಗುಲಾಮಗಿರಿಯದ್ದೋ ಎಂಬುದನ್ನು ಅವರೇ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡು ಉತ್ತರಿಸಿಕೊಳ್ಳಲಿ," ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಹಿಂದೆ ಕಾಂಗ್ರೆಸ್ ನಾಯಕರದ್ದೇ ದೂರುಗಳಿವೆ ಎಂಬ ಮಾತಿಗೆ ದನಿಗೂಡಿಸಿರುವ ಅವರು, ಜಾರಕಿಹೊಳಿ ಎಂದಿಗೂ ಸುಳ್ಳು ಹೇಳುವುದಿಲ್ಲ, ಅವರ ಮಾತಿನಲ್ಲಿ ಸತ್ಯಾಂಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಗುರಿ ಲೋಕಸಭೆ ಹಾಗೂ ಜಾತಿಗಣತಿ ವರದಿ ಜಾರಿಗೆ ಪಟ್ಟು

ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆಯೂ ಸುಳಿವು ನೀಡಿರುವ ಕೆ.ಎನ್. ರಾಜಣ್ಣ, ಒಂದು ವೇಳೆ ಕ್ಷೇತ್ರ ಪುನರ್ ವಿಂಗಡಣೆಯಾದರೆ ಮುಂದಿನ ದಿನಗಳಲ್ಲಿ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದಿರುವ ಅವರು, ತಮಗೆ ಬಿಜೆಪಿ ಅಥವಾ ಜೆಡಿಎಸ್‌ನಿಂದ ಯಾವುದೇ ಆಹ್ವಾನ ಬಂದಿಲ್ಲ, ಮುಂದೆಯೂ ಕಾಂಗ್ರೆಸ್ ಪಕ್ಷದಿಂದಲೇ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂತಿಮವಾಗಿ, ಸಾಮಾಜಿಕ ನ್ಯಾಯದ ಪರ ದನಿ ಎತ್ತಿರುವ ಅವರು, ಸರ್ಕಾರ ತಕ್ಷಣವೇ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು ಹಾಗೂ ಅಸಹಾಯಕ ಸಮುದಾಯಗಳ ಏಳಿಗೆಗೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

Read More
Next Story