
ರೈತರ ರಕ್ತದಲ್ಲಿ ವಿಷಕಾರಿ ರಾಸಾಯನಿಕ; ಆತಂಕ ಮೂಡಿಸಿದ ಕಿಮ್ಸ್ ಸಂಶೋಧನಾ ವರದಿ
ಔಷಧ ಸಿಂಪಡಿಸಿ 15 ದಿನಗಳು ಕಳೆದಿದ್ದರೂ, ಕೆಲವು ರೈತರ ರಕ್ತದಲ್ಲಿ ಕ್ರಿಮಿನಾಶಕದ ವಿಷಕಾರಿ ರಾಸಾಯನಿಕ ಅಂಶ ಹಾಗೆಯೇ ಇರುವುದು ಸಂಶೋಧನೆಯಿಂದ ಪತ್ತೆಯಾಗಿದೆ.
ಅತಿ ಹೆಚ್ಚು ಇಳುವರಿ ಪಡೆಯಲು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುವ ರೈತರಿಗೆ ಆಘಾತಕಾರಿ ಅಂಶವೊಂದು ಬೆಚ್ಚಿ ಬೀಳಿಸುವಂತಿದೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಕಿಮ್ಸ್) ಬಹುಶಿಸ್ತೀಯ ಅಧ್ಯಯನ ಘಟಕ ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕ್ರಿಮಿನಾಶಕ ಸಿಂಪಡಿಸಿದ ವಾರಗಳ ನಂತರವೂ ರೈತರ ರಕ್ತದಲ್ಲಿ ಅದರ ಅಪಾಯಕಾರಿ ಅಂಶಗಳು ಇರುವುದು ಪತ್ತೆಯಾಗಿದೆ.
13 ರೈತರ ರಕ್ತ ಪರೀಕ್ಷೆಯಲ್ಲಿ ದೃಢ
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 13 ಜನ ರೈತರ ರಕ್ತದ ಮಾದರಿಯನ್ನು ಕಿಮ್ಸ್ ತಜ್ಞ ವೈದ್ಯರ ತಂಡ ಅಧ್ಯಯನ ನಡೆಸಿದೆ. ಕ್ರಿಮಿನಾಶಕ ಸಿಂಪಡಣೆ ಮಾಡಿದ ನಂತರ 2 ರಿಂದ 15 ದಿನಗಳ ಅವಧಿಯಲ್ಲಿ ಈ ರೈತರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಔಷಧ ಸಿಂಪಡಿಸಿ 15 ದಿನಗಳು ಕಳೆದಿದ್ದರೂ, ಕೆಲವು ರೈತರ ರಕ್ತದಲ್ಲಿ ಕ್ರಿಮಿನಾಶಕದ ವಿಷಕಾರಿ ರಾಸಾಯನಿಕದ ಅಂಶ ಹಾಗೆಯೇ ಇರುವುದು ಪತ್ತೆಯಾಗಿದೆ. ಅದರಲ್ಲೂ ಜಲಾಶಯಗಳ ಕೆಳಭಾಗದಲ್ಲಿ ಹಾಗೂ ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ರೈತರು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಕ್ರಿಮಿನಾಶಕಗಳನ್ನು ಬಳಕೆ ಮಾಡುತ್ತಿದ್ದಾರೆ.
ದುಷ್ಪರಿಣಾಮಗಳೇನು?
ರಕ್ತದ ಮೂಲಕ ದೇಹದ ವಿವಿಧ ಭಾಗಗಳನ್ನು ಸೇರುವ ಈ ರಾಸಾಯನಿಕ ಅಂಶವು ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೂಕ್ತ ಮಾಸ್ಕ್ ಧರಿಸದೇ ಕ್ರಿಮಿನಾಶಕ ಸಿಂಪಡಿಸುವಾಗ ಗಾಳಿಯಲ್ಲಿ ತೇಲುವ ರಾಸಾಯನಿಕ ಕಣಗಳು ಶ್ವಾಸಕೋಶದ ಮೂಲಕ ರಕ್ತ ಸೇರುತ್ತವೆ. ಕೈಗವಸು ಹಾಗೂ ಪೂರ್ಣ ದೇಹ ಮುಚ್ಚುವ ಬಟ್ಟೆ ಇಲ್ಲದಿದ್ದರೆ, ಚರ್ಮದ ರಂಧ್ರಗಳ ಮೂಲಕ ರಾಸಾಯನಿಕ ದೇಹದೊಳಗೆ ಇಳಿಯುತ್ತದೆ ಎಂದು ತಜ್ಞ ವೈದ್ಯರ ತಂಡ ಹೇಳಿದೆ.
ಮೂತ್ರಪಿಂಡ, ಹೃದಯ ಹಾಗೂ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಕುರಿತು ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ. ಆದರೆ, ನಿರ್ದಿಷ್ಟ ವ್ಯಕ್ತಿಯಲ್ಲಿ ಕಿಡ್ನಿ ವೈಫಲ್ಯ, ಮಧುಮೇಹ ಅಥವಾ ಹೃದಯ ಕಾಯಿಲೆಗೆ ಕ್ರಿಮಿನಾಶಕವೇ ನೇರ ಕಾರಣ ಎಂದು ಈ ಅಧ್ಯಯನದಿಂದ ಅಂತಿಮವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧವನ್ನು ದೃಢಪಡಿಸಲು ದೊಡ್ಡ ಪ್ರಮಾಣದ ಮತ್ತು ದೀರ್ಘಾವಧಿಯ ಸಂಶೋಧನೆ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳೇನು?
ಕ್ರಿಮಿನಾಶಕ ಸಿಂಪಡಿಸುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್, ಕೈಗಳಿಗೆ ರಬ್ಬರ್ ಗ್ಲೌಸ್ ಹಾಗೂ ದೇಹ ಪೂರ್ತಿ ಮುಚ್ಚುವ ಸುರಕ್ಷಿತ ಬಟ್ಟೆ ಧರಿಸಬೇಕು. ಸಿಂಪಡಣೆ ಮಾಡುತ್ತಿರುವಾಗ ಅಥವಾ ಸಿಂಪಡಿಸಿದ ತಕ್ಷಣ ಸ್ವಚ್ಛಗೊಳ್ಳದೆ ಆಹಾರ ಹಾಗೂ ನೀರನ್ನು ಸೇವಿಸಬಾರದು. ಸಿಂಪಡಣೆ ಮುಗಿದ ತಕ್ಷಣ ಸೋಪು ಬಳಸಿ ಕೈ, ಮುಖ ಹಾಗೂ ದೇಹವನ್ನು ಚೆನ್ನಾಗಿ ತೊಳೆಯಬೇಕು. ಸಿಂಪಡಣೆಗೆ ಬಳಸಿದ ಬಟ್ಟೆಗಳನ್ನು ಮನೆಯ ಇತರ ಬಟ್ಟೆಗಳೊಂದಿಗೆ ಸೇರಿಸದೇ ಪ್ರತ್ಯೇಕವಾಗಿ ತೊಳೆಯಬೇಕು.
"ರೈತರು ಕೃಷಿಯಲ್ಲಿ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ. ರಾಸಾಯನಿಕಗಳ ಅನಗತ್ಯ ಬಳಕೆಯನ್ನು ಕಡಿಮೆ ಮಾಡಿ, ಜೀವ ರಕ್ಷಣೆಗೆ ಆದ್ಯತೆ ನೀಡಬೇಕು.” ಕಿಮ್ಸ್ ಬಹುಶಿಸ್ತೀಯ ಅಧ್ಯಯನ ಘಟಕದ ನೋಡೆಲ್ ಅಧಿಕಾರಿ ಡಾ. ರಾಮ್ ಕೌಲಗುಡ್ಡ ಹೇಳಿದ್ದಾರೆ.
ಸರ್ಕಾರಕ್ಕೆ ಶೀಘ್ರ ವರದಿ
ಕಿಮ್ಸ್ ಸಂಸ್ಥೆಯು ಈ ಪ್ರಾಥಮಿಕ ಅಧ್ಯಯನದ ವರದಿಯನ್ನು ರಾಜ್ಯ ಆರೋಗ್ಯ ಸಚಿವರಿಗೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ರೈತರನ್ನು ಒಳಗೊಂಡು ಬೃಹತ್ ಮಟ್ಟದ ಸಂಶೋಧನೆ ನಡೆಸಲು ಯೋಜನೆ ರೂಪಿಸಿದೆ.

