
KIADBಯಲ್ಲಿ ಬೃಹತ್ ಭ್ರಷ್ಟಾಚಾರ: ಎಸ್‌ಸಿ, ಎಸ್ಟಿ ಹೆಸರಲ್ಲಿ ಒಬ್ಬನೇ ವ್ಯಕ್ತಿಗೆ 17 ಎಕರೆ ಜಮೀನು ಮಂಜೂರು
ಬಾಗಮನೆ ಎಸ್ಟೇಟ್ ಕಂಪನಿಯಿಂದ ಸಚಿವ ಎಂ.ಬಿ. ಪಾಟೀಲ್ ಸಾಲ ಪಡೆದಿರುವುದು ಚುನಾವಣಾ ಅಫಿಡವಿಟ್‌ನಲ್ಲೇ ಸಾಬೀತಾಗಿದೆ. ಹರಾಜು ಪ್ರಕ್ರಿಯೆ ಇಲ್ಲದೆ 'ವೈಗೈ' ಎಂಬ ಕಂಪನಿಗೆ ಜಮೀನು ನೀಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ದಾಖಲೆ ಸಮೇತ ಈ ಆರೋಪ ಮಾಡಿದ್ದು, ನಿಯಮ ಗಾಳಿಗೆ ತೂರಿ ಕೋಟ್ಯಂತರ ರೂ. ಮೌಲ್ಯದ ಜಮೀನನ್ನು ಪ್ರಭಾವಿ ವ್ಯಕ್ತಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ದಲಿತ ಉದ್ಯಮಿಗಳಿಗೆ ಅನ್ಯಾಯ
ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಸಿಎ ನಿವೇಶನ ಘೋಷಣೆ ಮಾಡಿದ್ದರೂ, ಕಳೆದ ಐದು ವರ್ಷಗಳಿಂದ 71 ಅರ್ಹ ಎಸ್ಸಿ, ಎಸ್ಟಿ ಅರ್ಜಿದಾರರಿಗೆ ಜಮೀನು ಹಂಚಿಕೆ ಮಾಡಿಲ್ಲ. ಸಮುದಾಯದ ಉದ್ಯಮಿಗಳಿಗೆ ಶೇ. 75 ರಷ್ಟು ರಿಯಾಯಿತಿ ದರದಲ್ಲಿ ಜಮೀನು ನೀಡಲು ನಿಯಮಾವಳಿ ಇದ್ದರೂ ಹರಾಜು ಪ್ರಕ್ರಿಯೆ ನಡೆಸದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗುತ್ತಿದೆ. ಕೆಐಎಡಿಬಿ ಕೇವಲ ಲಾಭಕೋರ ರಿಯಲ್ ಎಸ್ಟೇಟ್ ಕಂಪನಿಯಂತೆ ವರ್ತಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.
ಪದ್ಮಾವತಿ ಇನ್ಫ್ರಾ ಸಂಸ್ಥೆಗೆ ನಿಯಮಬಾಹಿರವಾಗಿ 15 ಎಕರೆ ಮಂಜೂರು ಮಾಡಿರುವ ಬಗ್ಗೆ ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕು. ದಲಿತರಿಗೆ ಸಿಗಬೇಕಾದ ಹಕ್ಕನ್ನು ಕಸಿದು ಎಂ. ಮಂಜುನಾಥ್ ಎಂಬ ಪ್ರಭಾವಿ ವ್ಯಕ್ತಿಗೆ ಹಂತ ಹಂತವಾಗಿ 17 ಎಕರೆ ಜಮೀನು ಪರಭಾರೆ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ.
ಕುಟುಂಬಸ್ಥರ ಹೆಸರಿನಲ್ಲಿ ಜಮೀನು
ಎಂ.ಮಂಜುನಾಥ್ ಎಂಬುವರು ಮೊದಲು ಎಸ್ಟಿ ಕೋಟಾದಡಿ 2 ಎಕರೆ ಪಡೆದಿದ್ದಾರೆ. ನಂತರ ಎಸ್ಸಿ ಎಂದು ಹೇಳಿಕೊಂಡು ಮತ್ತಷ್ಟು ನಿವೇಶನ ಪಡೆದಿದ್ದಾರೆ. ಸಿಕ್ಕಿಬೀಳುವ ಭಯದಿಂದ ಅದನ್ನು ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ.
ಸಹಿ ಹಾಕಲು ಬಾರದ ತಾಯಿ ಸಾವಿತ್ರಮ್ಮ ಅವರ ಹೆಸರಿನಲ್ಲಿ ಕೈಗಾರಿಕೆ ನೆಪವೊಡ್ಡಿ ಎಸ್ಸಿ ಕೋಟಾದಡಿ 1 ಎಕರೆ ಪಡೆಯಲಾಗಿದೆ. ಗುಡ್ ವೈವ್ಸ್ ಕಂಪನಿಗೆ ಮಂಜೂರಾಗಿ ರದ್ದಾಗಿದ್ದ ನಿವೇಶನದಲ್ಲಿ ಪಾಲುದಾರನಾಗಿ ಸೇರಿಕೊಂಡು, ಅದನ್ನು ಮರುಹಂಚಿಕೆ ಮಾಡಿಸಿಕೊಂಡು ಒಟ್ಟು 7 ಎಕರೆ ಪಡೆದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ. ಇದೇ ಮಂಜುನಾಥ್ ಅವರು ಅತ್ತೆ ಗಂಗಮ್ಮ ಅವರನ್ನು ಎಸ್ಟಿ ಎಂದು ಬಿಂಬಿಸಿ 2 ಎಕರೆ ಪಡೆದಿದ್ದಾರೆ. ಸ್ವತಃ ತಮ್ಮ ಹೆಸರಿನಲ್ಲೇ 2 ಎಕರೆ, ಅಣ್ಣನ ಹೆಸರಿನಲ್ಲಿ 1.5 ಎಕರೆ ಹಾಗೂ ಇತರ ಪಾಲುದಾರರ ಹೆಸರಿನಲ್ಲಿ ಹೆಚ್ಚುವರಿ ಭೂಮಿ ಪಡೆದಿದ್ದಾರೆ. ಒಟ್ಟು 200 ಕೋಟಿ ರೂ. ಮೌಲ್ಯದ ಜಮೀನು ಪಡೆದಿದ್ದಾರೆ ಎಂದು ದೂರಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ
ಬಾಗಮನೆ ಎಸ್ಟೇಟ್ ಕಂಪನಿಯಿಂದ ಸಚಿವ ಎಂ.ಬಿ. ಪಾಟೀಲ್ ಸಾಲ ಪಡೆದಿರುವುದು ಅವರ ಚುನಾವಣಾ ಅಫಿಡವಿಟ್‌ನಲ್ಲೇ ಸಾಬೀತಾಗಿದೆ. ಹರಾಜು ಪ್ರಕ್ರಿಯೆಯೇ ಇಲ್ಲದೆ 'ವೈಗೈ' ಎಂಬ ಕಂಪನಿಗೆ ಜಮೀನು ನೀಡಲಾಗಿದ್ದು, ಇವೆಲ್ಲದರ ಹಿಂದೆ ನಿಕಟ ಸಂಪರ್ಕವಿದೆ.
ಈ ಅಕ್ರಮ ಸೈಟ್ ಹಂಚಿಕೆಯ ಮೂಲಕ ಬಂದ ಕೋಟ್ಯಂತರ ರೂಪಾಯಿ ಹಣ ತೆಲಂಗಾಣಕ್ಕೆ ಹರಿದು ಹೋಗಿದೆ. ಸಚಿವ ಸಂಪುಟ ಪುನಾರಚನೆಯಲ್ಲಿ ಹಲವರ ಖಾತೆ ಬದಲಾದರೂ ಎಂ.ಬಿ. ಪಾಟೀಲ್ ಖಾತೆಯನ್ನು ಯಾಕೆ ಬದಲಿಸಿಲ್ಲ ಎಂದು ಪ್ರಶ್ನಿಸಿದ ಅವರು, "ಭ್ರಷ್ಟಾಚಾರ ಕಂಡರೆ ತಕ್ಷಣ ಫೋನ್ ಮಾಡಿ ಎಂದು ಸಿಎಂ ಹೇಳುತ್ತಾರೆ. ಆದರೆ, ದೂರು ಕೊಡಲು ಜನ ಯಾವ ನಂಬರ್ಗೆ ಕರೆ ಮಾಡಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ
ಪರಿಶಿಷ್ಟ ಸಮುದಾಯದವರು ಎಂದರೆ ಸರ್ಕಾರಕ್ಕೆ ಕಾಲ ಕಸದಂತಾಗಿದ್ದಾರೆ. ಬೆರಳೆಣಿಕೆಯಷ್ಟು ಮಂದಿಗೆ ನೀಡಿರುವ ಜಾಗವೂ ತಕರಾರಿನಿಂದ ಕೂಡಿದೆ. ಕೆಐಎಡಿಬಿಯಲ್ಲಿ ನಡೆದಿರುವ ಈ ಬೃಹತ್ ಹಗರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು. ಇಲ್ಲವೇ ಸಿಬಿಐ ಅಥವಾ ಇಡಿ ತನಿಖೆಗೆ ವಹಿಸಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಹೋರಾಟ ನಡೆಸುವುದಾಗಿ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

