
ಕೆ.ಎಚ್.ಮುನಿಯಪ್ಪಗೆ ಸಮಾಜ ಕಲ್ಯಾಣ ಖಾತೆ ನೀಡಲು ಹೆಚ್ಚಿದ ಒತ್ತಡ
ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಆಹಾರ ಖಾತೆಯ ಬದಲು ಸಮಾಜ ಕಲ್ಯಾಣ ಇಲಾಖೆ ಕೊಡಬೇಕು. ಜತೆಗೆ ಮಾದಿಗ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಗೊಂದಲಗಳಿಗೆ ತೆರೆ ಬಿದ್ದಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಸಲುವಾಗಿ ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗೆ ಸ್ವತಃ ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ.
ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಸಕಾರಾತ್ಮಕ ಸ್ಪಂದನೆಯೊಂದಿಗೆ ಸಮಾಜ ಕಲ್ಯಾಣ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಮಾಧ್ಯಮಗಳಲ್ಲಿ ಇತ್ತಿಚೀಗೆ ಹರಿದಾಡುತ್ತಿರುವ ಸುದ್ಧಿಗಳು ನೈಜವಲ್ಲ. ಅವುಗಳನ್ನು ಪರಿಗಣಿಸಬಾರದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಸಚಿವ ಸ್ಥಾನದ ತ್ಯಾಗದ ಕುರಿತ ವದಂತಿಗಳಿಗೆ ಮಾದಿಗ ಸಂಘಟನೆಗಳು ಕೂಡ ಆಕ್ರೋಶ ಹೊರಹಾಕಿವೆ. ಕೆ.ಎಚ್. ಮುನಿಯಪ್ಪ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವಧಿಯಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಆಹಾರ ಖಾತೆಯ ಬದಲು ಸಮಾಜ ಕಲ್ಯಾಣ ಇಲಾಖೆ ಕೊಡಬೇಕು. ಜತೆಗೆ ಮಾದಿಗ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ 13 ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿಲ್ಲ. ಪ್ರತಿ ಬಾರಿ ಡಿಸಿಎಂ ಹುದ್ದೆಯನ್ನು ಬಲಗೈ ಸಮುದಾಯಕ್ಕೇ ನೀಡಲಾಗುತ್ತಿದೆ. ಈ ಬಾರಿ ಕೆ.ಎಚ್.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ಹಾಗೂ ಡಿಸಿಎಂ ಹುದ್ದೆ ನೀಡದೇ ಹೋದರೆ 2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದ್ದಾರೆ.

