ಚಳಿಗಾಲಕ್ಕಾಗಿ ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ; 19 ಲಕ್ಷ ಭಕ್ತರ ದರ್ಶನ
x

ಚಳಿಗಾಲಕ್ಕಾಗಿ ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ; 19 ಲಕ್ಷ ಭಕ್ತರ ದರ್ಶನ

ಸನಾತನ ಧರ್ಮದ ಪ್ರಾಚೀನ ಸಂಪ್ರದಾಯ, ವೈದಿಕ ವಿಧಿವಿಧಾನಗಳು ಹಾಗೂ ಜಯಘೋಷಗಳ ನಡುವೆ ಬುಧವಾರ ಬೆಳಗ್ಗೆ ಬಾಬಾ ಕೇದಾರರ ಗರ್ಭಗುಡಿ ಹಾಗೂ ದೇವಾಲಯದ ಮುಖ್ಯದ್ವಾರಗಳನ್ನು ಮುಚ್ಚಲಾಯಿತು.


Click the Play button to hear this message in audio format

ಉತ್ತರಾಖಂಡದ ಗರ್ಹ್ವಾಲ್ ಹಿಮಾಲಯ ಪರ್ವತ ಶ್ರೇಣಿಯ ಮಡಿಲಲ್ಲಿ ನೆಲೆಸಿರುವ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಹಾಗೂ ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕೇದಾರನಾಥ ಧಾಮದ ಬಾಗಿಲುಗಳನ್ನು ಚಳಿಗಾಲದ ಋತುವಿಗಾಗಿ ಅಧಿಕೃತವಾಗಿ ಮುಚ್ಚಲಾಗಿದೆ. ಸನಾತನ ಧರ್ಮದ ಪ್ರಾಚೀನ ಸಂಪ್ರದಾಯ, ವೈದಿಕ ವಿಧಿವಿಧಾನಗಳು ಹಾಗೂ ಭಕ್ತರ ‘ಹರ್ ಹರ್ ಮಹಾದೇವ್’ ಎಂಬ ಮುಗಿಲುಮುಟ್ಟುವ ಜಯಘೋಷಗಳ ನಡುವೆ ಬುಧವಾರ (ನವೆಂಬರ್ 11) ಬೆಳಗ್ಗೆ ಬಾಬಾ ಕೇದಾರರ ಗರ್ಭಗುಡಿ ಹಾಗೂ ದೇವಾಲಯದ ಮುಖ್ಯದ್ವಾರಗಳನ್ನು ಮುಚ್ಚಲಾಯಿತು. ಹಿಮಪಾತ ಮತ್ತು ಮೈಕೊರೆಯುವ ಚಳಿಯ ವಾತಾವರಣದ ನಡುವೆಯೂ ಸಾವಿರಾರು ಭಕ್ತರು, ಸಾಧು-ಸಂತರು, ಸೇನಾ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಈ ಐತಿಹಾಸಿಕ ಮತ್ತು ಭಕ್ತಿಪೂರ್ವಕ ಕ್ಷಣಕ್ಕೆ ಸಾಕ್ಷಿಯಾದರು.

ಕೇದಾರನಾಥದಲ್ಲಿ ದೇಗುಲ ಮುಚ್ಚುವ ಪ್ರಕ್ರಿಯೆಯು ಮುಂಜಾನೆ 4 ಗಂಟೆಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆರಂಭವಾಯಿತು. ದೇವಾಲಯದ ಮುಖ್ಯ ಅರ್ಚಕರು ಬಾಬಾ ಕೇದಾರರಿಗೆ ಮಹಾಭಿಷೇಕ ನೆರವೇರಿಸಿ, ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಅನಂತರ ನಡೆದದ್ದೇ ಪವಿತ್ರ ಸಮಾಧಿ ಪೂಜೆ. ಸನಾತನ ನಂಬಿಕೆಯಂತೆ, ಚಳಿಗಾಲದ ಆರು ತಿಂಗಳ ಕಾಲ ಮಹಾದೇವನು ಧ್ಯಾನಸ್ಥ ಸ್ಥಿತಿಗೆ ತೆರಳುತ್ತಾನೆ. ಈ ಹಿನ್ನೆಲೆಯಲ್ಲಿ ಸ್ವಯಂಭೂ ಜ್ಯೋತಿರ್ಲಿಂಗವನ್ನು ಭಸ್ಮ, ಸ್ಥಳೀಯ ಸುಗಂಧಿತ ಪುಷ್ಪಗಳು ಹಾಗೂ ಒಣಹಣ್ಣುಗಳಿಂದ ಸಂಪೂರ್ಣವಾಗಿ ಮುಚ್ಚಿ ಸಮಾಧಿ ಸ್ಥಿತಿಗೆ ತರಲಾಯಿತು. ಲಿಂಗದ ಮುಂದೆ ಅಖಂಡ ಜ್ಯೋತಿಯನ್ನು ಬೆಳಗಿಸಲಾಯಿತು. ಈ ಜ್ಯೋತಿಯು ಮುಂದಿನ ಆರು ತಿಂಗಳ ಕಾಲ ದೇಗುಲದ ಬಾಗಿಲು ಮುಚ್ಚಿದ್ದರೂ ಗರ್ಭಗುಡಿಯಲ್ಲಿ ಪ್ರಜ್ವಲಿಸುತ್ತಿರುತ್ತದೆ ಎಂಬುದು ಇಲ್ಲಿನ ಪಾವಿತ್ರ್ಯತೆ. ವೈದಿಕ ಮಂತ್ರಘೋಷಗಳು, ರುದ್ರಾಭಿಷೇಕ ಮತ್ತು ಮಂಗಳಾರತಿಯ ಬಳಿಕ, ಬೆಳಗ್ಗೆ ನಿಖರವಾಗಿ 6 ಗಂಟೆಗೆ ಗರ್ಭಗುಡಿಯ ಬಾಗಿಲುಗಳನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಆ ಕ್ಷಣದಲ್ಲಿ ಗರ್ಭಗುಡಿಯ ಮುಂಭಾಗ ನೆರೆದಿದ್ದ ಭಕ್ತಗಣ ಭಾವುಕರಾಗಿ ಕೈಮುಗಿದು ಈಶ್ವರನನ್ನು ಪ್ರಾರ್ಥಿಸಿತು.

ಸೇನಾ ಬ್ಯಾಂಡ್ ನಾದದೊಂದಿಗೆ ಮುಖ್ಯದ್ವಾರ ಬಂದ್

ಗರ್ಭಗುಡಿ ಮುಚ್ಚಿದ ಬಳಿಕ, ದೇವಾಲಯದ ಸಭಾ ಮಂಟಪ ಮತ್ತು ಪ್ರಾಂಗಣದಲ್ಲಿ ಧಾರ್ಮಿಕ ವಿಧಿಗಳು ಮುಂದುವರಿದವು. ಈ ಪವಿತ್ರ ಸಂದರ್ಭದಲ್ಲಿ ಭಾರತೀಯ ಸೇನೆಯ ಗರ್ಹ್ವಾಲ್ ರೈಫಲ್ಸ್‌ನ 15 ಸಿಬ್ಬಂದಿಯನ್ನೊಳಗೊಂಡ ಸೇನಾ ಬ್ಯಾಂಡ್ ತಂಡವು ನುಡಿಸಿದ ಭಕ್ತಿಗೀತೆಗಳ ನಾದವು ಇಡೀ ಕೇದಾರ ಕಣಿವೆಯಲ್ಲಿ ಆಧ್ಯಾತ್ಮಿಕ ಕಂಪನವನ್ನು ಸೃಷ್ಟಿಸಿತು. ಸೇನಾ ವಾದ್ಯಗಳ ತಾಳಕ್ಕೆ ತಕ್ಕಂತೆ ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ಭಕ್ತಿಯ ಅಲೆಯಲ್ಲಿ ತೇಲಿದರು. ಧಾರ್ಮಿಕ ಪದ್ಧತಿಗಳೆಲ್ಲವೂ ಪೂರ್ಣಗೊಂಡ ನಂತರ, ಬೆಳಗ್ಗೆ 8:30ಕ್ಕೆ ದೇವಾಲಯದ ಬೃಹತ್ ಮುಖ್ಯ ದ್ವಾರಗಳನ್ನು ಮುಚ್ಚಿ, ಅಧಿಕೃತವಾಗಿ ಬೀಗ ಮುದ್ರೆ ಹಾಕಲಾಯಿತು. ಬಾಗಿಲು ಮುಚ್ಚುತ್ತಿದ್ದಂತೆ ಆವರಣದಲ್ಲಿದ್ದ ಸಾವಿರಾರು ಯಾತ್ರಿಕರು ಜೈ ಬಾಬಾ ಕೇದಾರ, ಬೋಲೋ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ್ ಎಂದು ಜಯಘೋಷ ಮೊಳಗಿಸಿದರು. ಈ ಬಾರಿಯ ಯಾತ್ರಾ ಋತುವಿನಲ್ಲಿ ಭಕ್ತರಿಗಾಗಿ ಕಳೆದ ಏಪ್ರಿಲ್ ತಿಂಗಳಲ್ಲಿ ತೆರೆದುಕೊಂಡಿದ್ದ ದೇಗುಲದ ಕದಗಳು, ಇಂದಿನಿಂದ ಮುಂದಿನ ಆರು ತಿಂಗಳ ಕಾಲ ವಿಶ್ರಾಂತಿ ಸ್ಥಿತಿಯಲ್ಲಿರಲಿವೆ.

ಉಖಿಮಠದತ್ತ ಮುಖಮಾಡಿದ ಪಂಚಮುಖಿ ಉತ್ಸವ ಡೋಲಿ

ಮುಖ್ಯ ದ್ವಾರಗಳನ್ನು ಮುಚ್ಚಿದ ತಕ್ಷಣವೇ, ಕೇದಾರನಾಥನ ಚಲನಶೀಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾದ ‘ಪಂಚಮುಖಿ ಚಲ ವಿಗ್ರಹ ಉತ್ಸವ ಡೋಲಿ’ಯ (ಪಲ್ಲಕ್ಕಿ) ಮೆರವಣಿಗೆ ಆರಂಭವಾಯಿತು. ಸ್ಥಳೀಯ ವಾದ್ಯಮೇಳ, ಶಂಖನಾದ ಮತ್ತು ಭಕ್ತರ ಜಯಕಾರಗಳ ನಡುವೆ ಪಲ್ಲಕ್ಕಿಯನ್ನು ಹೊತ್ತ ಯಾತ್ರಿಕರು ಮತ್ತು ದೇಗುಲದ ಸಿಬ್ಬಂದಿ ಕಾಲ್ನಡಿಗೆಯ ಮೂಲಕ ತಮ್ಮ ಪ್ರಯಾಣ ಬೆಳೆಸಿದರು. ಕೇದಾರನಾಥ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3,584 ಮೀಟರ್ (11,750 ಅಡಿ) ಎತ್ತರದಲ್ಲಿದ್ದು, ಚಳಿಗಾಲದಲ್ಲಿ ತೀವ್ರ ಹಿಮಪಾತದಿಂದ ಸಂಪೂರ್ಣವಾಗಿ ಆವೃತವಾಗಿರುತ್ತದೆ. ಆದ್ದರಿಂದ, ಭಗವಾನ್ ಕೇದಾರನಾಥನ ಚಳಿಗಾಲದ ಪೂಜೆಗಳು ಸಾಂಪ್ರದಾಯಿಕವಾಗಿ ರುದ್ರಪ್ರಯಾಗ ಜಿಲ್ಲೆಯ ಉಖಿಮಠದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆಯುತ್ತವೆ. ಈ ಪವಿತ್ರ ಡೋಲಿಯು ವಿವಿಧ ಹಳ್ಳಿಗಳ ಮೂಲಕ ಹಾದುಹೋಗುವಾಗ ಮಾರ್ಗದುದ್ದಕ್ಕೂ ಗ್ರಾಮಸ್ಥರು ಪುಷ್ಪವೃಷ್ಟಿ ಕರೆದು ಬಾಬಾ ಕೇದಾರರನ್ನು ಸ್ವಾಗತಿಸಲಿದ್ದಾರೆ. ಅಂತಿಮವಾಗಿ ಉಖಿಮಠ ತಲುಪಿದ ಬಳಿಕ, ಮುಂದಿನ ಆರು ತಿಂಗಳ ಕಾಲ ಬಾಬಾ ಕೇದಾರರಿಗೆ ನಿತ್ಯ ಪೂಜೆ, ನೈವೇದ್ಯ ಮತ್ತು ಆರಾಧನೆಗಳು ಅಲ್ಲಿಯೇ ನೆರವೇರಲಿವೆ. ಚಳಿಗಾಲದಲ್ಲಿ ಕೇದಾರನಾಥಕ್ಕೆ ತೆರಳಲು ಅಸಾಧ್ಯವಾದ ಭಕ್ತರು ಉಖಿಮಠಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ.

ದಾಖಲೆಯ 19.14 ಲಕ್ಷ ಭಕ್ತರ ದರ್ಶನ

ಪ್ರಸ್ತುತ ವರ್ಷದ ಚಾರ್ ಧಾಮ್ ಯಾತ್ರೆಯು ಕೇದಾರನಾಥ ಕ್ಷೇತ್ರಕ್ಕೆ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಪ್ರತಿಕೂಲ ಹವಾಮಾನ, ಮಳೆ, ಭೂಕುಸಿತ ಹಾಗೂ ಭೌಗೋಳಿಕ ಸವಾಲುಗಳ ನಡುವೆಯೂ ಭಕ್ತರ ಉತ್ಸಾಹ ಕಿಂಚಿತ್ತೂ ಕುಂದಿರಲಿಲ್ಲ. ದೇವಾಲಯದ ಆಡಳಿತ ಮಂಡಳಿ ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಋತುವಿನಲ್ಲಿ ದೇವಾಲಯದ ಬಾಗಿಲು ಮುಚ್ಚುವ ದಿನದವರೆಗೆ ಒಟ್ಟು 19,14,000ಕ್ಕೂ ಹೆಚ್ಚು (19.14 ಲಕ್ಷ) ಯಾತ್ರಿಕರು ಬಾಬಾ ಕೇದಾರರ ದರ್ಶನ ಪಡೆದಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲೇ ದಾಖಲಾದ ಗರಿಷ್ಠ ಪ್ರಮಾಣದ ಯಾತ್ರಿಕರ ಸಂಖ್ಯೆಯಾಗಿದ್ದು, ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ಧಾರ್ಮಿಕ ಆರ್ಥಿಕತೆಗೆ ಭಾರಿ ಚೈತನ್ಯ ತುಂಬಿದೆ. ಹೆಲಿಕಾಪ್ಟರ್ ಸೇವೆ, ಕುದುರೆ-ಕತ್ತೆ, ಡೋಲಿ ಹಾಗೂ ಕಾಲ್ನಡಿಗೆಯ ಮೂಲಕ ಹಿರಿಯರು, ಮಹಿಳೆಯರು ಸೇರಿದಂತೆ ಲಕ್ಷಾಂತರ ಭಕ್ತರು ಶ್ರದ್ಧೆಯಿಂದ ಬೆಟ್ಟ ಹತ್ತಿ ದರ್ಶನ ಪಡೆದಿದ್ದಾರೆ.

ಯಮುನೋತ್ರಿ ಧಾಮದ ಬಾಗಿಲುಗಳೂ ಬಂದ್

ಕೇದಾರನಾಥದ ಜೊತೆಯಲ್ಲೇ, ಉತ್ತರಾಖಂಡದ ಮತ್ತೊಂದು ಪ್ರಮುಖ ಧಾಮವಾದ ‘ಯಮುನೋತ್ರಿ ಧಾಮ’ದ ಬಾಗಿಲುಗಳನ್ನೂ ಸಹ ಚಳಿಗಾಲದ ಪ್ರಯುಕ್ತ ಮುಚ್ಚಲಾಯಿತು. ಯಮುನಾ ನದಿಯ ಉಗಮ ಸ್ಥಾನವಾದ ಈ ಪವಿತ್ರ ಕ್ಷೇತ್ರದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿ, ದೇವಾಲಯದ ಮುಖ್ಯದ್ವಾರಗಳನ್ನು ಮುಚ್ಚಲಾಯಿತು. ತರುವಾಯ, ಯಮುನಾ ದೇವಿಯ ಉತ್ಸವ ಡೋಲಿಯು ತನ್ನ ಚಳಿಗಾಲದ ತಾಣವಾದ ಉತ್ತರಕಾಶಿ ಜಿಲ್ಲೆಯ ಖರ್ಸಾಲಿ ಗ್ರಾಮದತ್ತ ತೆರಳಿತು. ಮುಂದಿನ ಆರು ತಿಂಗಳ ಕಾಲ ಯಮುನಾ ಮಾತೆಯನ್ನು ಖರ್ಸಾಲಿಯ ಖುಷಿಮಠದಲ್ಲಿ ಪೂಜಿಸಲಾಗುತ್ತದೆ. ಇತ್ತೀಚೆಗಷ್ಟೇ ಗಂಗೋತ್ರಿ ಧಾಮದ ಬಾಗಿಲುಗಳು ಸಹ ಮುಚ್ಚಲ್ಪಟ್ಟಿದ್ದು, ಇನ್ನು ಕೆಲವೇ ದಿನಗಳಲ್ಲಿ ಬದರಿನಾಥ ಧಾಮದ ಬಾಗಿಲುಗಳು ಮುಚ್ಚುವುದರೊಂದಿಗೆ ಈ ವರ್ಷದ ಸಮಗ್ರ ಉತ್ತರಾಖಂಡ ಚಾರ್ ಧಾಮ್ ಯಾತ್ರೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

Read More
Next Story