
ಕೆಇಎ ದಾಖಲೆ: ಐದೇ ದಿನದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಫಲಿತಾಂಶ
ಸಿಎಆರ್ ಹಾಗೂ ಡಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ಅಭ್ಯರ್ಥಿಗಳಿಗೆ ಕೊಂಚ ರಿಲೀಫ್ ಕೊಟ್ಟಿದೆ.
ಬೆಂಗಳೂರು ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಸೆ.6ರಂದು ನಡೆದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೇವಲ ಐದು ದಿನಗಳಲ್ಲೇ ಪ್ರಕಟಿಸಿ ದಾಖಲೆ ಬರೆದಿದೆ.
ಈ ಫಲಿತಾಂಶಕ್ಕೆ ಆಕ್ಷೇಪಣೆಗಳು ಇದ್ದಲ್ಲಿ ಸೆ.14ರಂದು ಸಂಜೆ 5.30ರೊಳಗೆ ನಿಗದಿತ ಲಿಂಕ್ (https://cetonline.Karnataka.in/kea/) ಮೂಲಕ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಎಂದಾಕ್ಷಣ ಅಭ್ಯರ್ಥಿಗಳ ಮನದಲ್ಲಿ ಆತಂಕ ಮತ್ತು ಅಪನಂಬಿಕೆ ಮೂಡುವುದು ಸಹಜ. ಕೆಪಿಎಸ್ಸಿ ನಡೆಸಿದ ಬಹುತೇಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ, ಅನಗತ್ಯ ವಿಳಂಬ ಹಾಗೂ ಕಮಿಷನ್ ದಂಧೆಯಂತಹ ಸಾಲು ಸಾಲು ಹಗರಣಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಕತ್ತಲಿಗೆ ದೂಡಿದೆ.
ಸಿಎಆರ್ ಹಾಗೂ ಡಿಎಆರ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ಅಭ್ಯರ್ಥಿಗಳಿಗೆ ಕೊಂಚ ರಿಲೀಫ್ ಕೊಟ್ಟಿದೆ. ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲಾಯಿತು. ಸೆ.6ರಂದು ಪರೀಕ್ಷೆ ನಡೆದರೆ, ಸೆ.7ರಂದೇ ಕೀ ಉತ್ತರ ಪ್ರಕಟಿಸಿ, ಸೆ.9ರವರೆಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿತ್ತು. ಸೆ.10ರಂದು ಪರಿಷ್ಕೃತ ಉತ್ತರ ಪ್ರಕಟಿಸಿ, ಸೆ.11ರಂದು ತಾತ್ಕಾಲಿಕ ಫಲಿತಾಂಶ ಪ್ರಕಟಿಸುವ ಮೂಲಕ ಮಧ್ಯವರ್ತಿಗಳು ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹಿಂದೆ ಕೂಡ ಹಲವು ಹೊಸತನಗಳ ಮೂಲಕ ಪರೀಕ್ಷಾ ಪ್ರಕ್ರಿಯೆಗೆ ಸುಧಾರಣೆ ತಂದಿದೆ. ಲೈವ್ ವೆಬ್ಕಾಸ್ಟಿಂಗ್, ನಕಲಿ ಅಭ್ಯರ್ಥಿಗಳ ಪತ್ತೆ ಫೇಸ್ ರೆಕಗ್ನಿಷನ್, ಮೆಟಲ್ ಡಿಟೆಕ್ಟರ್ ಬಳಕೆ ಸೇರಿದಂತೆ ಹಲವು ಕ್ರಮಗಳ ಮೂಲಕ ಯುಪಿಎಸ್ಸಿ ಮಾದರಿ ಅಳವಡಿಸಿಕೊಂಡಿದೆ.
ಇತ್ತೀಚೆಗೆ ಪರೀಕ್ಷಾ ಮತ್ತು ಮೌಲ್ಯಮಾಪನ ವ್ಯವಸ್ಥೆಯಲ್ಲಿ ವೇಗ ಹಾಗೂ ತಂತ್ರಜ್ಞಾನದ ಬಳಕೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾದರಿಯಾಗಿ ಹೊರಹೊಮ್ಮಿತ್ತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬಿ.ಇ, ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 5 ರಿಂದ 10 ನಿಮಿಷಗಳಲ್ಲೇ 50-60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ರಾಷ್ಟ್ರ ಮಟ್ಟದಲ್ಲಿ ದಾಖಲೆ ನಿರ್ಮಿಸಿತ್ತು.
ಡಿಜಿಟಲ್ ಮೌಲ್ಯಮಾಪನ ಹಾಗೂ ಸ್ವಯಂಚಾಲಿತ ತಂತ್ರಜ್ಞಾನದಿಂದ ಇದು ಸಾಧ್ಯ ಎಂಬುದನ್ನು ಸಾಬೀತು ಮಾಡಿತ್ತು. ಈಗ ಇದೇ ಹಾದಿಯಲ್ಲಿ ಸಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರದಲ್ಲಿಯೂ ಇಂತಹ ಆಧುನಿಕ ತಂತ್ರಜ್ಞಾನ ಬಳಸಿ, ಅಕ್ರಮಗಳಿಗೆ ತಿಲಾಂಜಲಿ ಹಾಡಲು ಮುಂದಾಗಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರ ಈ ಸುಧಾರಣಾ ಕ್ರಮದಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಲ್ಲಿ ಹೊಸ ಭರವಸೆ ಮೂಡಿದೆ. ಪ್ರಸ್ತುತ, ಎಚ್. ಪ್ರಸನ್ನ ಅವರಿಗೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿರುವುದು ವಿದ್ಯಾರ್ಥಿಗಳಲ್ಲಿ ಸಮಾಧಾನ ತರಿಸಿದೆ.

