ನೇಮಕಾತಿ ಪರೀಕ್ಷೆಗಳಿಗೆ ಕೆಇಎ ಸಿದ್ಧತೆ:  ಪಾರದರ್ಶಕತೆಗೆ ಮಾಸ್ಟರ್ ತರಬೇತುದಾರರ ನೇಮಕ
x

ನೇಮಕಾತಿ ಪರೀಕ್ಷೆಗಳಿಗೆ ಕೆಇಎ ಸಿದ್ಧತೆ: ಪಾರದರ್ಶಕತೆಗೆ ಮಾಸ್ಟರ್ ತರಬೇತುದಾರರ ನೇಮಕ

ಪರೀಕ್ಷಾ ಪೂರ್ವ ತಯಾರಿ, ನಂತರದ ಪ್ರಕ್ರಿಯೆಯಲ್ಲಿ ಮಾಸ್ಟರ್ ತರಬೇತುದಾರರು ಜಿಲ್ಲಾ ಮಟ್ಟದ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಎಚ್. ಪ್ರಸನ್ನ ತಿಳಿಸಿದರು.


Click the Play button to hear this message in audio format

ರಾಜ್ಯ ಸರ್ಕಾರವು ಮುಂಬರುವ ದಿನಗಳಲ್ಲಿ ಸುಮಾರು 72 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿರುವ ಹಿನ್ನೆಲೆಯಲ್ಲಿ, ಪರೀಕ್ಷಾ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ದೋಷರಹಿತವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ, ಜಿಲ್ಲಾ ಮಟ್ಟದಲ್ಲಿ ಪರೀಕ್ಷಾ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ಪ್ರತಿ ಜಿಲ್ಲೆಗೆ ಇಬ್ಬರು ಹಿರಿಯ ಉಪನ್ಯಾಸಕರನ್ನು ಮಾಸ್ಟರ್ ತರಬೇತುದಾರರಾಗಿ ನೇಮಕ ಮಾಡಲಾಗಿದೆ.

ಕೆಇಎ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ, ನೇಮಕಾತಿ ಪರೀಕ್ಷೆಗಳ ಸಂಪೂರ್ಣ ನಿರ್ವಹಣೆಯ ಕುರಿತಾದ ತರಬೇತಿ ನೀಡಲಾಯಿತು. ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ನೇಮಕಾತಿ ಪರೀಕ್ಷೆಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಮಾರ್ಗದರ್ಶಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ರಾಜ್ಯದ ಪ್ರತಿ ಜಿಲ್ಲೆಯಿಂದ ಜಿಲ್ಲಾಧಿಕಾರಿಗಳ ಶಿಫಾರಸಿನ ಮೇರೆಗೆ ಆಯ್ಕೆಯಾದ ಹಿರಿಯ ಉಪನ್ಯಾಸಕರಿಗೆ ಈ ತರಬೇತಿ ನೀಡಲಾಯಿತು.

ಪರೀಕ್ಷಾರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿ

ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿ, “ನೇಮಕಾತಿ ಪರೀಕ್ಷೆಗಳು ಅಭ್ಯರ್ಥಿಗಳ ಪಾಲಿಗೆ ಜೀವನದ ಮಹತ್ವದ ಘಟ್ಟ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಅಭ್ಯರ್ಥಿಗಳು ಪರೀಕ್ಷಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ವಿಶ್ವಾಸ ಇಡುವಂತಾಗಬೇಕು. ಈ ವಿಶ್ವಾಸವನ್ನು ಉಳಿಸಿಕೊಳ್ಳುವ ಮತ್ತು ಪರೀಕ್ಷೆಯನ್ನು ನ್ಯಾಯಯುತವಾಗಿ ನಡೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಜಿಲ್ಲಾ ಮಟ್ಟದಲ್ಲಿ ಮಾಸ್ಟರ್ ತರಬೇತುದಾರರು ಕೇವಲ ಸಿಬ್ಬಂದಿಗಳಲ್ಲ, ಅವರು ಕೆಇಎಯ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ರಾಯಭಾರಿಗಳು ಎಂದರು.

ರಾಜ್ಯ ಸರ್ಕಾರವು ಸುಮಾರು 72 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿರುವುದರಿಂದ, ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಇಎ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಕೆಇಎ ನಿರ್ದೇಶಕರ ಖಡಕ್ ಎಚ್ಚರಿಕೆ

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾತನಾಡಿ, ಪರೀಕ್ಷಾ ಪ್ರಕ್ರಿಯೆಯ ಸೂಕ್ಷ್ಮತೆಯನ್ನು ವಿವರಿಸಿದರು. ನೇಮಕಾತಿ ಪರೀಕ್ಷೆ ಎಂದರೆ ಎರಡು ಬಗೆಯ ಮನಸ್ಥಿತಿಗಳ ನಡುವಿನ ಹೋರಾಟ. ಒಂದು ವರ್ಗದ ಅಭ್ಯರ್ಥಿಗಳು ಕಠಿಣ ಶ್ರಮದಿಂದ ಉದ್ಯೋಗ ಪಡೆಯಲು ಸಿದ್ಧರಾಗುತ್ತಿದ್ದರೆ, ಇನ್ನೊಂದು ವರ್ಗ ಅಕ್ರಮ ಮಾರ್ಗಗಳ ಮೂಲಕ ಅಡ್ಡದಾರಿಯಲ್ಲಿ ಕೆಲಸ ಪಡೆಯಲು ಯತ್ನಿಸುತ್ತಿರುತ್ತದೆ. ಅಕ್ರಮಗಳನ್ನು ತಡೆಯಲು ಪರೀಕ್ಷಾ ಸಿಬ್ಬಂದಿ ಅತೀವ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ಪರೀಕ್ಷಾ ಕೇಂದ್ರಗಳಲ್ಲಿನ ಸಣ್ಣ ಲೋಪವೂ ದೊಡ್ಡ ಗೊಂದಲಗಳಿಗೆ ಕಾರಣವಾಗಬಹುದು. ಹೀಗಾಗಿ ಪರೀಕ್ಷಾ ಪೂರ್ವ ತಯಾರಿ, ಪರೀಕ್ಷೆಯ ದಿನದ ನಿರ್ವಹಣೆ ಮತ್ತು ನಂತರದ ಪ್ರಕ್ರಿಯೆಗಳಲ್ಲಿ ಮಾಸ್ಟರ್ ತರಬೇತುದಾರರು ಜಿಲ್ಲಾ ಮಟ್ಟದ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯನಿರ್ವಹಣಾ ಶೈಲಿ

ಮಾಸ್ಟರ್ ತರಬೇತುದಾರರು ಕೆಇಎ ಮತ್ತು ಜಿಲ್ಲಾಡಳಿತದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಕೆಇಎ ತೆಗೆದುಕೊಳ್ಳುವ ಪ್ರತಿ ನಿರ್ಧಾರವನ್ನು ಜಿಲ್ಲಾ ಮಟ್ಟದ ಸಿಬ್ಬಂದಿಗೆ ತಲುಪಿಸುವುದು ಮತ್ತು ಅವರ ಗೊಂದಲಗಳನ್ನು ಪರಿಹರಿಸುವುದು ಇವರ ಕೆಲಸವಾಗಿದೆ. ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಪರೀಕ್ಷಾ ಕೋಣೆಯ ನಿರ್ವಹಣೆ, ಓಎಂಆರ್ ಶೀಟ್‌ಗಳ ಸಂಸ್ಕರಣೆ ಮತ್ತು ಪರೀಕ್ಷಾ ಕೇಂದ್ರದ ಭದ್ರತೆಯ ಕುರಿತು ಮಾಹಿತಿ ನೀಡಿದರು. ತರಬೇತಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಉಪನ್ಯಾಸಕರು, ತಾವು ಜಿಲ್ಲಾ ಮಟ್ಟದಲ್ಲಿ ಎದುರಿಸುವ ಸಮಸ್ಯೆಗಳನ್ನು ಹಂಚಿಕೊಂಡರು. ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ತರಬೇತುದಾರರ ಅನುಮಾನಗಳನ್ನು ದೂರ ಮಾಡಲಾಯಿತು.

ರಾಜ್ಯದಲ್ಲಿ ನೇಮಕಾತಿ ಪರೀಕ್ಷೆಗಳ ಗೌರವ ಮತ್ತು ಪಾರದರ್ಶಕತೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ, ಕೆಇಎ ಈಗ ಜಿಲ್ಲಾ ಮಟ್ಟದ ಬಲವರ್ಧನೆಗೆ ಒತ್ತು ನೀಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಸ್ಥಳೀಯ ಉಪನ್ಯಾಸಕರನ್ನು ಬಳಸಿಕೊಳ್ಳುವ ಮೂಲಕ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಈ ಮಾಸ್ಟರ್ ತರಬೇತುದಾರರು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುವುದರಿಂದ, ಪರೀಕ್ಷಾ ಕೇಂದ್ರಗಳಲ್ಲಿನ ಭದ್ರತೆ ಮತ್ತು ಅಕ್ರಮಗಳ ತಡೆಗಟ್ಟುವಿಕೆಯಲ್ಲಿ ಜಿಲ್ಲಾಡಳಿತಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ. ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಮತ್ತು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು ಕೆಇಎಯ ಮುಂದಿನ ಮುಖ್ಯ ಗುರಿಯಾಗಿದೆ.

Read More
Next Story