945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಮತ್ತೆ ರದ್ದಾಗುತ್ತಾ?
x

ಬಿಇ (ಬಯೋಟೆಕ್ನಾಲಜಿ) ಮತ್ತು ಬಿಟೆಕ್ (ಬಯೋಟೆಕ್ನಾಲಜಿ) ಪದವೀಧರರಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದನ್ನು ಬಿಎಸ್‌ಸಿ ಕೃಷಿ ಪದವೀಧರರು ವಿರೋಧಿಸಿದ್ದಾರೆ.

945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಮತ್ತೆ ರದ್ದಾಗುತ್ತಾ?

945 AO ಮತ್ತು AAO ಹುದ್ದೆಗಳ ನೇಮಕಾತಿ ಅಧಿಸೂಚನೆ ಮತ್ತೆ ರದ್ದಾಗುವ ಸಾಧ್ಯತೆ ಇದೆ. ಬಯೋಟೆಕ್ನಾಲಜಿ ಪದವೀಧರರ ಸೇರ್ಪಡೆ ವಿರೋಧಿಸಿ ಕೃಷಿ ಪದವೀಧರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಕೃಷಿ ಇಲಾಖೆಯ 945 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಅಧಿಸೂಚನೆಯನ್ನು ಮತ್ತೆ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನೇಮಕಾತಿ ಪರೀಕ್ಷೆ ನಡೆಸಲು ಕೆಇಎ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಈಗಾಗಲೇ ನಡೆದಿದ್ದು, ತಾತ್ಕಾಲಿಕ ಫಲಿತಾಂಶವನ್ನೂ ಪ್ರಕಟಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಆಗಸ್ಟ್ 8 ಮತ್ತು 9ರಂದು ನಡೆಯಬೇಕಿದೆ. ಕೆಇಎ ಅಧಿಕೃತ ನೇಮಕಾತಿ ಪುಟದಲ್ಲಿಯೂ ಕಡ್ಡಾಯ ಕನ್ನಡ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದ ಮಾಹಿತಿ ಪ್ರಕಟವಾಗಿದೆ.

ಆದರೆ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿಇ (ಬಯೋಟೆಕ್ನಾಲಜಿ) ಹಾಗೂ ಬಿಟೆಕ್ (ಬಯೋಟೆಕ್ನಾಲಜಿ) ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದನ್ನು ಬಿಎಸ್‌ಸಿ ಕೃಷಿ ಪದವೀಧರರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಒಟ್ಟು 36,313 ಅರ್ಜಿ ಸಲ್ಲಿಕೆ

ಜೂನ್ 19ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಬಿಇ ಮತ್ತು ಬಿಟೆಕ್ ಬಯೋಟೆಕ್ನಾಲಜಿ ಪದವಿಗಳನ್ನು ಅರ್ಹ ವಿದ್ಯಾರ್ಹತೆಗಳೆಂದು ಪರಿಗಣಿಸಲು ಸೂಚಿಸಲಾಗಿತ್ತು. ಇದರಿಂದ ಕೆಇಎ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜೂನ್ 25ರವರೆಗೆ ವಿಸ್ತರಿಸಿತ್ತು.

ಒಟ್ಟು 36,313 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಕೃಷಿ ಅಧಿಕಾರಿ ಹುದ್ದೆಗಳಿಗೆ 18,124 ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ 18,189 ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿದವರಲ್ಲಿ ಕೇವಲ 366 ಮಂದಿ ಬಿಇ ಬಯೋಟೆಕ್ನಾಲಜಿ ಮತ್ತು 656 ಮಂದಿ ಬಿಟೆಕ್ ಬಯೋಟೆಕ್ನಾಲಜಿ ಪದವೀಧರರಾಗಿದ್ದಾರೆ.

945 ಹುದ್ದೆಗಳಲ್ಲಿ 128 ಕೃಷಿ ಅಧಿಕಾರಿ ಮತ್ತು 817 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿವೆ. ಈ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) 2024ರ ಸೆಪ್ಟೆಂಬರ್ 20ರಂದು ಮೊದಲ ಅಧಿಸೂಚನೆ ಹೊರಡಿಸಿತ್ತು. ಆದರೆ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ತರಬೇಕಾದ ಕಾರಣ ನೀಡಿ, ಪರೀಕ್ಷೆಗೆ ಒಂದು ದಿನ ಬಾಕಿ ಇರುವಾಗ 2025ರ ನವೆಂಬರ್ 19ರಂದು ಅಧಿಸೂಚನೆಯನ್ನು ರದ್ದುಗೊಳಿಸಲಾಗಿತ್ತು.

ನಂತರ ನೇಮಕಾತಿ ಪ್ರಕ್ರಿಯೆಯ ಹೊಣೆಯನ್ನು ಕೆಪಿಎಸ್‌ಸಿಯಿಂದ ಕೆಇಎಗೆ ವರ್ಗಾಯಿಸಲಾಯಿತು. ಕೆಇಎ 2026ರ ಏಪ್ರಿಲ್ 18ರಂದು ಮೊದಲ ಅಧಿಸೂಚನೆ ಹೊರಡಿಸಿತ್ತು. ಆದರೆ, ಎಸ್‌ಸಿ ಉಪಗುಂಪುಗಳಾದ ಎ, ಬಿ ಮತ್ತು ಸಿಗೆ 400 ರೋಸ್ಟರ್ ಅಂಕಗಳ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿ, ಮೇ 4ರಂದು ಅದನ್ನೂ ರದ್ದುಗೊಳಿಸಲಾಯಿತು. ಬಳಿಕ ಮೇ 30ರಂದು ಕೆಇಎ ಹೊಸ ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ, ಬಯೋಟೆಕ್ನಾಲಜಿ ಪದವೀಧರರನ್ನು ಅರ್ಹರನ್ನಾಗಿ ಸೇರಿಸಿರುವುದಕ್ಕೆ ಕೃಷಿ ವಿದ್ಯಾರ್ಥಿಗಳು ಮತ್ತು ಪದವೀಧರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಈ ವಿರೋಧದ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಮತ್ತೊಮ್ಮೆ ರದ್ದುಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಹಲವು ಬಾರಿ ನೇಮಕಾತಿ ಪ್ರಕ್ರಿಯೆ ಮುಂದೂಡಲ್ಪಟ್ಟಿರುವ ಮತ್ತು ರದ್ದಾಗಿರುವ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಅಧಿಸೂಚನೆ ರದ್ದಾದರೆ ಅಭ್ಯರ್ಥಿಗಳಲ್ಲಿ ಆತಂಕ ಮತ್ತು ಆಕ್ರೋಶ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

Read More
Next Story