
300 ಟನ್ ತ್ಯಾಜ್ಯದಿಂದ ಹಸಿರು ಇಂಧನ ಉತ್ಪಾದನೆಗೆ ಗೇಲ್ ಸಿದ್ಧತೆ
ಕೆಸಿಡಿಸಿ ಆವರಣದ ಸುಮಾರು 18 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಬೃಹತ್ ಘಟಕವನ್ನು ತಲೆಯೆತ್ತಲಿದೆ. ಒಟ್ಟು 123.42 ಕೋಟಿ ರೂ. ಬಂಡವಾಳ ಹೂಡಿಕೆಯಲ್ಲಿ ಗೇಲ್ ನಿರ್ಮಾಣ ಮಾಡಲು ಮುಂದಾಗಿದೆ.
ಸಿಲಿಕಾನ್ ಸಿಟಿಯ ಕಸದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಹಾಗೂ ಹಸಿರು ಇಂಧನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆವರಣದಲ್ಲಿ ಅತ್ಯಾಧುನಿಕ ಸಂಕುಚಿತ ಜೈವಿಕ ಅನಿಲ ಘಟಕ ಸ್ಥಾಪಿಸಲು ಸಾರ್ವಜನಿಕ ವಲಯದ ಉದ್ಯಮ ಗೇಲ್ ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಸ್ಥಳೀಯ ನಿವಾಸಿಗಳು, ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳು, ಪರಿಸರ ಸಂಘಟನೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೇಲ್ ಸಂಸ್ಥೆಯ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಮೊವಾರ್, ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಯೋಜನೆಯ ಸಮಗ್ರ ವಿವರಗಳನ್ನು ಹಂಚಿಕೊಂಡರು.
123.42 ಕೋಟಿ ರೂ. ವೆಚ್ಚದ ಹೈಟೆಕ್ ಯೋಜನೆ
ಕೆಸಿಡಿಸಿ ಆವರಣದ ಸುಮಾರು 18 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಬೃಹತ್ ಘಟಕವನ್ನು ತಲೆಯೆತ್ತಲಿದೆ. ಒಟ್ಟು 123.42 ಕೋಟಿ ರೂ. ಬಂಡವಾಳ ಹೂಡಿಕೆಯಲ್ಲಿ ನಿರ್ಮಾಣವಾಗಲಿರುವ ಈ ಸ್ಥಾವರವು ಪ್ರತಿದಿನ 300 ಟನ್ ಪ್ರತ್ಯೇಕಿಸಲಾದ (ವರ್ಗೀಕರಿಸಿದ) ಸಾವಯವ ಪಾಲಿಕೆ ಘನತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಪ್ರಕ್ರಿಯೆಯ ಮೂಲಕ ಪ್ರತಿದಿನ ಸುಮಾರು 12.6 ಟನ್ ಉನ್ನತ ಗುಣಮಟ್ಟದ ಸಂಕುಚಿತ ಜೈವಿಕ ಅನಿಲ, ಸುಮಾರು 21.6 ಟನ್ ಉತ್ಕೃಷ್ಟ ಗುಣಮಟ್ಟದ ಹುದುಗಿಸಿದ ಸಾವಯವ ಗೊಬ್ಬರ ಉತ್ಪಾದನೆಯಾಗಲಿದೆ. ಇಲ್ಲಿ ಉತ್ಪಾದನೆಯಾಗುವ ಜೈವಿಕ ಅನಿಲವನ್ನು ಗೇಲ್‌ನ ಅಂಗಸಂಸ್ಥೆಯಾದ ‘ಗೇಲ್ ಗ್ಯಾಸ್ ಲಿಮಿಟೆಡ್’ಗೆ ಪೂರೈಸಲಾಗುತ್ತದೆ. ಇದು ವಾಹನಗಳಿಗೆ ಸಿಎನ್‌ಜಿ ರೂಪದಲ್ಲಿ ಹಾಗೂ ಮನೆಗಳಿಗೆ ಪೈಪ್‌ಲೈನ್ ಅನಿಲವಾಗಿ ಬಳಕೆಯಾಗಲಿದ್ದು, ರಾಜ್ಯದಲ್ಲಿ ದೇಶೀಯ ಶುದ್ಧ ಹಸಿರು ಇಂಧನದ ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ.
ದುರ್ವಾಸನೆ ರಹಿತ ಪರಿಸರಸ್ನೇಹಿ ತಂತ್ರಜ್ಞಾನ
ಕೆಸಿಡಿಸಿ ಘಟಕದ ಸುತ್ತಮುತ್ತಲಿನ ನಿವಾಸಿಗಳು ದಶಕಗಳಿಂದ ಎದುರಿಸುತ್ತಿರುವ ದುರ್ವಾಸನೆಯ ಸಮಸ್ಯೆಗೆ ಈ ಯೋಜನೆಯಲ್ಲಿ ಸಂಪೂರ್ಣ ವೈಜ್ಞಾನಿಕ ಪರಿಹಾರ ಒದಗಿಸಲಾಗಿದೆ. ಘಟಕದಲ್ಲಿ ಅತ್ಯಾಧುನಿಕ ‘ವಾಸನೆ ನಿಯಂತ್ರಣ ವ್ಯವಸ್ಥೆ’ ಹಾಗೂ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗುವುದು. ಇದರಿಂದ ಯಾವುದೇ ದುರ್ವಾಸನೆ ಹೊರಬರದಂತೆ ಮುಚ್ಚಿದ ವಾತಾವರಣದಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯಲಿದ್ದು, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಸಾಮಾಜಿಕ ಹಾಗೂ ಆರ್ಥಿಕ ಲಾಭಗಳು
ಈ ಯೋಜನೆಯು ಕರ್ನಾಟಕಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ದೃಷ್ಟಿಯಿಂದ ಹಲವು ಪ್ರಯೋಜನಗಳನ್ನು ತರಲಿದೆ. ನಗರದ ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಮೂಲಕ ಲ್ಯಾಂಡ್‌ಫಿಲ್‌ಗಳಿಗೆ (ಕಸದ ಡಂಪಿಂಗ್ ಯಾರ್ಡ್) ಕಳುಹಿಸುವ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ನಗರದ ತ್ಯಾಜ್ಯವನ್ನು ವಾಣಿಜ್ಯ ಮೌಲ್ಯವುಳ್ಳ ಶುದ್ಧ ಇಂಧನ ಮತ್ತು ಸಾವಯವ ಕೃಷಿ ಗೊಬ್ಬರವಾಗಿ ಪರಿವರ್ತಿಸಿ ವೃತ್ತಾಕಾರದ ಆರ್ಥಿಕತೆಗೆ ಬಲ ತುಂಬಲಿದೆ. ಪ್ರಧಾನಮಂತ್ರಿಗಳ ‘ಸ್ವಚ್ಛ ಭಾರತ ಮಿಷನ್’, ‘ಆತ್ಮನಿರ್ಭರ ಭಾರತ’ ಮತ್ತು ಹಸಿರು ಇಂಧನ ಪರಿವರ್ತನೆಯ ರಾಷ್ಟ್ರೀಯ ಗುರಿಗಳಿಗೆ ಈ ಯೋಜನೆ ನೇರ ಕೊಡುಗೆ ನೀಡಲಿದೆ. ಗೇಲ್ ಸಂಸ್ಥೆಯ ಈ ಯೋಜನೆಯು ಭವಿಷ್ಯದಲ್ಲಿ ದೇಶದ ಇತರ ಮಹಾನಗರಗಳಿಗೂ ಮಾದರಿಯಾಗಬಲ್ಲ ಅತ್ಯುತ್ತಮ ‘ವೇಸ್ಟ್ ಟು ಸಿಬಿಜಿ’ (ತ್ಯಾಜ್ಯದಿಂದ ಅನಿಲ) ಮೂಲಸೌಕರ್ಯ ಮಾದರಿಯಾಗಿ ರೂಪುಗೊಳ್ಳಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.

